ಬುಲೆಟ್ ಪ್ರಕಾಶ್ ಅಂತ್ಯಕ್ರಿಯೆ

ಬೆಂಗಳೂರು, ಏ.7, ನಿನ್ನೆ ನಿಧನರಾದ ಸ್ಯಾಂಡಲ್ ವುಡ್ ಖ್ಯಾತ ಹಾಸ್ಯ ನಟ ಬುಲೆಟ್ ಪ್ರಕಾಶ್ ಅವರ ಅಂತ್ಯಕ್ರಿಯೆಯನ್ನು ನಗರದ ಹೆಬ್ಬಾಳದ ರುದ್ರಭೂಮಿಯಲ್ಲಿಂದು ನೆರವೇರಿಸಲಾಯಿತು.44 ವರ್ಷದ  ಬುಲೆಟ್ ಪ್ರಕಾಶ್ ಲಿವರ್ ಅವರು, ಕಿಡ್ನಿ ವೈಫಲ್ಯದಿಂದಾಗಿ ಚಿಕಿತ್ಸೆ ಫಲಿಸದೇ ಸೋಮವಾರ ಮಧ್ಯಾಹ್ನ ನಗರದ ಫೋರ್ಟೀಸ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು.ತೆರೆದ ವಾಹನದಲ್ಲಿ ಮನೆಯಿಂದ ಹೆಬ್ಬಾಳ ರುದ್ರಭೂಮಿವರೆಗೆ ಪ್ರಕಾಶ್ ಅವರ ಪಾರ್ಥಿವ ಶರೀರವನ್ನು ತರಲಾಯಿತು.ತಂದೆಯ ಅಂತಿಮ ಕಾರ್ಯವನ್ನು ಪುತ್ರ ರಕ್ಷಕ್ ನೆರವೇರಿಸಿದ್ದು, ಮಡಿವಾಳ ಸಂಪ್ರದಾಯದಂತೆ ಅಂತ್ಯಸಂಸ್ಕಾರ ಮಾಡಲಾಯಿತು.ಕೊರೊನಾ ಸೋಂಕು ನಿಯಂತ್ರಣಕ್ಕೆ ಲಾಕ್‍ಡೌನ್ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ  ಕುಟುಂಬಸ್ಥರು, ಆಪ್ತರು ಮಾತ್ರ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿದ್ದರು.ಸುಮಾರು 325ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದ ಬುಲೆಟ್ ಪ್ರಕಾಶ್, ಸ್ಯಾಂಡಲ್‍ವುಡ್ ಎಲ್ಲಾ ಸ್ಟಾರ್ ನಟರ ಜೊತೆಯಲ್ಲಿ ಕಾಣಿಸಿಕೊಂಡಿದ್ದರು.