ಬೆಂಗಳೂರು, ಮೇ 20,ನಾಲ್ಕನೇ ಹಂತದ ಲಾಕ್‌ಡೌನ್ ವೇಳೆ ಸಾರಿಗೆ ಬಸ್ ವ್ಯವಸ್ಥೆ ಪುನಾರಂಭಗೊಂಡಿರುವುದರಿಂದ ರಾಜ್ಯದ ಹಲವು ಪ್ರಮುಖ ಬಸ್ ನಿಲ್ದಾಣಗಳಲ್ಲಿ ಎರಡನೇ ದಿನವಾದ ಇಂದು ಜನದಟ್ಟಣೆ ಕಂಡುಬಂತು.ಗದಗ ಬಸ್ ನಿಲ್ದಾಣದಲ್ಲಿ ಇಂದು ಬೆಳಗ್ಗೆ ಬೆಂಗಳೂರು ಬಸ್ ಬರುತ್ತಿದ್ದಂತೆ ಪ್ರಯಾಣಿಕರು ಮುಗಿಬಿದ್ದು, ಬಸ್ ಏರಲು ನೂಕುನುಗ್ಗಲು ಉಂಟು ಮಾಡಿದರು. ಬೆಳಗ್ಗೆ 6 ಗಂಟೆಯಿಂದಲೇ ಬಸ್ ನಿಲ್ದಾಣದ ಫ್ಲಾಟ್ ಫಾರ್ಮ್ ಗುಂಪು ಗುಂಪಾಗಿ ಬಂದು ಬಸ್ ಏರುತ್ತಿದ್ದ ದೃಶ್ಯ ಕಂಡುಬಂತು.ಆದರೆ 10 ವರ್ಷಕ್ಕಿಂತ ಕೆಳಗಿನ ಮಕ್ಕಳನ್ನು ಬಸ್ ಏರಲು ಸಿಬ್ಬಂದಿ ನಿರಾಕರಿಸಿದರು. ಇದರಿಂದ ಪ್ರಯಾಣಿಕರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಘಟನೆಯೂ ನಡೆಯಿತು.
ಹಾಸನದಲ್ಲಿಯೂ ಎರಡನೇ ದಿನವಾದ ಇಂದು ಬಸ್ ಸಂಚರಿಸುತ್ತಿದ್ದರೂ ಪ್ರಯಾಣಿಕರ ಸಂಖ್ಯೆ ಕಡಿಮೆಯಿತ್ತು. ಬೆಂಗಳೂರು, ಮೈಸೂರು ಸೇರಿ ವಿವಿಧೆಡೆ ಬಸ್ ಸಂಚರಿಸುತ್ತಿದ್ದವು. ಹಾಸನ ಬಸ್ ನಿಲ್ದಾಣದಲ್ಲಿ ಸ್ಕ್ರೀನಿಂಗ್ ಮಾಡಿದ ಬಳಿಕವಷ್ಟೇ ನಿಲ್ದಾಣದೊಳಕ್ಕೆ ಪ್ರವೇಶ ಕಲ್ಪಿಸಲಾಗುತ್ತಿತ್ತು.ಕಲಬುರಗಿಯಲ್ಲಿಯೂ ಈಶಾನ್ಯ ಸಾರಿಗೆ ಸಂಸ್ಥೆಗೆ ಸೇರಿದ ಬಸ್‌ಗಳು ಬೆಳಗ್ಗೆ 7 ಗಂಟೆಯಿಂದಲೇ ಜಿಲ್ಲೆಯ ವಿವಿಧೆಡೆ ಸಂಚಾರ ಆರಂಭಿಸಿದ್ದವು. ನಾಳೆಯಿಂದ ಕಲಬುರಗಿಯಿಂದ ಹುಬ್ಬಳಿ-ಬೆಳಗಾವಿ ಕಡೆಗೂ ಬಸ್ ಸಂಚಾರ ಆರಂಭಗೊಳ್ಳಲಿದೆ.ಅದೇ ರೀತಿ ಬೆಳಗಾವಿ, ಮಂಗಳೂರು, ಬಾಗಲಕೋಟೆ, ಕಾರವಾರ, ಮೈಸೂರು, ದಾವಣಗೆರೆ ಸೇರಿದಂತೆ ಎಲ್ಲಾ ಜಿಲ್ಲೆಗಳಲ್ಲೂ ಬಸ್ ಪ್ರಯಾಣ ಆರಂಭಗೊಂಡಿದೆ.