ಸೋಮವಾರದಿಂದ ಬಸ್ಸು ಸಂಚಾರ ಆರಂಭ: ಲಾಭಕ್ಕಿಂತ ನಷ್ಟವೇ ಹೆಚ್ಚು

ಹುಬ್ಬಳ್ಳಿ, ಮೇ 17, ಲಾಕ್ ಡೌನ್ 4.0  ಸಡಿಲಿಕೆಯಿಂದ ಸೋಮವಾರದಿಂದ ಬಸ್ಸು ಸಂಚಾರ ಆರಂಭವಾದರೂ, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ‌ ಲಾಭಕ್ಕಿಂತ ನಷ್ಟವು ಹೆಚ್ಚಾಗಲಿದೆ.
ಲಾಕ್ ಡೌನ್ ಗೂ ಮೊದಲು ಪ್ರತಿನಿತ್ಯ 70 ರಿಂದ 80 ಲಕ್ಷ ನಷ್ಟದಲ್ಲಿದ್ದ ಸಾರಿಗೆ ನಿಗಮ,ಇದುವರೆಗೆ ಸುಮಾರು 300 ಕೋಟಿಗೂ ಹೆಚ್ಚು ನಷ್ಟ ಅನುಭವಿಸಿದೆ.
ಇನ್ನು,ಕೊರೊನಾ ನಿಯಂತ್ರಣದ ಲಾಕ್ ಡೌನ್ ವೇಳೆ ಪ್ರತಿನಿತ್ಯ ಎನ್ ಡಬ್ಲುಕೆಆರ್ ಟಿಸಿ6 ಕೋಟಿ ರೂ.  ನಷ್ಟ ಅನುಭವಿಸಿತ್ತು. ಆದರೀಗ  ಬಸ್ಸುಗಳು ರಸ್ತೆಗಳಿದರೂ ಸಂಸ್ಥೆ ಪ್ರತಿನಿತ್ಯ 3 ಕೋಟಿ ರೂ.ನಷ್ಟ ಅನುಭವಿಸಲಿದೆ. ಏಕೆಂದರೆ, ಕೊರೊನಾ ನಿಯಂತ್ರಿಸಲು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕಾದ ಅಗತ್ಯವಿರುವುದರಿಂದ  ಶೇ. 50ರಷ್ಟು ಪ್ರಯಾಣಿಕರಿಗೆ ಮಾತ್ರ ಬಸ್ಸಿನಲ್ಲಿ ಪ್ರಯಾಣಿಸಲು ಅವಕಾಶ ಸಿಗಬಹುದು. ಇದರಿಂದ  ಪ್ರತಿ ತಿಂಗಳು 180 ರಿಂದ 200 ಕೋಟಿ ರೂ. ನಷ್ಟ ಸಾಧ್ಯತೆ ಇದೆ.
ಧಾರವಾಡ, ಗದಗ, ಹಾವೇರಿ, ಉತ್ತರಕನ್ನಡ, ಬೆಳಗಾವಿ, ವಿಜಪುರ, ಬಾಗಲಕೋಟ ಜಿಲ್ಲೆಯನ್ನೊಳಗೊಂಡ ನಿಗಮದ ವ್ಯಾಪ್ತಿಯಲ್ಲಿ ಪ್ರತಿನಿತ್ಯ 4600 ಬಸ್ಸುಗಳು,  ಸರಾಸರಿ 16 ಲಕ್ಷ ಕಿಲೋಮೀಟರ್ ಸಂಚಾರ ಮಾಡುತ್ತಿದ್ದವು. ಪ್ರತಿ ಕಿಲೋಮೀಟರ್ ಗೆ 36 ರೂ. ವೆಚ್ಚವಾಗುತ್ತಿತ್ತು.ಶೇಕಡಾ 50 ರಷ್ಟು ಪ್ರಯಾಣಿಕರಿಂದ ಪ್ರಯಾಣ ಮಾಡಿದರೆ, ಹೆಚ್ಚುವರಿಯಾಗಿ ಮತ್ತೆ 18 ರೂ. ವೆಚ್ಚ ತಗುಲಲಿದೆ. ಅಲ್ಲದೇ, ಬಿಆರ್ ಟಿಎಸ್ ಹುಬ್ಬಳ್ಳಿ ಧಾರವಾಡ ನಗರ ಸಾರಿಗೆ ಸಂಸ್ಥೆಯೂ  ಬಸ್ಸು ಸಂಚಾರಕ್ಕೆ ಸಿದ್ಧಗೊಂಡಿದೆ. ಬಿಆರ್ ಟಿಎಸ್ ಕೂಡ ಪ್ರತಿ ತಿಂಗಳಿಗೆ ಐದು ಕೋಟಿ ರೂ. ನಷ್ಟ ಅನುಭವಿಸಿತ್ತು.