ಮೇಲ್ಭಾಗದ ತುರ್ತು ಕಾಲುವೆಯಲ್ಲಿ ಬಿದ್ದ ಬೋಂಗಾ : ನೀರು ವ್ಯರ್ಥ : ಕಳಪೆ ಕಾಮಗಾರಿ ಆರೋಪ
ಕಂಪ್ಲಿ 17: ತಾಲೂಕು ಸಮೀಪದ ಬುಕ್ಕಸಾಗರ ಗ್ರಾಪಂಯ ವೆಂಕಟಾಪುರ ಗ್ರಾಮದ ಈಶ್ವರ ದೇವಸ್ಥಾನದ ಬಳಿಯಲ್ಲಿ ಹಾದು ಹೋಗಿರುವ ತುರ್ತು ಕಾಲುವೆಯಲ್ಲಿನ ನೀರು ಸೋರುವಿಕೆಯಿಂದ ಸಾಕಷ್ಟು ಕ್ಯೂಸೆಕ್ ನೀರು ನದಿಗೆ ಪೋಲಾಗುವಂತಾಗಿದ್ದು, ಇದರಿಂದ ಈ ಭಾಗದ ರೈತರಿಗೆ ಸಂಕಷ್ಟ ತಂದೊಡ್ಡಿದೆ.
ಇಲ್ಲಿನ ತುರ್ತು ಕಾಲುವೆ ಭಾಗದಲ್ಲಿ ಸಾವಿರಾರು ಎಕರೆಯಷ್ಟು ರೈತರ ಜಮೀನುಗಳಲ್ಲಿ ಭತ್ತ, ಬಾಳೆ ಸೇರಿದಂತೆ ನಾನಾ ಬೆಳೆಗಳನ್ನು ಬೆಳೆದಿದ್ದು, ಆದರೆ, ಕೆಳ ಭಾಗದ ರೈತರಿಗೆ ನೀರು ದೊರಕುವುದು ಕಷ್ಟ. ಅಂತದರಲ್ಲಿ ಕಾಲುವೆಯಿಂದ ಸಾಕಷ್ಟು ನೀರು ವ್ಯರ್ಥವಾಗಿ ಪೋಲಾಗುತ್ತಿರುವುದು ರೈತರಲ್ಲಿ ಆತಂಕ ಮನೆ ಮಾಡಿದೆ. ಇಲ್ಲಿನ ಗುಂಡ್ಲು ಕೆರೆ ಭಾಗದಿಂದ ಇತ್ತೀಚೆಗೆ ಮೇಲ್ಭಾಗದಲ್ಲಿರುವ ತುರ್ತು ಕಾಲುವೆ ಅಭಿವೃದ್ಧಿ ಕಾಮಗಾರಿ ಮಾಡಲಾಗಿದೆ.
ಆದರೆ, ಕಾಮಗಾರಿ ಮಾಡಿ ಕೆಲವು ದಿನಗಳಲ್ಲಿ ಕಾಲುವೆಯಲ್ಲಿ ಬೋಂಗಾ(ಗುಂಡಿ) ಬಿದ್ದ ಪರಿಣಾಮ ಸಾಕಷ್ಟು ನೀರು ವ್ಯರ್ಥವಾಗಿ ಹರಿಯುತ್ತಿದೆ. ಇದರಿಂದಾಗಿ ಇಲ್ಲಿನ ಕಾಲುವೆ ಕಾಮಗಾರಿ ಕಳಪೆಯಾಗಿದೆ ಎಂಬ ಆರೋಪಗಳು ಬಲವಾಗಿ ಕೇಳಿ ಬರುತ್ತಿದೆ. ಎಡಿಬಿ ಅನುದಾನದ ಸುಮಾರು 35 ಕೋಟಿ ವೆಚ್ಚದಲ್ಲಿ 18 ಕಿ.ಮೀವರೆಗಿನ ತುರ್ತು ಕಾಲುವೆ ಅಭಿವೃದ್ಧಿಪಡಿಸಬೇಕಾಗಿದೆ. ಈಗಾಗಲೇ ಮೇಲ್ಭಾಗದಲ್ಲಿ ಕಾಲುವೆ ಕಾಮಗಾರಿ ಮಾಡಿದ್ದು, ಇನ್ನು ಕೆಳ ಹಂತದವರೆಗೆ ಕಾಮಗಾರಿ ಮಾಡಬೇಕಾಗಿದೆ. ಆದರೆ, ಮೇಲ್ಭಾಗದಲ್ಲಾದ ಕಳಪೆ ಕಾಮಗಾರಿಗೆ ಕಾಲುವೆಯಲ್ಲಿ ಬೋಂಗಾ ಬಿದ್ದು, ನೀರು ವ್ಯರ್ಥವಾಗುತ್ತಿದೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸಿ, ಕೂಡಲೇ ಗುತ್ತಿಗೆದಾರರ ವಿರುದ್ಧ ಸೂಕ್ತಕ್ರಮಕೈಗೊಳ್ಳಬೇಕು. ಮತ್ತು ಬಿಲ್ ನಿಲ್ಲಿಸಿ, ಗುಣಮಟ್ಟದ ಕಾಮಗಾರಿಗೆ ಆಧ್ಯತೆ ನೀಡಬೇಕೆಂಬುದು ರೈತರಾದ ಎಲ್.ಎಸ್.ರುದ್ರ್ಪ, ಯರಿ್ರಸ್ಚಾಮಿ, ಬಶೀರ್, ಐ.ಚಂದ್ರಶೇಖರರೆಡ್ಡಿ ಆಗ್ರಹಿಸಿದರು.
ನಂತರ ಕರ್ನಾಟಕ ರಾಜ್ಯ ರೈತರ ಸಂಘ ಹಾಗೂ ಹಸಿರು ಸೇನೆ(ಜೆ.ಕಾರ್ತಿ) ತಾಲೂಕಾಧ್ಯಕ್ಷ ಸಿ.ಎ.ಚನ್ನಪ್ಪ ಮಾತನಾಡಿ, ಬುಕ್ಕಸಾಗರ ತುರ್ತು ಕಾಲುವೆ ಅಭಿವೃದ್ಧಿ ಮಾಡುತ್ತಿರುವುದು ಒಳ್ಳೆಯ ಬೆಳವಣಿಗೆ. ಆದರೆ, ಮೇಲ್ಭಾಗದಲ್ಲಿ ಮಾಡಿದ ಕಳಪೆ ಕಾಮಗಾರಿಗೆ ಕಾಲುವೆಯಲ್ಲಿ ಬೋಂಗಾ ಬಿದ್ದು, ನೀರು ಪೋಲಾಗಿದೆ. ಎಸ್ಕೇಪ್ ಗೇಟ್ ಮೂಲಕ ನದಿಗೆ ನೀರು ಹರಿದು ಹೋಗುತ್ತಿದೆ. ಇದರಿಂದ ರೈತರಿಗೆ ಸಮಸ್ಯೆಯಾಗಿದೆ. ಕೂಡಲೇ ಕಾಲುವೆ ಕಾಮಗಾರಿ ದುರಸ್ಥಿ ಮಾಡಿ, ನೀರು ಪೋಲಾಗುವುದನ್ನು ತಡೆಯಬೇಕು. ಮತ್ತು ಕಳಪೆ ಕಾಮಗಾರಿ ಆರೋಪದ ಹಿನ್ನಲೆ ಗುತ್ತಿಗೆದಾರರ ವಿರುದ್ಧ ಶಿಸ್ತು ಕ್ರಮಕೈಗೊಳ್ಳಬೇಕು. ಇಲ್ಲವಾದಲ್ಲಿ ಮುಂದಿನ ದಿನದಲ್ಲಿ ಇಲ್ಲಿನ ರೈತರೊಂದಿಗೆ ಹೋರಾಟಕ್ಕೆ ಇಳಿಯಲಾಗುವುದು ಎಂದು ಎಚ್ಚರಿಕೆ ನೀಡಿದರು.
ಡಿ.002: ಬುಕ್ಕಸಾಗರದ ವೆಂಕಟಾಪುರ ಗ್ರಾಮದ ಈಶ್ವರ ದೇವಸ್ಥಾನ ಬಳಿಯ ಕಾಲುವೆಯಲ್ಲಿ ಬೋಂಗಾ ಬಿದ್ದು ನೀರು ಪೋಲಾಗುತ್ತಿರುವುದು.