ನವದೆಹಲಿ, ಜ ೩೦ : ಸಂಸತ್ತಿನ ಬಜೆಟ್ ಅಧಿವೇಶನದಲ್ಲಿ ಪ್ರತಿಪಕ್ಷಗಳ ಅಭಿಪ್ರಾಯಗಳನ್ನು ಆಲಿಸಲು ಹಾಗೂ ಅವರು ಪ್ರಸ್ತಾಪಿಸಲು ಬಯಸುವ ಎಲ್ಲಾ ವಿಷಯಗಳ ಬಗ್ಗೆ ಚರ್ಚಿಸಲು ಸರ್ಕಾರ ಸದಾ ಸಿದ್ಧವಾಗಿದೆ ಎಂದು ಪ್ರಧಾನ ಮಂತ್ರಿ ಮೋದಿ ಹೇಳಿದ್ದಾರೆ ಎಂದು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ತಿಳಿಸಿದ್ದಾರೆ.
ಶುಕ್ರವಾರದಿಂದ ಆರಂಭಗೊಳ್ಳಲಿರುವ ಸಂಸತ್ತಿನ ಬಜೆಟ್ ಅಧಿವೇಶನದಲ್ಲಿ ಪ್ರತಿಪಕ್ಷಗಳು ಯಾವುದೇ ವಿಷಯ ಪ್ರಸ್ತಾಪಿಸಿದರೂ, ಅದಕ್ಕೆ ಸಮಂಜಸವಾಗಿ ಉತ್ತರಿಸಲಿದೆ ಎಂದು ಸಂಸದೀಯ ಸಚಿವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಬಜೆಟ್ ಅಧಿವೇಶನ ಹಿನ್ನಲೆಯಲ್ಲಿ ಗುರುವಾರ ಸರ್ಕಾರ ಸರ್ವ ಪಕ್ಷಗಳ ನಾಯಕರ ಸಭೆ ನಡೆಸಿತು. ಗೃಹ ಬಂಧನದಲ್ಲಿರುವ ಜಮ್ಮು ಕಾಶ್ಮೀರ ಮಾಜಿ ಮುಖ್ಯಮಂತ್ರಿ ಡಾ. ಫಾರೂಕ್ ಅಬ್ದುಲ್ಲಾ ಅವರನ್ನು ತಕ್ಷಣ ಬಿಡುಗಡೆ ಮಾಡಬೇಕು. ಇದರಿಂದ ಅವರು ಅವರು ಬಜೆಟ್ ಅಧಿವೇಶನದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಲಿದೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಗುಲಾಮ್ ನಬಿ ಆಜಾದ್ ಸಭೆಯಲ್ಲಿ ಸರ್ಕಾರವನ್ನು ಒತ್ತಾಯಿಸಿದರು ಎಂದು ವರದಿಯಾಗಿದೆ.
ಇದಲ್ಲದೆ, ಸಿಎಎ ವಿರುದ್ಧ ಪ್ರತಿಭಟನೆ ನಡೆಸುವವರ ವಿರುದ್ದ ಸರ್ಕಾರ ದ್ವೇಷಪೂರಿತವಾಗಿದೆ ಕ್ರಮ ಕೈಗೊಳ್ಳುತ್ತಿದೆ. ಸರ್ಕಾರ ವೈಖರಿ ಪ್ರಜಾಪ್ರಭುತ್ವ ವಿರೋಧಿಯಾಗಿದೆ ಎಂದು ಆರೋಪಿಸಿದ್ದು, ಪ್ರತಿಭಟನಾಕಾರರನ್ನು ಮನವೊಲಿಸಿ, ಪರಿಸ್ಥಿತಿ ಶಾಂತಗೊಳಿಸಲು ಸರ್ಕಾರ ಯಾವುದೇ ಪ್ರಯತ್ನ ನಡೆಸುತ್ತಿಲ್ಲ ಗುಲಾಂ ನಬಿ ಅಜಾದ್ ಆಕ್ರೋಶ ವ್ಯಕ್ತಪಡಿಸಿದರು. ಆದರೆ, ಈ ವಿಷಯದ ಬಗ್ಗೆ ಸರ್ಕಾರದ ಕಡೆಯಿಂದ ಪ್ರತಿರೋಧ ವ್ಯಕ್ತವಾಗಿದೆ ಎಂದು ವರದಿಯಾಗಿದೆ.
ಸಿಎಎ ವಿಷಯದಲ್ಲಿ ಪ್ರತಿಪಕ್ಷಗಳು ಅನುಸರಿಸುತ್ತಿರುವ ಕ್ರಮಗಳ ಬಗ್ಗೆ ಆ ಪಕ್ಷಗಳ ನಾಯಕರು ಆತ್ಮಾವಲೋಕನ ನಡೆಸಿಕೊಳ್ಳಬೇಕು ಎಂದು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಮನವಿ ಮಾಡಿದರು. ರಾಷ್ಟ್ರೀಯ ಪೌರತ್ವ ತಿದ್ದುಪಡಿ ಕಾಯ್ದೆ ಸಂವಿಧಾನ ಬದ್ದವಾಗಿ ಸಂಸತ್ತಿನ ಅನುಮೋದನೆ ಪಡೆದು ಕಾಯ್ದೆಯಾಗಿದ್ದರೂ, ಪ್ರತಿಪಕ್ಷಗಳು ಅನಗತ್ಯ ರಾದ್ದಾಂತವನ್ನು ಸೃಷ್ಟಿಸುತ್ತಿವೆ ಎಂದು ಸಚಿವ ಜೋಷಿ ದೂರಿದರು.