ಬೆಂಗಳೂರು, ಮೇ 18,ಲಾಕ್ ಡೌನ್ 4.0 ಮಾರ್ಗಸೂಚಿ ಜಾರಿಗೊಳಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಕೆಲವೊಂದು ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ. ಸಚಿವ ಸಂಪುಟ ಸಭೆಯ ಬಳಿಕ ಮುಖ್ಯಮಂತ್ರಿ ಯಡಿಯೂರಪ್ಪ, ಸರ್ಕಾರದ ನಿರ್ಣಯಗಳನ್ನು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.ರಾಜ್ಯದಲ್ಲಿ ನಾಳೆಯಿಂದಲೇ ಬಸ್ ಸಂಚಾರ ಆರಂಭವಾಗಲಿದೆ. ಆದರೆ, ರೆಡ್ ಜೋನ್, ಕಂಟೈನ್ಮೆಂಟ್ ಜೋನ್ ಗಳನ್ನು ಹೊರತುಪಡಿಸಿ ಬಸ್ ಸಂಚರಿಸಲಿದೆ. ಈ ವಲಯಗಳಲ್ಲಿ ನಿರ್ಬಂಧ ಮುಂದುವರಿಯಲಿದೆ ಎಂದರು.
ಬಸ್ ಸಂಚಾರಕ್ಕೆ ಹೊಸ ನಿಯಮಗಳು ಜಾರಿಯಾಗಿದ್ದು, ಒಂದು ಬಸ್ ನಲ್ಲಿ 30 ಮಂದಿಗೆ ಮಾತ್ರ ಸಂಚರಿಸಲು ಅವಕಾಶ ನೀಡಲಾಗಿದೆ. ಸಾರಿಗೆ ಸಂಸ್ಥೆಗೆ ನಷ್ಟವಾದರೂ ಬಸ್ ದರದಲ್ಲಿ ಯಾವುದೇ ವ್ಯತ್ಯಾಸವಾಗುವುದಿಲ್ಲ. ಕೆಎಸ್‌ಆರ್‌ಟಿಸಿಗೆ ಉಂಟಾಗುವ ನಷ್ಟವನ್ನು ಸರ್ಕಾರವೇ ಭರಿಸಲಿದೆ ಎಂದು ಮುಖ್ಯಮಂತ್ರಿ ಹೇಳಿದರು.ಬಸ್ ಹತ್ತುವ ಮುನ್ನ ಸ್ಯಾನಿಟೈಸರ್ ಉಪಯೋಗಿಸುವುದು ಕಡ್ಡಾಯವಾಗಿದ್ದು, ದಾರಿ ಮಧ್ಯೆ ಊಟ ತಿಂಡಿಗೆ ನಿಲ್ಲಿಸುವಂತಿಲ್ಲ. ಬೆಳಗ್ಗೆ 7 ರಿಂದ ಸಂಜೆ 7 ರವರೆಗೆ ಮಾತ್ರ ಬಸ್ ಸಂಚಾರಕ್ಕೆ ಅವಕಾಶವಿದೆ. ಬಿಎಂಟಿಸಿ, ಕೆ.ಎಸ್.ಆರ್.ಟಿ.ಸಿ, ಖಾಸಗಿ ಬಸ್ ಗಳ ಓಡಾಟಕ್ಕೆ ಅವಕಾಶ ರೈಲು ಸಂಚಾರಕ್ಕೂ ಅನುಮತಿ ನೀಡಲಾಗಿದೆ ಎಂದರು.
ಎಲ್ಲ ಸೆಲೂನ್ ಅಂಗಡಿಗಳನ್ನು ತೆರೆಯಬಹುದಾಗಿದೆ. ಆದರೆ, ಪ್ರತಿಯೊಬ್ಬರೂ ಮುಖಕ್ಕೆ ಮಾಸ್ಕ್ ಧರಿಸಿರಲೇಬೇಕು. ಸಾಮಾಜಿಕ ಅಂತರ ಪಾಲನೆ ಕಡ್ಡಾಯವಾಗಿದೆ. ಮದುವೆ ಸಮಾರಂಭಗಳನ್ನು ನಡೆಸಲು ಅನುಮತಿ ನೀಡಲಾಗಿದೆ. ಆದರೆ, 50 ಜನರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ ಎಂದರು.ಪ್ರತಿ ಭಾನುವಾರ ಸಂಪೂರ್ಣ ಲಾಕ್ ಡೌನ್ ಜಾರಿಯಲ್ಲಿರುತ್ತದೆ. ಯಾವುದೇ ಅಂಗಡಿ ಮುಂಗಟ್ಟು ತೆರೆಯುವಂತಿಲ್ಲ. ರಸ್ತೆ ಬದಿ ವ್ಯಾಪಾರವೂ ಸೇರಿದಂತೆ ಎಲ್ಲ ವ್ಯಾಪಾರ ವಹಿವಾಟು ಆರಂಭವಾಗಲಿದೆ ಎಂದು ಯಡಿಯೂರಪ್ಪ ತಿಳಿಸಿದರು.ಬೆಳಗ್ಗೆ 7 ರಿಂದ 9ರ ತನಕ, ಸಂಜೆ 5 ರಿಂದ 7 ರತನಕ ರಾಜ್ಯದ ಎಲ್ಲ ಪಾರ್ಕ್ ಗಳು ತೆರೆಯಲಿವೆ. ಸಾರ್ವಜನಿಕರು ಈ ಸಮಯದಲ್ಲಿ ವಾಯುವಿಹಾರ, ಜಾಗಿಂಗ್ ಮಾಡಬಹುದು. ಆಟೋ, ಟ್ಯಾಕ್ಸಿಗಳ ಓಡಾಟಕ್ಕೂ ಅನುಮತಿ ನೀಡಲಾಗಿದೆ. ಆದರೆ, ರೆಡ್ ಜೋನ್ ಮತ್ತು ಕಂಟೇನ್ಮೆಂಟ್ ಏರಿಯಾಗಳಲ್ಲಿ ಓಡಾಡಿದರೆ ಕೇಸ್ ದಾಖಲಿಸಲಾಗುವುದು ಎಂದು ಅವರು ಎಚ್ಚರಿಸಿದರು.ಟ್ಯಾಕ್ಸಿಯಲ್ಲಿ ಚಾಲಕ ಸೇರಿದಂತೆ ಒಟ್ಟು ನಾಲ್ವರು ಪ್ರಯಾಣಿಸಬಹುದು. ಎಲ್ಲರೂ ಮಾಸ್ಕ್ ಧರಿಸುವುದು ಕಡ್ಡಾಯ ಮಾಡಲಾಗಿದೆ. ಒಂದು ವೇಳೆ ಮಾಸ್ಕ್ ಧರಿಸದಿದ್ದರೆ ಅಂಥವರಿಗೆ ದಂಡ ಹಾಕಲಾಗುವುದು. ಲಾಕ್ ಡೌನ್ ನಿಯಮಗಳನ್ನು ಉಲ್ಲಂಘಿಸಿದವರ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸಲಾಗುವುದು. ಸರ್ಕಾರದ ಮುಂದಿನ ನಿರ್ಣಯದವರೆಗೂ ರಾಜ್ಯದಲ್ಲಿನ ಯಾವುದೇ ಮಾಲ್, ಚಿತ್ರಮಂದಿರಗಳು, ದೇವಸ್ಥಾನಗಳನ್ನು ತೆರೆಯುವ ಹಾಗಿಲ್ಲ ಎಂದು ಅವರು ತಿಳಿಸಿದರು.