ಬಂಕರ್ ನಿರ್ಮಾಣ ವಿಳಂಬ: ಜಮ್ಮು ಕಾಶ್ಮೀರ ಗಡಿ ಜನರ ಗೋಳಾಟ

  ಜಮ್ಮು, ಸೆ 18   ಜಮ್ಮು ಕಾಶ್ಮೀರದ ಗಡಿಯಲ್ಲಿ ಪಾಕಿಸ್ತಾನ ಸೇನೆ ನಿರಂತರ ಕದನವಿರಾಮ ಉಲ್ಲಂಘಿಸುತ್ತಿದ್ದು, ಇದೇ ವೇಳೆ ಬಂಕರ್ ನಿರ್ಮಾಣ ಯೋಜನೆಯೂ ವಿಳಂಬಗೊಂಡಿರುವ ಕಾರಣ ಅಂತಾರಾಷ್ಟ್ರೀಯ ಗಡಿ ನಿಯಂತ್ರಣ ರೇಖೆ ಸಮೀಪದ ಪ್ರದೇಶಗಳಲ್ಲಿ ವಾಸಿಸುತ್ತಿರುವ ಜನರು ಪರದಾಡುವಂತಾಗಿದೆ. 

  ಬಂಕರ್ ನಿರ್ಮಾಣಗೊಳ್ಳದ ಕಾರಣ ಪಾಕಿಸ್ತಾನ ನಡೆಸುವ ಅಪ್ರಚೋದಿತ ಗುಂಡಿನ ದಾಳಿಯಿಂದ ಯಾವ ಕ್ಷಣದಲ್ಲಿ ಏನಾಗುತ್ತದೆಯೋ ಎಂಬ ಆತಂಕ ಎದುರಾಗಿದೆ.  ಬದುಕು ಅಪಾಯದಲ್ಲಿದ್ದು, ಭಯದ ನೆರಳಿನಲ್ಲಿ ಜೀವಿಸುವಂತಾಗಿದೆ ಎಂದು ನಿವಾಸಿಗಳು ಹೇಳಿದ್ದಾರೆ. 

  ಜಮ್ಮು ಪ್ರದೇಶದಲ್ಲಿ 10 ಸಾವಿರ ಬಂಕರ್ಗಳನ್ನು ನಿರ್ಮಿಸುವುದಾಗಿ ಎರಡು ವರ್ಷಗಳ ಹಿಂದೆ ಭಾರತ ಸರ್ಕಾರ ಘೋಷಿಸಿತ್ತು. 2019 ರ ಏಪ್ರಿಲ್ ವೇಳೆಗೆ ಪೂರ್ಣಗೊಳಿಸಬೇಕಿದ್ದ ಯೋಜನೆ ವಿಳಂಬವಾಗಿದ್ದು,  ಈ ಪ್ರದೇಶದ ಎಲ್ಲಾ ಐದು ಗಡಿಗಳಲ್ಲಿ ಕೇವಲ 3,500 ಬಂಕರ್ಗಳು ಮಾತ್ರ ಸಿದ್ಧವಾಗಿವೆ.   

"ಯೋಜನೆ ವಿಳಂಬವಾಗಲು ಹಲವು ಕಾರಣಗಳಿವೆ" ಎಂದು ಮೂಲಗಳು ತಿಳಿಸಿದ್ದು, 2020 ರ ಅಂತ್ಯದ ವೇಳೆಗೆ ಸಂಪೂರ್ಣ ಗೊಳ್ಳಲಿದೆ ಎಂದು ಸರ್ಕಾರ ಹೇಳಿಕೊಂಡಿದೆ ಮತ್ತು ಜಮ್ಮು ಜಿಲ್ಲೆಯಲ್ಲಿ, ಈ ವರ್ಷದ ನವೆಂಬರ್ ವೇಳೆಗೆ ನಿಗದಿಪಡಿಸಿದ ಸಂಖ್ಯೆಯ ಬಂಕರ್ಗಳು ಪೂರ್ಣಗೊಳ್ಳುವ ನಿರೀಕ್ಷೆಯಿದೆ.     

ಗಡಿ ನಿಯಂತ್ರಣ ರೇಖೆಯ ಬಳಿಯಿರುವ ಜಮ್ಮು, ಸಾಂಬಾ, ಕಥುವಾ, ರಜೌರಿ, ಪೂಂಚ್ ಜಿಲ್ಲೆಗಳಲ್ಲಿ ಬಂಕರ್ ಗಳು ನಿರ್ಮಾಣಗೊಳ್ಳಲಿವೆ.   

ಪಾಕಿಸ್ತಾನದ ನಿಯಮಿತ ಕದನ ವಿರಾಮ ಉಲ್ಲಂಘನೆ, ಕೆಲವು ಸ್ಥಳಗಳಲ್ಲಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳದಿರುವುದು, ಕಾರ್ಯಗತಗೊಳಿಸುವ ಸಂಸ್ಥೆಗಳಿಗೆ ಹಣವನ್ನು ಬಿಡುಗಡೆ ಮಾಡದಿರುವುದು ಯೋಜನೆಯ ವಿಳಂಬದ ಹಿಂದಿನ ಕೆಲವು ಪ್ರಮುಖ ಕಾರಣಗಳಾಗಿವೆ ಎಂದು ಮೂಲಗಳು ತಿಳಿಸಿವೆ.