ಗೋಂಡಾ, ಜ 21 : ಉತ್ತರ ಪ್ರದೇಶದಲ್ಲಿನ ಈ ಜಿಲ್ಲೆಯ ತರಾಬ್ ಗಂಜ್ ತೆಹಸಿಲ್ ನ ಉಮ್ರಿಬೇಗಮ್ ಗಂಜ್ ಸಮೀಪ ಘಗ್ರಾ ನದಿಯನ್ನು ದಾಟುತ್ತಿದ್ದ ದೋಣಿಯೊಂದು ಸೇತುವೆಗೆ ಡಿಕ್ಕಿ ಹೊಡೆದು ಕನಿಷ್ಟ 11 ಮಂದಿ ಮುಳುಗಿ ಸತ್ತಿರುವುದಾಗಿ ಶಂಕಿಸಲಾಗಿದೆ.
ದೋಣಿಯಲ್ಲಿ 25 ಮಂದಿ ಪ್ರಯಾಣಿಸುತ್ತಿದ್ದು, ಈ ಪೈಕಿ 14 ಜನರನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ. 14 ಜನರ ಪೈಕಿ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಗಂಭೀರ ಸ್ಥಿತಿಯಲ್ಲಿದ್ದ ಇವರಲ್ಲಿ ಒಬ್ಬ ವ್ಯಕ್ತಿ ಮೃತಪಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಈಜು ತಜ್ಞರು ಇತರರಿಗಾಗಿ ಶೋಧ ನಡೆಸುತ್ತಿದ್ದಾರೆ.
ಎಲಿ ಪರಸೌಲಿ ಗ್ರಾಮದ ಜನರು ತಮ್ಮ ಹೊಲಗಳಿಗೆ ಹೋಗಲು ದೋಣಿಯಲ್ಲಿ ಘಗ್ರಾ ನದಿ ದಾಟುತ್ತಿದ್ದಾಗ ಈ ದುರಂತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಮಧ್ಯೆ, ದೋಣಿ ಒಮ್ಮೆಲೇ ನಿಯಂತ್ರಣ ಕಳೆದುಕೊಂಡು ಸೇತುವೆಗೆ ಡಿಕ್ಕಿ ಹೊಡೆದು ನದಿಯಲ್ಲಿ ಮಳುಗಿದೆ. ದೋಣಿಯಲ್ಲಿ ಪ್ರಯಾಣಿಸುತ್ತಿದ್ದ ಎಲ್ಲ ರೈತರು ನದಿಯಲ್ಲಿ ಮುಳುಗಿದ್ದಾರೆ. ಸ್ಥಳೀಯ ಜನರು ಮತ್ತು ಪೊಲೀಸರು 25 ಜನರ ಪೈಕಿ 14 ಜನರನ್ನು ಸುರಕ್ಷಿತವಾಗಿ ರಕ್ಷಿಸಿದ್ದಾರೆ.