ನವದೆಹಲಿ, ಸೆ. 22 ಕರ್ನಾಟಕ ರಾಜ್ಯದ 15 ಸ್ಥಾನಗಳಿಗೆ ಉಪಚುನಾವಣೆ ಘೋಷಣೆಯಾದ ಮರುದಿನವೇ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ದೆಹಲಿಗೆ ಆಗಮಿಸಿ ಕೇಂದ್ರ ಗೃಹ ಸಚಿವ ಹಾಗೂ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರನ್ನು ಭೇಟಿ ಮಾಡಿದ್ದಾರೆ.
ಭಾನುವಾರ ಶಾ ಅವರನ್ನು ಭೇಟಿಯಾದ ನಂತರ ಯಡಿಯೂರಪ್ಪ, ರಾಜ್ಯದ ನೆರೆ ಪೀಡತರ ಸಂತ್ರಸ್ತರಿಗೆ ಹೆಚ್ಚಿನ ನೆರವು ಕೇಳುವ ಸಲುವಾಗಿ ಗೃಹ ಸಚಿವರನ್ನು ಭೇಟಿಯಾಗಿದ್ದಾಗಿ ತಿಳಿಸಿದ್ದಾರೆ. ರಾಜ್ಯ ಸರ್ಕಾರ ಕೇಂದ್ರದಿಂದ 2 ಸಾವಿರ ಕೋಟಿ. ರೂ. ಬೇಡಿಕೆಯಿಟ್ಟಿದೆ.
ಆದರೆ, ಪಕ್ಷದ ಮೂಲಗಳ ಪ್ರಕಾರ, ಅನರ್ಹ ಶಾಸಕರು ಹಾಗೂ ಉಪಚುನಾವಣೆಗಳ ಕುರಿತು ಯಡಿಯೂರಪ್ಪ ಅಮಿತ್ ಶಾ ಅವರೊಂದಿಗೆ ಮಹತ್ವದ ಚರ್ಚೆ ನಡೆಸಿದ್ದಾರೆ.
ಈ ನಡುವೆ, ಸುಪ್ರೀಂಕೋರ್ಟ, 17 ಕಾಂಗ್ರೆಸ್ ಹಾಗೂ ಜೆಡಿಎಸ್ ನ ಅನರ್ಹ ಶಾಸಕರ ಅರ್ಜಿಗಳನ್ನು ಸೋಮವಾರ ವಿಚಾರಣೆ ನಡೆಸಲಿದ್ದು, ಅನರ್ಹರು ಉಪಚುನಾವಣೆಯಲ್ಲಿ ಸ್ಪರ್ಧಿಸಲು ಅರ್ಹರೇ ಇಲ್ಲವೆ ಎಂಬುದು ತೀರ್ಮಾನವಾಗುವ ಸಾಧ್ಯತೆಯಿದೆ.
ಒಂದೊಮ್ಮೆ ಸುಪ್ರೀಂಕೋರ್ಟ್ ಅವರು ಚುನಾವಣೆಯಲ್ಲಿ ಸ್ಪರ್ಧಿಸಲು ಸಾಧ್ಯವಿಲ್ಲ ಎಂದು ತೀಪು ನೀಡಿದಲ್ಲಿ, ಅನರ್ಹರ ರಾಜಕೀಯ ಜೀವನ ಬಹುತೇಕ ಪತನವಾಗಲಿದೆ.
ಸದ್ಯ ರಾಜ್ಯದಲ್ಲಿ ಬಿಜೆಪಿ 104 ಶಾಸಕರನ್ನು ಹೊಂದಿದ್ದು, ಓರ್ವ ಪಕ್ಷೇತರ ಶಾಸಕರ ಬೆಂಬಲವನ್ನು ಕೂಡ ಹೊಂದಿದೆ. 15 ಕ್ಷೇತ್ರಗಳ ಉಪಚುನಾವಣೆ ಈ ಲೆಕ್ಕಾಚಾರವನ್ನು ಬದಲಾಯಿಸಿ, ಬಿಜೆಪಿಗೆ 111 ಸ್ಥಾನಗಳ ಬಹುಮತವನ್ನು ಒದಗಿಸುವ ನಿರೀಕ್ಷೆಯಿದೆ. ಸರ್ಕಾರ ಸ್ಥಿರವಾಗಿರಲು ಉಪಚುನಾವಣೆಯಲ್ಲಿ ಬಿಜೆಪಿ ಕನಿಷ್ಠ 6 ಸ್ಥಾನಗಳನ್ನಾದರೂ ಗೆಲ್ಲಬೇಕಿದೆ.