ಧಾರವಾಡದಲ್ಲಿ ಸೋಮವಾರದಿಂದ ವಾಣಿಜ್ಯ ವಹಿವಾಟು : ಜಗದೀಶ್ ಶೆಟ್ಟರ್

ಧಾರವಾಡ, ಮೇ 10, ಧಾರವಾಡ ಜಿಲ್ಲೆಯಲ್ಲಿ ಸೋಮವಾರದಿಂದ ವಾಣಿಜ್ಯ ವಹಿವಾಟು ನಡೆಸಲು ಅವಕಾಶ ಮಾಡಿಕೊಡಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಖಾತೆ ಸಚಿವ ಜಗದೀಶ್ ಶೆಟ್ಟರ್ ಹೇಳಿದ್ದಾರೆ.ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಲಾಕ್‌ಡೌನ್ ನಿಯಂತ್ರಣ ಕುರಿತ ಸಭೆಯಲ್ಲಿ ಅವರು ಮಾತನಾಡಿದರು. ಹುಬ್ಬಳ್ಳಿ ನಗರ ಹೊರತುಪಡಿಸಿ ಜಿಲ್ಲೆಯಾದ್ಯಂತ ಆರ್ಥಿಕ ಚಟುವಟಿಕೆಗಳು ಪ್ರಾರಂಭವಾಗಿದೆ. ಸೋಮವಾರದಿಂದ ಸೀಲ್‌ಡೌನ್ ಪ್ರದೇಶಗಳನ್ನು ಹೊರತುಪಡಿಸಿ ಉಳಿದೆಡೆ ವಾಣಿಜ್ಯ ವಹಿವಾಟು ನಡೆಸಲು ಆದೇಶ ಹೊರಡಿಸಲಾಗುವುದು ಎಂದು ಅವರು ಹೇಳಿದರು. ಮಾಲ್, ಮಾರುಕಟ್ಟೆ ಸಂಕೀರ್ಣ, ಬಾರ್ ಅಂಡ್ ರೆಸ್ಟೋರೆಂಟ್, ಜಿಮ್,  ಧಾರ್ಮಿಕ ಚಟುವಟಿಕೆಗಳು, ಸಭೆ ಸಮಾರಂಭಗಳ ಮೇಲಿನ ನಿರ್ಬಂಧ ಮುಂದುವರೆಯಲಿದೆ. ಈಗಾಗಲೇ ಜಿಲ್ಲೆಯಲ್ಲಿ ಶೇ.25ರಷ್ಟು ಕೈಗಾರಿಕಾ ಚಟುವಟಿಕೆಗಳು ಪುನರಾರಂಭವಾಗಿದೆ ಎಂದು ಜಗದೀಶ್ ಶೆಟ್ಟರ್ ಸ್ಪಷ್ಟಪಡಿಸಿದರು.