ಮುಂಬೈ, ಫೆ15, ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ) ವಿರುದ್ಧ ಪ್ರತಿಭಟನೆ ನಡೆಸುತ್ತಿರುವವರನ್ನು 'ದೇಶದ್ರೋಹಿ'ಗಳೆಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಬಾಂಬೆ ಹೈಕೋರ್ಟಿನ ಔರಂಗಾಬಾದ್ ಪೀಠ ಅಭಿಪ್ರಾಯಪಟ್ಟಿದೆ. ಬೀಡ್ ಜಿಲ್ಲೆಯ ಮಜಲಗಾಂವ್ ಈದ್ಗಾ ಮೈದಾನದಲ್ಲಿ ಸಿಎಎ ವಿರುದ್ಧ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸಲು ಅನುಮತಿ ನಿರಾಕರಿಸಿದ್ದ ಮ್ಯಾಜಿಸ್ಟ್ರೇಟ್ ಆದೇಶ ಹಾಗೂ ಪೊಲೀಸ್ ಆದೇಶ ಪ್ರಶ್ನಿಸಿ ಇಫ್ತಿಕಾರ್ ಶೇಖ್ ಎಂಬವರು ಸಲ್ಲಿಸಿದ್ದ ಮನವಿ ವಿಚಾರಣೆ ಸಮಯದಲ್ಲಿ ಕೋರ್ಟ್ ಈ ಅಭಿಪ್ರಾಯಪಟ್ಟಿದೆ. ನ್ಯಾಯಮೂರ್ತಿಗಳಾದ ಟಿ.ವಿ.ನಲವಡೆ ಹಾಗೂ ಎಂ.ಜಿ.ಸೇವಿಲ್ಕರ್ ಅವರನ್ನೊಳಗೊಂಡ ವಿಭಾಗೀಯ ಪೀಠ ಮೇಲಿನ ಅಭಿಪ್ರಾಯ ವ್ಯಕ್ತಪಡಿಸಿ ಅಲ್ಲದೆ ಅಪೀಲುದಾರರಿಗೆ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸಲು ಅನುಮತಿ ನೀಡಿದೆ. ಕಾಯ್ದೆ ವಿರುದ್ಧದ ತಮ್ಮ ನಿಲುವನ್ನು ವ್ಯಕ್ತ ಪಡಿಸಲು ಶಾಂತಿಯುತ ಪ್ರತಿಭಟನೆಯನ್ನಷ್ಟೇ ನಡೆಸುವುದಾಗಿ ಅರ್ಜಿದಾರರು ಮನವಿ ಮಾಡಿದ್ದಾರೆ .ಇಂತಹ ಜನರು ಕಾಯ್ದೆ ವಿರೋಧಿಸಲಿದ್ದಾರೆ ಎಂಬ ಏಕೈಕ ಕಾರಣಕ್ಕೆ ಅವರನ್ನು ದೇಶದ್ರೋಹಿಗಳು, ಅಥವಾ ದೇಶವಿರೋಧಿಗಳೆಂದು ಕರೆಯಲು ಆಗದೂ ಎಂದೂ ನ್ಯಾಯಾಲಯ ಹೇಳಿದೆ.