ಸಿಎಎ, ಎನ್‌ಆರ್‌ಸಿ ವಿರುದ್ಧದ ಜನಾಂದೋಲನ ಎಲ್ಲರೂ ಒಂದಾಗಿ ಮುನ್ನಡೆಸೋಣ: ಸಿಪಿಐಎಂ ಪಾಲಿಟ್‌ ಬ್ಯುರೊ

ನವದೆಹಲಿ, ಜ. 13 ಎನ್‌.ಆರ್‌.ಸಿ.ಯನ್ನು ಒಪ್ಪುವುದಿಲ್ಲ ಎಂದು ಪ್ರಕಟಿಸಿರುವ ಮುಖ್ಯಮಂತ್ರಿಗಳು ತಮ್ಮ ರಾಜ್ಯಗಳಲ್ಲಿ ಎನ್‌ಪಿಆರ್ ಪ್ರಕ್ರಿಯೆಗೆ ತಡೆ ಹಾಕಬೇಕು, ಹೀಗೆ ಮಾಡುವ ಮೂಲಕ ಮಾತ್ರವೇ ಅವರು ಎನ್‌ಆರ್‌ಸಿ ಜಾರಿಯಾಗದಂತೆ ನಿಲ್ಲಿಸಲು ಸಾಧ್ಯ. ಸಿಎಎ-ಎನ್‌ಪಿಆರ್-ಎನ್‌ಆರ್‌ಸಿ ವಿರುದ್ಧ ದೇಶಾದ್ಯಂತ ಶಾಂತಿಯುತ ಪ್ರತಿಭಟನಾ ಚಳವಳಿ ಬೆಳೆಯುತ್ತಿದ್ದು,  ಈ ಆಂದೋಲನವನ್ನು ಒಂದುಗೂಡಿ ಮುಂದಕ್ಕೆ ಕೊಂಡೊಯ್ಯಬೇಕು ಎಂದು ಎಲ್ಲ ಜಾತ್ಯತೀತ ಮತ್ತು ಜನವಾದಿ ಶಕ್ತಿಗಳಿಗೆ ಸಿಪಿಐಎಂ ಪಾಲಿಟ್‌ ಬ್ಯುರೊ ಕರೆ ನೀಡಿದೆ.

ಜನವರಿ 11 ಮತ್ತು 12ರಂದು ದಿಲ್ಲಿಯಲ್ಲಿ ನಡೆದ ಪಾಲಿಟ್‌ ಬ್ಯುರೊ ಸಭೆಯ ನಂತರ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ಈ ವಿಷಯ ತಿಳಿಸಲಾಗಿದೆ.ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ) ವಿರುದ್ಧ ಪ್ರತಿಭಟನೆಗಳು ಮತ್ತು ಸಂವಿಧಾನ ಹಾಗೂ ಜಾತ್ಯತೀತತೆಯ ರಕ್ಷಣೆಗಾಗಿ ಚಳವಳಿ ಬೆಳೆಯುತ್ತಿರುವುದರ ಬಗ್ಗೆ ಅದು ಹರ್ಷ ವ್ಯಕಪಡಿಸಿದೆ. ಸಿಎಎ ಒಂದು ಧರ್ಮದ ಮಾನದಂಡವನ್ನು ಸೇರಿಸುವುದರ ಮೂಲಕ ಸಂವಿಧಾನದಲ್ಲಿ ಪ್ರತಿಷ್ಠಾಪಿತಗೊಂಡಿರುವ ಪೌರತ್ವದ ಜಾತ್ಯತೀತ ಪರಿಕಲ್ಪನೆಯನ್ನು ಶಿಥಿಲಗೊಳಿಸುತ್ತದೆ ಎಂದು ಅದು ಪುನರುಚ್ಚರಿಸಿದೆ.

ಸಿಎಎ-ಎನ್‌ಪಿಆರ್-ಎನ್‌ಆರ್‌ಸಿ ವಿರುದ್ಧ ಸಾಮೂಹಿಕ ಆಂದೋಲನದಲ್ಲಿ ವಿದ್ಯಾರ್ಥಿಗಳು, ಯುವಜನರು ಮತ್ತು ಸಾಮಾನ್ಯ ನಾಗರಿಕರು ಇದ್ದಾರೆ. ಇವರಿಗೆ ಸಂವಿಧಾನ ಮತ್ತು ಅದರ ಜನವಾದಿ-ಜಾತ್ಯತೀತ ಮೌಲ್ಯಗಳಿಗೆ ಇದರಿಂದ ಬೆದರಿಕೆ ಬಂದಿರುವುದು ಸ್ಪಷ್ಟವಾಗಿ ಕಾಣುತ್ತಿದೆ. ಕಳೆದ ಒಂದು ತಿಂಗಳಲ್ಲಿ ದೇಶದ ಎಲ್ಲ ಭಾಗಗಳಲ್ಲೂ ಪ್ರತಿದಿನ ಪ್ರತಿಭಟನೆಗಳು ನಡೆಯುತ್ತಿವೆ.  ಜಾಮಿಯಾ ಮಿಲ್ಲಿಯಾ  ಮತ್ತು ಅಲಿಘಡ್ ಮುಸ್ಲಿಂ ವಿಶ್ವವಿದ್ಯಾಲಯ ಕ್ಯಾಂಪಸ್‌ಗಳಲ್ಲಿ ಶಾಂತಿಯುತ ಪ್ರತಿಭಟನೆಗಳ ಮೇಲೆ ನಡೆದ ಪಾಶವೀ ದಮನ ಮತ್ತು ಪೊಲೀಸ್ ದೌರ್ಜನ್ಯಗಳನ್ನು ಪಾಲಿಟ್‌ ಬ್ಯುರೊ ಬಲವಾಗಿ ಖಂಡಿಸಿದೆ ಎಂದು ಹೇಳಿಕೆ ತಿಳಿಸಿದೆ.

ಸರಕಾರ ಪ್ರತಿಭಟನಕಾರರ ಮೇಲೆ ಹೇರಿರುವ ಸುಳ್ಳು ಕೇಸುಗಳನ್ನೆಲ್ಲ ಹಿಂಪಡೆಯಬೇಕು, ಬಂಧಿಸಿರುವವರನ್ನು , ಜೈಲಿನಲ್ಲಿರುವವರನ್ನು ತಕ್ಷ ಣ ಬಿಡುಗಡೆ ಮಾಡಬೇಕು ಎಂದು ಅದು ಆಗ್ರಹಿಸಿದೆ.ಉತ್ತರಪ್ರದೇಶದಲ್ಲಿ ಶಾಂತಿಯುತ ಪ್ರತಿಭಟನಕಾರರ ಮೇಲೆ, ನಿರ್ದಿಷ್ಟವಾಗಿ ಮುಸ್ಲಿಂ ಸಮುದಾಯಕ್ಕೆ ಸೇರಿದವರ ಮೇಲೆ ಅತ್ಯಂತ ಕ್ರೂರ ಹಲ್ಲೆ, ದೌರ್ಜನ್ಯ ನಡೆದಿದೆ. ಪೊಲೀಸ್ ಗೋಲಿಬಾರ್‌ನಿಂದ 25ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. ನೂರಾರು ಮನೆಗಳಲ್ಲಿ ದಾಂಧಲೆ ನಡೆಸಲಾಗಿದೆ. ಇವೆಲ್ಲವೂ ಮುಖ್ಯಮಂತ್ರಿ ಆದಿತ್ಯನಾಥ್ ಅವರ ನೇರ ಕುಮ್ಮಕ್ಕಿನಿಂದ ನಡೆಯುತ್ತಿವೆ ಎಂದು ಸಿಪಿಐಎಂ ಆರೋಪಿಸಿದೆ.

ಸಂವಿಧಾನದ 370ನೇ ವಿಧಿ ರದ್ದುಗೊಳಿಸಿದ ಐದು ತಿಂಗಳುಗಳ ನಂತರವೂ ಕಾಶ್ಮೀರದ ಜನತೆ ವಿವಿಧ ಹಕ್ಕುಗಳು ಮತ್ತು ಸ್ವಾತಂತ್ರ್ಯಗಳಿಂದ ವಂಚಿತರಾಗಿದ್ದಾರೆ. ನೂರಾರು ಮುಖಂಡರು ಮತ್ತು ಕಾರ್ಯಕರ್ತರು ಬಂಧನದಲ್ಲಿದ್ದಾರೆ, ಸಭೆ ಸೇರುವ ಹಕ್ಕನ್ನು ನಿರಾಕರಿಸಲಾಗಿದೆ, ಮತ್ತು ಇಂಟರ್ನೆಟ್ ಸಂಪರ್ಕವನ್ನು ಸ್ಥಗಿತಗೊಳಿಸಲಾಗಿದೆ ಎಂದು ಸಿಪಿಐಎಂ ಪಾಲಿಟ್ ಬ್ಯುರೋ ಹೇಳಿದೆ.ಸುಪ್ರಿಂ ಕೋರ್ಟ್ ತೀರ್ಪಿನ ಆದೇಶದ ಹಿನ್ನೆಲೆಯಲ್ಲಿ ಇಂಟರ್ನೆಟ್ ಸಂಪರ್ಕವನ್ನು ಮತ್ತೆ ಪುನರ್ ಸ್ಥಾಪಿಸಬೇಕು ಎಂದು ಆಗ್ರಹಿಸಿರುವ ಪಾಲಿಟ್‌ಬ್ಯುರೊ, ಎಲ್ಲ ನಿರ್ಬಂಧಗಳನ್ನು ತೆಗೆಯಬೇಕು, ಮತ್ತು ರಾಜಕೀಯ ಮುಖಂಡರನ್ನು ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದೆ.

ಜೆಎನ್‌ಯು ಮೇಲೆ ದಾಳಿ-ತನಿಖೆಯಲ್ಲಿ ದೆಹಲಿ ಪೊಲೀಸರ ಪಕ್ಷಪಾತಎಬಿವಿಪಿ-ಆರೆಸ್ಸೆಸ್ ಪುಂಡರು ಜನವರಿ 5ರಂದು ನಡೆಸಿದ ಹಿಂಸಾಚಾರವನ್ನು ಪಾಲಿಟ್‌ ಬ್ಯುರೊ ಖಂಡಿಸಿದೆ. ಈ ಹಿಂಸಾಚಾರದಲ್ಲಿ ಜೆಎನ್‌ಯು ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಆಯಿಷಿ ಘೋಷ್ ಸೇರಿದಂತೆ 29 ವಿದ್ಯಾರ್ಥಿಗಳು ಮತ್ತು ಅಧ್ಯಾಪಕರು ಗಾಯಗೊಂಡಿದ್ದಾರೆ. ದಿಲ್ಲಿ ಪೊಲೀಸರು ದಾಂಧಲೆ ನಡೆಸುತ್ತಿರುವುದನ್ನು ಕೈಕಟ್ಟಿ ನಿಂತು ನೋಡುತ್ತಿರುವುದು, ನಂತರ ಅವರಿಗೆ ಕ್ಯಾಂಪಸ್‌ನಿಂದ ಹೊರ ಹೋಗಲು ಅನುಕೂಲ ಮಾಡಿಕೊಡುತ್ತಿರುವ ದೃಶ್ಯ ಆಘಾತಕಾರಿ ಎಂದು ಅದು ಹೇಳಿದೆ.ದಿಲ್ಲಿ ಪೋಲೀಸರ ತನಿಖೆ ಪಕ್ಷಪಾತದಿಂದ ಕೂಡಿದೆ, ಅದು ವಿದ್ಯಾರ್ಥಿ ಸಂಘಕ್ಕೆ ಸೇರಿದ ವಿದ್ಯಾರ್ಥಿ ಕಾರ್ಯಕರ್ತರ ಮೇಲೆಯೇ ಗುರಿ ಮಾಡಿದೆಯೇ ಹೊರತು ನಿಜವಾದ ಅಪರಾಧಿಗಳ ಮೇಲಲ್ಲ. ಮಾನವ ಸಂಪನ್ಮೂಲ ಅಭಿವೃದ್ಧಿ ಮಂತ್ರಾಲಯ ಮಧ್ಯಪ್ರವೇಶಿಸಬೇಕು, ತೀವ್ರ ಶುಲ್ಕ ಏರಿಕೆಗಳನ್ನು ರದ್ದು ಮಾಡಬೇಕು ಎಂದು ಪಾಲಿಟ್‌ಬ್ಯುರೊ ಆಗ್ರಹಿಸಿದೆ. ಜನವರಿ 17-19ರಂದು ತಿರುವನಂತಪುರದಲ್ಲಿ ಕೇಂದ್ರ ಸಮಿತಿ ಸಭೆಸಿಪಿಐ(ಎಂ) ಕೇಂದ್ರ ಸಮಿತಿಯ ಸಭೆ ತಿರುವನಂತಪುರದಲ್ಲಿ ಜನವರಿ 17 ರಿಂದ19ರ ವರೆಗೆ ನಡೆಯಲಿದೆ, ಅದರ ಮುಂದೆ ಸಲ್ಲಿಸಬೇಕಾದ ರಾಜಕೀಯ ಬೆಳವಣಿಗೆಗಳ ಕುರಿತ ಕರಡು ವರದಿಯನ್ನು ಚರ್ಚಿಸಲಾಯಿತು ಎಂದು ಪಾಲಿಟ್‌ಬ್ಯುರೊ ಹೇಳಿಕೆ ತಿಳಿಸಿದೆ.