ಸಾವ್ ಪಾಲೊ, ಜೂನ್ 2, ಬ್ರೆಜಿಲ್ ನಲ್ಲಿ ನಿನ್ನೆ ಒಂದೇ ದಿನ ಅತಿಹೆಚ್ಚು ಕೊವಿಡ್-19 ಸೋಂಕಿನ 623 ಸಾವು ಪ್ರಕರಣಗಳು ವರಿದಿಯಾಗಿದ್ದು, ಇದರೊಂದಿಗೆ ದೇಶದಲ್ಲಿ ಒಟ್ಟು ಸಾವಿನ ಸಂಖ್ಯೆ 29,937 ಕ್ಕೆ ಏರಿದೆ ಎಂದು ಅಲ್ಲಿನ ಆರೋಗ್ಯ ಸಚಿವಾಲಯ ಸೋಮವಾರ ತಿಳಿಸಿದೆ.ಕಳೆದ 24 ಗಂಟೆಗಳಲ್ಲಿ 12,247 ಹೊಸ ಸೋಂಕು ಪ್ರಕರಣಗಳು ಪತ್ತೆಯಾಗಿವೆ. ಇದರೊಂದಿಗೆ ಒಟ್ಟು ಪ್ರಕರಣಗಳ ಸಂಖ್ಯೆ 5,26,447 ಕ್ಕೆ ತಲುಪಿದ್ದರೆ,ಇದುವರೆಗೆ ಸೋಂಕಿನಿಂದ 2,11,080 ರೋಗಿಗಳು ಚೇತರಿಸಿಕೊಂಡಿದ್ದಾರೆ.ಫೆಬ್ರವರಿ 26 ರಂದು ದೇಶದಲ್ಲಿ ಮೊದಲ ಬಾರಿಗೆ ಸೋಂಕು ಪತ್ತೆಯಾದ ನಂತರ ಸೋಂಕಿನ ಕೇಂದ್ರಬಿಂದುವಾಗಿರುವ ಬ್ರೆಜಿಲ್‌ನ ಅತಿದೊಡ್ಡ ರಾಜ್ಯ ಸಾವ್ ಪಾಲೊನಲ್ಲಿ 7,667 ಸಾವುಗಳು ಸಂಭವಿಸಿದ್ದರೆ, 1,11,296 ಪ್ರಕರಣಗಳು ದೃಢಪಟ್ಟಿವೆ. ಈ ಹಿನ್ನೆಲೆಯಲ್ಲಿ ಜೂನ್ 15 ರವರೆಗೆ ಲಾಕ್‌ಡೌನ್ ನಿಯಮಗಳನ್ನು ವಿಸ್ತರಿಸಲಾಗಿದೆ.ಬ್ರೆಜಿಲ್‌ನಲ್ಲಿ ಎರಡನೇ ಅತಿಹೆಚ್ಚು ಬಾಧಿತ ರಿಯೊ ಡಿ ಜನೈರೊನಲ್ಲಿ ಈವರೆಗೆ 54,530 ಪ್ರಕರಣಗಳು ವರದಿಯಾಗಿದ್ದು 5,462 ಸಾವುಗಳು ವರದಿಯಾಗಿವೆ.