ಚೆನ್ನೈ, ಏ 20, ಎಂಎಸ್ ಧೋನಿ ಒಬ್ಬ ಅಪ್ರತಿಮ ಆಟಗಾರ. ತಮ್ಮ ಅದ್ಭುತ ನಾಯಕತ್ವ, ಸ್ಫೋಟಕ ಬ್ಯಾಟಿಂಗ್ ಮತ್ತು ಚುರುಕಿನ ವಿಕೆಟ್ ಕೀಪಿಂಗ್ ಮೂಲಕ ಮಾತ್ರವಲ್ಲ ವಿಕೆಟ್ ನಡುವಿನ ಓಟದಲ್ಲೂ ಎಂಎಸ್ ಎತ್ತಿದ ಕೈ. ಟೀಮ್ ಇಂಡಿಯಾದಲ್ಲಿ ಇರುವ ಅತ್ಯಂತ ವೇಗದ ಓಟಗಾರ ಎಂಬುದನ್ನು ಕ್ಯಾಪ್ಟನ್ ಕೂಲ್ ಹಲವು ಬಾರಿ ಸಾಬೀತು ಪಡಿಸಿದ್ದಾರೆ ಕೂಡ.
ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲೂ ಧೋನಿ ಇದೇ ಸಂಸ್ಕೃತಿಯನ್ನು ಬೆಳೆಸಿದ್ದಾರೆ. ಅಂದಹಾಗೆ 2018ರ ಐಪಿಎಲ್‌ನ ಫೈನಲ್‌ನಲ್ಲಿ ಸನ್‌ರೈಸರ್ಸ್‌ಹೈದರಾಬಾದ್ ತಂಡವನ್ನು ಮಣಿಸಿ ಮೂರನೇ ಬಾರಿ ಪ್ರಶಸ್ತಿ ಗೆದ್ದ ಬಳಿಕ ಧೋನಿ ಸಿಎಸ್‌ಕೆ ತಂಡದಲ್ಲಿ ಒಂದು ರನ್ನಿಂಗ್ ರೇಸ್ ಸ್ಪರ್ಧೆಯನ್ನು ನಡೆಸಿದ್ದರು ಎಂಬುದು ತಡವಾಗಿ ಬೆಳಕಿಗೆ ಬಂದಿದೆ. ಅಂದು ಸಿಎಸ್‌ಕೆ ತಂಡದ ಸ್ಟಾರ್ ಆಲ್‌ರೌಂಡರ್ ಡ್ವೇನ್ ಬ್ರಾವೋ ರನ್ನಿಂಗ್ ರೇಸ್‌ನಲ್ಲಿ ಸ್ಪರ್ಧಿಸುವಂತೆ ಧೋನಿಗೆ ಸವಾಲೆಸಗಿದ್ದಾಗಿ ವಿಂಡೀಸ್‌ನ ತಾರೆ ಇದೀಗ ಹೇಳಿಕೊಂಡಿದ್ದಾರೆ. ಇಬ್ಬರ ನಡುವೆ ನಡೆದ 3 ಡ್ಯಾಶ್ ಓಟದ ಸ್ಪರ್ಧೆಯಲ್ಲಿ ಕ್ಯಾಪ್ಟನ್ ಕೂಲ್ ಗೆಲುವಿನ ನಗೆ ಬೀರಿದ್ದರಂತೆ. ಈ ಸಂಗತಿಯನ್ನು ಬ್ರಾವೋ ಸಿಎಸ್‌ಕೆ ತಂಡದ ಇನ್‌ಸ್ಟಾಗ್ರಾಮ್ ಸಂದರ್ಶನ ಕಾರ್ಯಕ್ರಮದಲ್ಲಿ ಹೇಳಿಕೊಂಡಿದ್ದಾರೆ.
"ಧೋನಿ ಆ ಐಪಿಎಲ್‌ನಲ್ಲಿ ನನ್ನನ್ನು ಮುದುಕ ಎಂದೆಲ್ಲಾ ಕಾಲೆಳೆಯುತ್ತಲೇ ಇದ್ದರು. ನಾನು ನಿಧಾನವಾಗಿ ನಡೆಯುತ್ತಿದ್ದ ಕಾರಣಕ್ಕೆ ಅವರು ಹೀಗೆನ್ನುತ್ತಿದ್ದರು. ಇದನ್ನು ಸಹಿಲಾಗದೆ ನನ್ನೊಟ್ಟಿಗೆ ಸ್ಪ್ರಿಂಟ್ ರೇಸ್ ಮಾಡುವಂತೆ ಧೋನಿಯಲ್ಲಿ ಸವಾಲೆಸಗಿದ್ದೆ. ಟೂರ್ನಿ ಮುಗಿದ ಬಳಿಕ ಮಾಡೋಣ ಎಂದಿದ್ದರು. ಟೂರ್ನಿ ಮಧ್ಯದಲ್ಲಿ ಇಂಥದ್ದೊಂದು ಸಾಹಸಕ್ಕೆ ಕೈ ಹಾಕಿ ಗಾಯಗೊಳ್ಳುವುದು ಬೇಡ ಎಂದು ಫೈನಲ್ ಮುಗಿದ ಬಳಿಕ ರೇಸ್ ಮಾಡಿದೆವು. ತೀರಾ ಪೈಪೋಟಿಯಿಂದ ಕೂಡಿದ್ದರೂ ಅವರು ನನ್ನನ್ನು ಸೋಲಿಸಿದ್ದರು. ನಾನು ಸೋತೆ ಎಂದು ಒಪ್ಪಿಕೊಳ್ಳಲೇ ಬೇಕಾಯಿತು. ಅವರು ಬಹಳ ವೇಗವಾಗಿ ಓಡುತ್ತಾರೆ," ಎಂದು ಆ ಒಂದು ವಿಶೇಷ ಓಟವನ್ನು ಬ್ರಾವೋ ವಿವರಿಸಿದ್ದಾರೆ.