ರೆಡ್ ಕ್ರಾಸ್ ಸಹಯೋಗದಲ್ಲಿ ರಕ್ತದಾನ ಅರಿವು ಕಾರ್ಯಕ್ರಮ
ಕೊಪ್ಪಳ 21: ರೆಡ್ ಕ್ರಾಸ್ ಸಂಸ್ಥೆಗೆ ಜಗತ್ತಿನಲ್ಲಿ ಪ್ರಾಶಸ್ತ್ಯ ಇದೆ. ಯುದ್ಧಭೂಮಿಯಲ್ಲೂ ಶಸ್ತ್ರ ತ್ಯಾಗ ಮಾಡುವಷ್ಟು ಗೌರವ ಸಂಸ್ಥೆಗಿದೆ ಎಂದು ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಕೊಪ್ಪಳ ಜಿಲ್ಲಾ ಶಾಖೆಯ ಸಭಾಪತಿ ಹಾಗೂ ಹಿರಿಯ ಪತ್ರಕರ್ತ ಸೋಮರಡ್ಡಿ ಅಳವಂಡಿ ಹೇಳಿದರು.
ನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಹಾಗೂ ಯುವ ರೆಡ್ ಕ್ರಾಸ್ ಸಹಯೋಗದಲ್ಲಿ ಗುರುವಾರ ನಡೆದ ರಕ್ತದಾನ ಅರಿವು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಜೀವನ ಅಮೂಲ್ಯ. ಜೀವನ ಸಾಗಿಸಲು ಜೀವ ಮುಖ್ಯ. ಜೀವ ಉಳಿಯಲು ರಕ್ತ ಅಗತ್ಯ. ರಕ್ತವನ್ನು ದಾನ ಮಾಡುವುದರಿಂದ ಆರೋಗ್ಯ ವೃದ್ಧಿಸುತ್ತದೆ. ಜೀವ ಮತ್ತು ಜನಜೀವನದ ನೆಮ್ಮದಿಗೆ ರೆಡ್ ಕ್ರಾಸ್ ಶ್ರಮಿಸುತ್ತಿದೆ. ವಿದ್ಯಾರ್ಥಿ ಸಮೂಹ ಈ ನಿಟ್ಟಿನಲ್ಲಿ ಜಾಗೃತಿ ಹೊಂದಬೇಕು ಎಂದು ಕರೆ ನೀಡಿದರು. ರೆಡ್ ಕ್ರಾಸ್ ಸಂಸ್ಥೆಯ ಜಿಲ್ಲಾ ಶಾಖೆಯ ಉಪಸಭಾಪತಿ ಡಾ.ಮಂಜುನಾಥ ಸಜ್ಜನ ಮಾತನಾಡಿ, ರಕ್ತದಾನದಿಂದ ಸಾಕಷ್ಟು ಪ್ರಯೋಜನಗಳಿವೆ. ವಿದ್ಯಾರ್ಥಿಗಳು ಇದನ್ನು ಅರಿತುಕೊಳ್ಳಬೇಕು ಎಂದು ಹೇಳಿದರು. ರೆಡ್ ಕ್ರಾಸ್ ಸಂಸ್ಥೆಯ ಮುಖಂಡ ರಾಜೇಶ್ ಯಾವಗಲ್ ಮಾತನಾಡಿ, ಬಾಂಬೆ ಬ್ಲಡ್ ಗ್ರೂಪ್ ಕುರಿತ ಘಟನೆಯನ್ನು ವಿವರಿಸಿದರು.
ಕಾಲೇಜಿನ ಯುವ ರೆಡ್ ಕ್ರಾಸ್ ಘಟಕದ ಸಂಚಾಲಕ ಶಿವನಾಥ.ಈ.ಜಿ. ಮಾತನಾಡಿ, ರಕ್ತದಾನದಿಂದ ಹಿಮೊಗ್ಲೋಬಿನ್, ಪ್ಲಾಸ್ಮಾ, ಪ್ಲೇಟ್ ಲೆಟ್ಸ್ ಉತ್ತಮವಾಗಿರುತ್ತದೆ. ನಾವು ಬದುಕುವಷ್ಟೇ ಮುಖ್ಯವಾದದ್ದು ರಕ್ತದಾನದಿಂದ ಮತ್ತೊಬ್ಬರನ್ನು ಬದುಕಿಸುವುದು ಎಂದರು.
ಈ ಸಂದರ್ಭದಲ್ಲಿ ಬೋಧಕ ಸಿಬ್ಬಂದಿ ಅನುರಾಧಾ, ಡಾ.ಪ್ರಕಾಶ ಬಳ್ಳಾರಿ, ಡಾ.ತುಕಾರಾಮ ನಾಯ್ಕ, ಬಸವರಾಜ ಕರುಗಲ್ ಹಾಗೂ ವಿದ್ಯಾರ್ಥಿಗಳು ಇದ್ದರು ಕೊಪ್ಪಳ ವಿಶ್ವವಿದ್ಯಾಲಯ ಘಟಕದ ಎನ್‌ಎಸ್‌ಎಸ್ ಕಾರ್ಯಕ್ರಮಾಧಿಕಾರಿ ಗಾಯತ್ರಿ ಭಾವಿಕಟ್ಟಿ ಪ್ರಾಸ್ತಾವಿಕ ಮಾತನಾಡಿದರು. ಸ್ವ ಆರ್ಥಿಕ ಘಟಕದ ಎನ್‌ಎಸ್‌ಎಸ್ ಕಾರ್ಯಕ್ರಮಾಧಿಕಾರಿ ಡಾ.ಉಮೇಶ್ ಅಂಗಡಿ ಸ್ವಾಗತಿಸಿದರು. ಡಾ.ಮಹಾಂತೇಶ ನೆಲಾಗಣಿ ನಿರೂಪಿಸಿದರು. ವಿದ್ಯಾರ್ಥಿನಿ ಮಂಜುಳಾ ಪ್ರಾರ್ಥಿಸಿದರು. ಜ್ಞಾನೇಶ್ವರ ಪತ್ತಾರ ವಂದಿಸಿದರು.