ವಿಶಾಖಪಟ್ಟಣ, ಡಿ 17: ಐಸಿಸಿ ವಿಶ್ವಕಪ್ ಟೂರ್ನಿಯ ಬಳಿಕ ಬೆನ್ನು ನೋವಿನಿಂದಾಗಿ ಟೀಮ್ ಇಂಡಿಯಾದಿಂದ ಹೊರಗುಳಿದಿದ್ದ ಹಿರಿಯ ವೇಗಿ ಜಸ್ರಿತ್ ಬುಮ್ರಾ ಅವರು ಇಲ್ಲಿನ ಡಾ. ವೈ.ಎಸ್ ರಾಜಶೇಖರ ರೆಡ್ಡಿ, ಎಸಿಎ-ವಿಡಿಸಿಎ ಕ್ರೀಡಾಂಗಣದಲ್ಲಿ ಭಾರತ ತಂಡದೊಂದಿಗೆ ಮಂಗಳವಾರ ಅಭ್ಯಾಸದಲ್ಲಿ ಭಾಗವಹಿಸಿದ್ದರು.
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಬುಮ್ರಾ ಪೋಟೊವನ್ನು ಶೇರ್ ಮಾಡಿದೆ. ಕಳೆದ ಬಾಂಗ್ಲಾದೇಶ ವಿರುದ್ಧದ ಟಿ-20 ಸರಣಿಯಲ್ಲೂ ಭಾರತ 2-1 ಅಂತರದಲ್ಲಿ ತಿಣುಕಾಡಿ ಗೆದ್ದಿತ್ತು. ಕಳೆದ ಭಾನುವಾರ ವೆಸ್ಟ್ ಇಂಡೀಸ್ ವಿರುದ್ಧ ಮೊದಲನೇ ಏಕದಿನ ಪಂದ್ಯದಲ್ಲಿಯೂ ಹೀನಾಯ ಸೋಲು ಅನುಭವಿಸಿದೆ. ಬೌಲಿಂಗ್ ಹಾಗೂ ಫೀಲ್ಡಿಂಗ್ ಸಂಪೂರ್ಣ ನೆಲಕಚ್ಚಿದೆ. ಇದರ ನಡುವೆ ಜಸ್ಪ್ರಿತ್ ಬುಮ್ರಾ ತಂಡೆಕ್ಕೆ ಅನಿವಾರ್ಯ ಎಂದು ಈಗಾಗಲೇ ನಾಯಕ ವಿರಾಟ್ ಕೊಹ್ಲಿಗೆ ಅರಿವಾಗಿದೆ.
ಜಸ್ಪ್ರಿತ್ ಬುಮ್ರಾ ಅವರು ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯ ವೇಳೆ ಬೆನ್ನಿನ ಕೆಳಭಾಗ ಸ್ಟ್ರೆಸ್ ಫ್ರಾಕ್ಚರ್ (ಒತ್ತಡ ಮುರಿತ) ಗಾಯೆಕ್ಕೆ ತುತ್ತಾಗಿದ್ದರು. ಪುನಶ್ಚೇತನದ ಹಾದಿಯಲ್ಲಿರುವ ಅವರು ತಂಡವನ್ನು ಸೇರಿಕೊಳ್ಳುವ ತುಡಿತದಲ್ಲಿದ್ದಾರೆ. ಇದರ ನಡುವೆ ಫಿಟ್ನೆಸ್ ಭಾಗವಾಗಿ ಬುಮ್ರಾ, ಮಂಗಳವಾರ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಹಾಗೂ ಉಪ ನಾಯಕ ರೋಹಿತ್ ಶರ್ಮಾ ಸೇರಿದಂತೆ ಹಲವು ಬ್ಯಾಟ್ಸ್ಮನ್ಗಳಿಗೆ ನೆಟ್ಸ್ನಲ್ಲಿ ಬೌಲಿಂಗ್ ಮಾಡಿದ್ದಾರೆ.
ಮುಂದಿನ ವರ್ಷ ಜನವರಿಯಲ್ಲಿ ನ್ಯೂಜಿಲೆಂಡ್ ಪ್ರವಾಸದ ವೇಳೆಗೆ ಬುಮ್ರಾ ಅವರನ್ನು ಪುನರಾಗಮನ ಮಾಡಿಕೊಳ್ಳುವ ಯೋಜನೆಯಲ್ಲಿ ಟೀಮ್ ಮ್ಯಾನೇಜ್ಮೆಂಟ್ ಇದೆ. ಇದಕ್ಕೂ ಮುನ್ನ ಭಾರತ, ಶ್ರೀಲಂಕಾ ಹಾಗೂ ಆಸ್ಟ್ರೇಲಿಯಾ ವಿರುದ್ಧ ಸೀಮಿತ ಓವರ್ಗಳ ಸರಣಿ ಆಡಲಿದ್ದು, ಸಾಧ್ಯವಾದರೆ ಇದೇ ವೇಳೆ ಅವರನ್ನು ತಂಡೆಕ್ಕೆ ಸೇರ್ಪಡೆ ಮಾಡಿಕೊಳ್ಳಬಹುದು.