ಲೋಕಸಭೆಯಲ್ಲೂ ಸಿಎಎ ಗದ್ದಲ: ಚರ್ಚೆಗೆ ಅವಕಾಶ ಕಲ್ಪಿಸುವಂತೆ ಸರ್ಕಾರದ ಮನವಿ

ನವದೆಹಲಿ, ಫೆ .3,ಲೋಕಸಭೆಯಲ್ಲಿ ಪೌರತ್ವ ತಿದ್ದುಪಡಿ ಮಸೂದೆ ವಿರುದ್ಧ ಕಾಂಗ್ರೆಸ್, ಡಿಎಂಕೆ  ಮತ್ತು ತೃಣಮೂಲ ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷಗಳು ನಡೆಸಿದ ಪ್ರತಿಭಟನೆಯ ಮಧ್ಯೆಯೇ,  ಚರ್ಚೆಗೆ ಅವಕಾಶ ನೀಡುವಂತೆ ಪ್ರತಿಪಕ್ಷ ಸದಸ್ಯರಲ್ಲಿ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಮನವಿ  ಮಾಡಿದರು.ರಾಷ್ಟ್ರಪತಿಯವರ ಭಾಷಣದ ಮೇಲಿನ ಯಾವುದೇ ಸಮಸ್ಯೆಯನ್ನು ಬೇಕಾದರೂ ಪ್ರಸ್ತಾಪಿಸಬಹುದು. ಚರ್ಚೆಗೆ ಅವಕಾಶ ನೀಡುವಂತೆ ನಾನು ನಿಮ್ಮಲ್ಲಿ ಮನವಿ ಮಾಡುತ್ತಿದ್ದೇನೆ ಎಂದು ಪ್ರತಿಪಕ್ಷಗಳ ಘೋಷಣೆಗಳ ಮಧ್ಯೆಯೇ ಅವರಲ್ಲಿ ಮನವಿ ಮಾಡಿದರು.

ಕಾಂಗ್ರೆಸ್ ಮತ್ತು  ಡಿಎಂಕೆ ಸದಸ್ಯರು ಸದನದ ಬಾವಿಗಿಳಿದು ಘೋಷಣೆಗಳನ್ನು ಕೂಗಿದರು.  'ಸಂವಿಧಾನವನ್ನು  ಉಳಿಸಿ', 'ಸಿಎಎ, ಎನ್‌ಪಿಆರ್, ಎನ್‌ಆರ್‌ಸಿ ಬೇಡ" ಮತ್ತು 'ಸಂವಿಧಾನವನ್ನು ಉಳಿಸಿ' ಎಂಬ ಬರಹಗಳುಳ್ಳ ಫಲಕಗಳನ್ನು ಪ್ರದರ್ಶಿಸಿದರು. ತೃಣಮೂಲ ಕಾಂಗ್ರೆಸ್ ಸದಸ್ಯರು ತಮ್ಮ ಆಸನಗಳಲ್ಲಿ ಎದ್ದು ನಿಂತು ಪ್ರತಿಭಟನೆ ನಡೆಸಿದರು.

ಸಿಎಎ ಬಗ್ಗೆ  ಪ್ರಸ್ತಾಪಿಸಿದ ಕಾಂಗ್ರೆಸ್ ಸದನದ ನಾಯಕ ಅಧೀರ್ ರಂಜನ್ ಚೌಧರಿ, ಭಾರತದ ಸಂವಿಧಾನದ  ಪ್ರತಿಗಳು, ರಾಷ್ಟ್ರಧ್ವಜ ಮತ್ತು ರಾಷ್ಟ್ರಗೀತೆ ಹಾಡುವ ಜನರ ಮೇಲೆ ಗುಂಡಿಕ್ಕಲಾಗುತ್ತಿದೆ ಎಂದು ಆರೋಪಿಸಿದರು."ಜನರ ಮೇಲೆ ನಿರ್ದಯವಾಗಿ ಗುಂಡು ಹಾರಿಸಲಾಗುತ್ತಿದೆ" ಎಂದು ಅವರು ದೂರಿದರು. ಸಿಎಎ ಕುರಿತು  ಈಗಾಗಲೇ ಮಧ್ಯರಾತ್ರಿ 12 ರವರೆಗೆ ಚರ್ಚೆ ನಡೆದಿದ್ದು, ನಿಯಮಗಳ ಪ್ರಕಾರ ಮತ್ತೆ ಚರ್ಚೆ  ನಡೆಯಲು ಅವಕಾಶವಿಲ್ಲ ಎಂದು ಸ್ಪೀಕರ್ ಓಂ ಬಿರ್ಲಾ ಹೇಳಿದರು.

ಜನರ ಮಾತುಗಳನ್ನು ನೀವು ಗುಂಡುಗಳಿಂದ ತಡೆಯಲು ಸಾಧ್ಯವಿಲ್ಲ ಎಂದು ಚೌದರಿ ತಿರುಗೇಟು ನೀಡಿದರು. ಶೂನ್ಯವೇಳೆಯಲ್ಲಿ ಮಾತನಾಡಲು ಸ್ಪೀಕರ್ ಅವರು ಸದಸ್ಯರ ಹೆಸರನ್ನು ಪ್ರಸ್ತಾಪಿಸಿದರು. ಆದರೆ ಗದ್ದಲದಿಂದಾಗಿ ಯಾರು ಏನು ಹೇಳುತ್ತಿದ್ದಾರೆ ಎಂಬುದು ಕೇಳಿಸಲೇ ಇಲ್ಲ.ವಿರೋಧ ಪಕ್ಷಗಳ  ಸದಸ್ಯರಿಗೆ ಮನವಿ ಮಾಡಿದ ಸ್ಪೀಕರ್, '' ನೀವು ಭಾರತವನ್ನು ಉಳಿಸಲು ಬಯಸಿದರೆ, ದೊಡ್ಡ  ವಿಷಯಗಳ ಬಗ್ಗೆ ಮಾತನಾಡಿ. ಪ್ರಮುಖ ಸಮಸ್ಯೆಗಳನ್ನು ಪಟ್ಟಿ ಮಾಡಲಾಗಿದೆ, ಅವುಗಳ ಮೇಲೆ  ಮಾತನಾಡಿ  ಎಂದು ಹೇಳಿದರು.

ಪ್ರಶ್ನೋತ್ತರ ಅವಧಿಯ ಕೊನೆಯ ಪ್ರಶ್ನೆಯ ಸಮಯದಲ್ಲಿ, ಎಐಎಂಐಎಂ ನಾಯಕ ಅಸದುದ್ದೀನ್ ಉವೈಸಿ, ಜಾಮಿಯಾ  ಮಿಲ್ಲಿಯಾ ಇಸ್ಲಾಮಿಯಾದಲ್ಲಿ ಹಿಂಸಾಚಾರದ ವಿಷಯವನ್ನು ಪ್ರಸ್ತಾಪಿಸಿದರು. ಒಂದು ಮಗು ಕಣ್ಣು  ಕಳೆದುಕೊಂಡಿದೆ, ಹುಡುಗಿಯರ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಹೇಳಿದರು.ಇಂದು ಬೆಳಗ್ಗೆ ಲೋಕಸಭೆಯ ಕಲಾಪ ಆರಂಭಗೊಳ್ಳುತ್ತಿದ್ದಂತೆ ವಿರೋಧ ಪಕ್ಷಗಳು ಸಿಎಎ, ಎನ್‌ಪಿಆರ್ ಮತ್ತು ಎನ್‌ಆರ್‌ಸಿ ವಿರುದ್ಧ  ತಮ್ಮ ಪ್ರತಿಭಟನೆಯನ್ನು ಆರಂಭಿಸಿದರು. ಇದು ಪ್ರಶ್ನೋತ್ತರ ಅವಧಿಯಲ್ಲೂ ಮುಂದುವರೆಯಿತು. ವಿರೋಧ ಪಕ್ಷಗಳ ಕೋಲಾಹಲ ಮುಂದುವರಿಯಿತು. ಇದರಿಂದ ಸ್ಪೀಕರ್ ಅವರು ಕಲಾಪವನ್ನು 13.30ರವರೆಗೆ ಭೋಜನವಿರಾಮಕ್ಕಾಗಿ ಮುಂದೂಡಿದರು.