ಉಡುಪಿ, ಮೇ 13, ಉಡುಪಿ ಜಿಲ್ಲೆಯಲ್ಲಿ ಖಾಸಗಿ ಮತ್ತು ಸರ್ಕಾರಿ ಬಸ್ ಸಂಚಾರ ಇಂದಿನಿಂದ ಆರಂಭಗೊಂಡಿದೆ.ಸಾರ್ವಜನಿಕರ ಬೇಡಿಕೆಯಂತೆ ಜಿಲ್ಲಾಡಳಿತ ಹಲವು ಷರತ್ತುಗಳೊಂದಿಗೆ ಬಸ್ ಸಂಚಾರಕ್ಕೆ ಅನುಮತಿ ನೀಡಿತ್ತು. ಜಿಲ್ಲೆಯಲ್ಲಿ ಒಟ್ಟು ಕೆಎಸ್‌ಆರ್‌ಟಿಸಿಯ ಐದು ಮತ್ತು ಖಾಸಗಿ ಸಂಸ್ಥೆಯ ಆರು ಬಸ್‌ಗಳು ಸಂಚಾರ ಆರಂಭಿಸಿವೆ. ಆದರೆ ಪ್ರಯಾಣಿಕರ ಸಂಖ್ಯೆ ವಿರಳವಾಗಿತ್ತು.
ನಗರದ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದಿಂದ ಬೆಳಗ್ಗೆ 8 ಗಂಟೆಗೆ ಹೆಜಮಾಡಿ, ಹೆಬ್ರಿ, ಕಾರ್ಕಳಕ್ಕೆ ತಲಾ ಒಂದೊಂದು ಸರಕಾರಿ ಬಸ್‌ಗಳು ಹೊರಟಿದ್ದರೆ, ಕುಂದಾಪುರಕ್ಕೆ ಬೆಳಗ್ಗೆ 9ಗಂಟೆಗೆ ಒಂದು ಸರಕಾರಿ ಬಸ್ ಪ್ರಯಾಣ ಬೆಳೆಸಿವೆ. ಹೆಜಮಾಡಿಗೆ ತೆರಳಿದ ಬಸ್ ವಾಪಸ್ ಉಡುಪಿಗೆ ಮರಳಿದೆ. ಈ ಬಸ್ಸಿನಲ್ಲಿ ಹೋಗುವಾಗ ಒಬ್ಬರು ಮತ್ತು ಬರುವಾಗ ಮೂವರು ಪ್ರಯಾಣಿಕರು ಮಾತ್ರ ಪ್ರಯಾಣಿಸಿದ್ದರು. ಹೀಗೆ ಎರಡು ಟ್ರಿಪ್‌ನಲ್ಲಿ ಕೇವಲ 103 ರೂ. ಸಂಗ್ರಹವಾಗಿದೆ. ಪ್ರಯಾಣಿಕರಿಲ್ಲದ ಕಾರಣ ಒಂದೇ ಟ್ರಿಪ್‌ಗೆ ಈ ಮಾರ್ಗದ ಬಸ್ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಅದೇರೀತಿ ಕುಂದಾಪುರ ಡಿಪೋದಿಂದ ಕುಂದಾಪುರ- ಉಡುಪಿ-ಮಣಿಪಾಲ ಮಾರ್ಗದಲ್ಲಿ ಒಂದು ಬಸ್ ಸಂಚಾರ ಆರಂಭಿಸಿದೆ ಎಂದು ಕೆಎಸ್ಸಾರ್ಟಿಸಿ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.