ಕೋಲ್ಕತಾ, ಜ. 9 ತಾವು ಜೀವಂತವಾಗಿರುವವರೆಗೂ ಜನರಿಗಾಗಿ ಕೆಲಸ ಮಾಡುತ್ತೇನೆ ಮತ್ತು ಸಿಎಎ-ಎನ್ಆರ್ಸಿ-ಎನ್ಪಿಆರ್ ಅನ್ನು ಜಾರಿ ಮಾಡಲು ಬಿಡುವುದಿಲ್ಲ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪುನರುಚ್ಚರಿಸಿದ್ದಾರೆ.
ಸಂವಿಧಾನ ವಿರೋಧಿಯಾಗಿರುವ ಪೌರತ್ವ ತಿದ್ದುಪಡಿ ಮಸೂದೆ (ಸಿಎಬಿ) ಮತ್ತು ರಾಷ್ಟ್ರೀಯ ನಾಗರಿಕರ ನೋಂದಣಿ (ಎನ್ಆರ್ಸಿ) ವಿರುದ್ಧ ಇಂದು ಉತ್ತರ 24 ಪರಗಣದ ಮಧ್ಯಮ್ ಗ್ರಾಮ್ನಲ್ಲಿ ಏರ್ಪಡಿಸಿದ್ದ ಬೃಹತ್ ಜಾಥಾ ಹಾಗೂ ಬಾರಸತ್ ಕಚಾರಿ ಮೈದಾನದಲ್ಲಿ ನಡೆದ ಸಮಾವೇಶವನ್ನು ಉದ್ದೇಶಿಸಿ ಅವರು ಮಾತನಾಡಿದರು. ಜಾಥಾದ ನೇತೃತ್ವವನ್ನು ಮಮತಾ ಬ್ಯಾನರ್ಜಿ ವಹಿಸಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ನಾನು ಜೀವಂತವಾಗಿರುವವರೆಗೂ ಜನರಿಗಾಗಿ ಕೆಲಸ ಮಾಡುತ್ತೇನೆ. ಸಿಎಎ-ಎನ್ಆರ್ಸಿ-ಎನ್ಪಿಆರ್ ಅನ್ನು ನಾನು ಜಾರಿ ಮಾಡಲು ಅನುಮತಿ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
"ಸಿಎಎ ವಿರೋಧಿ ಪ್ರತಿಭಟನೆಗಳು ಬಂಗಾಳದಲ್ಲಿ ಪ್ರಾರಂಭವಾದವು. ಪ್ರಜಾಪ್ರಭುತ್ವವಾಗಿ, ಶಾಂತಿಯುತವಾಗಿ ಮಾನವೀಯ ರೀತಿಯಲ್ಲಿ ಪ್ರತಿಭಟಿಸುವ ಮೂಲಕ ಅದನ್ನು ಮುಂದುವರಿಸೋಣ" ಎಂದು ಅವರು ಸಲಹೆ ನೀಡಿದರು.
ತೃಣಮೂಲ ಛಾತ್ರಾ ಪರಿಷತ್ ನಾಳೆಯಿಂದ ರಾಣಿ ರಶ್ಮೋನಿ ಅವೆನ್ಯೂದಲ್ಲಿ ಅನಿರ್ದಿಷ್ಟ ಧರಣಿಯನ್ನು ಆಯೋಜಿಸಲಿದೆ ಅವರು ಘೋಷಿಸಿದರು.
ನಾವು ಎನ್ಆರ್ಸಿ ಮತ್ತು ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಜಾರಿ ಮಾಡುವುದಿಲ್ಲ ಎಂದು ನಾವು ಸೆಪ್ಟೆಂಬರ್, 2019 ರಲ್ಲಿ ರಾಜ್ಯ ವಿಧಾನಸಭೆಯಲ್ಲಿ ನಿರ್ಣಯ ಅಂಗೀಕರಿಸಿದ್ದೇವೆ ಎಂದು ಬ್ಯಾನರ್ಜಿ ಮಾಹಿತಿ ನೀಡಿದರು.
"ನಾವು ಜಾತಿ, ಮತ ಅಥವಾ ಧರ್ಮದ ಆಧಾರದಲ್ಲಿ ಜನರ ಮಧ್ಯೆ ತಾರತಮ್ಯ ಮಾಡುವುದಿಲ್ಲ" ಎಂದು ಅವರು ಸ್ಪಷ್ಟಪಡಿಸಿದರು.
ಒಗ್ಗಟ್ಟಿನ ಭಾರತ, ಒಗ್ಗಟ್ಟಿನ ಬಾಂಗ್ಲಾದ ಸ್ಫೂತರ್ಿಯನ್ನು ನಾವು ನಂಬುತ್ತೇವೆ. ಸರ್ವ ಧರ್ಮ ಸಮಾನತೆ ನಮ್ಮ ಧ್ಯೇಯವಾಕ್ಯ. ನಾವು ಎಲ್ಲರಿಗೂ ಒಟ್ಟಾಗಿ ಕೆಲಸ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಹೇಳಿದರು.
"ಕೆಲವರು ತಪ್ಪು ಮಾಹಿತಿಯನ್ನು ಹರಡುತ್ತಿದ್ದಾರೆ. ಅವರ ಬಲೆಗೆ ಬೀಳಬೇಡಿ" ಎಂದು ಮುಖ್ಯಮಂತ್ರಿ ಎಚ್ಚರಿಸಿದರು.
"ನಾವು ನಿರಾಶ್ರಿತರಿಗೆ ಭೂ ಹಕ್ಕುಗಳನ್ನು ನೀಡಿದ್ದೇವೆ. ನಿರಾಶ್ರಿತರ ವಸಾಹತುಗಳನ್ನೂ ನಾವು ಗುರುತಿಸಿದ್ದೇವೆ. ಸರ್ಕಾರಿ ಭೂಮಿಯಲ್ಲಿರುವ 94 ನಿರಾಶ್ರಿತರ ವಸಾಹತುಗಳ ನಿವಾಸಿಗಳಿಗೆ ನಾವು ಈಗಾಗಲೇ ಭೂ ಪಟ್ಟಾಗಳನ್ನು ನೀಡಿದ್ದೇವೆ. ಕೇಂದ್ರದ ಭೂಮಿಯಲ್ಲಿರುವ ವಸಾಹತುಗಳನ್ನು ಸಹ ಗುರುತಿಸಲು ನಾವು ಕಾನೂನು ಜಾರಿಗೆ ತಂದಿದ್ದೇವೆ ಎಂದು ಮಮತಾ ಬ್ಯಾನರ್ಜಿ ಹೇಳಿದರು.
"ಕೆಲವು ಧಾರ್ಮಿಕ ಸಂಸ್ಥೆಗಳು ಮಾತುವಾಸ್ ಪಂಗಡಕ್ಕೆ ಬೇಷರತ್ತಾದ ಪೌರತ್ವ ನೀಡಲಾಗುವುದು ಎಂದು ಹೇಳುತ್ತಿವೆ. ಆದರೆ ಅವರು ಈಗಾಗಲೇ ಈ ದೇಶದ ಪ್ರಜೆಗಳು. ಅವರು 1964 ರಿಂದ ಮತ ಚಲಾಯಿಸುತ್ತಿದ್ದಾರೆ ಎಂದು ಅವರು ತಿರುಗೇಟು ನೀಡಿದರು.
"ಪೌರತ್ವ ಪಡೆಯಲು, ನಿಮ್ಮನ್ನು 5 ವರ್ಷಗಳ ಕಾಲ ವಿದೇಶಿಯರೆಂದು ಘೋಷಿಸಲಾಗುತ್ತದೆ. ಆದ್ದರಿಂದ, ಅವರು ನಿಮ್ಮ ಪೌರತ್ವವನ್ನು ಮತ್ತು ನೀವು ಪಡೆಯುವ ಎಲ್ಲಾ ಸೇವೆಗಳನ್ನು ಕಸಿದುಕೊಳ್ಳುತ್ತಾರೆ" ಎಂದು ಅವರು ಎಚ್ಚರಿಸಿದರು.
"ಅವರು ಜನರನ್ನು ಮೋಸಗೊಳಿಸಲು ಬಯಸುತ್ತಾರೆ. ಬಡ ಜನರು ಸರದಿಯಲ್ಲಿ ನಿಲ್ಲಬೇಕಾಗುತ್ತದೆ. ಅವರು ಜನರಲ್ಲಿ ತಾರತಮ್ಯ ಮಾಡುತ್ತಾರೆ" ಎಂದು ಅವರು ಹೇಳಿದರು.
"ನಾವೆಲ್ಲರೂ ದೇಶದ ಪ್ರಜೆಗಳು. ನಾವೆಲ್ಲರೂ ಚುನಾವಣೆಯಲ್ಲಿ ಮತ ಚಲಾಯಿಸಿದ್ದೇವೆ. ರಾಜಕೀಯ ಪಕ್ಷಗಳಿಗೆ ಜನರಿಗೆ ಹಾನಿ ಮಾಡುವ ಹಕ್ಕಿಲ್ಲ. ಪ್ರತಿಭಟನೆಗಳು ಶಾಂತಿಯುತವಾಗಿರಬೇಕು. ರೈಲ್ವೆ ಹಳಿಗಳಲ್ಲಿ ಬಾಂಬುಗಳನ್ನು ಸ್ಫೋಟಿಸುವುದು, ಬಸ್ಸುಗಳಿಗೆ ಬೆಂಕಿ ಹಚ್ಚುವುದನ್ನು ಸಹಿಸಲು ಸಾಧ್ಯವಿಲ್ಲ. ಪ್ರತಿಭಟನೆ ಶಾಂತಿಯುತವಾಗಿರಬೇಕು. ಕೆಲವರು ಕೋಮುವಾದದ ವಿಷ ಬೀಜ ಬಿತ್ತಲು ಪ್ರಯತ್ನಿಸುತ್ತಿದ್ದಾರೆ. ಅವರ ಬಗ್ಗೆ ಎಚ್ಚರದಿಂದಿರಿ ಎಂದು ಮಮತಾ ಬ್ಯಾನಜರ್ಿ ಹೇಳಿದರು.