ನವದೆಹಲಿ, ಅ 2: ಸರಳ ಸಜ್ಜನಿಕೆಯ ದೇಶದ ಎರಡನೇ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮ ದಿನ ಇಂದು. 1904 ರ ಅಕ್ಟೋಬರ್ 2 ರಂದು ಜನಿಸಿದ ಇವರು ಸ್ವಾತಂತ್ರ್ಯ ಚಳವಳಿಯಲ್ಲಿ ಸಕ್ರಿಯ ಪಾತ್ರ ನಿರ್ವಹಿಸಿದ್ದರು. ತಮ್ಮ ತತ್ವ ಸಿದ್ಧಾಂತಗಳೊಂದಿಗೆ ಸಾಮಾಜಿಕ ಪಿಡುಗುಗಳ ನಿವಾರಣೆಗೆ ಶ್ರಮಿಸಿದ್ದರು. ಜೈ ಜವಾನ್, ಜೈ ಕಿಸಾನ್ ಘೋಷಣೆ ಮೂಲಕ ಕೃಷಿಗೆ ಉತ್ತೇಜನ ನೀಡಿದ ಧೀಮಂತ ವ್ಯಕ್ತಿ ಎನಿಸಿಕೊಂಡಿದ್ದರು.
ಭಾರತಕ್ಕೆ ಸ್ವಾತಂತ್ರ್ಯ ದೊರೆತ ನಂತರ ಅವರು ಕೆಲ ಕಾಲ ರೈಲ್ವೆ, ವಿದೇಶಾಂಗ ವ್ಯವಹಾರ, ಗೃಹ ಸಚಿವರಾಗಿದ್ದರು. 1964 ರ ಜೂನ್ 9 ರಿಂದ 1966 ರ ಜನವರಿ 11 ರವರೆಗೆ ಭಾರತದ ಎರಡನೇ ಪ್ರಧಾನಿಯಾಗಿದ್ದರು. ಒಪ್ಪಂದಕ್ಕೆ ಸಹಿ ಹಾಕಲು 1966 ರ ಜನವರಿ 11 ರಂದು ಉಜ್ಬೇಕಿಸ್ತಾನಕ್ಕೆ ಭೇಟಿ ನೀಡಿದ್ದಾಗ ಕೊನೆಯುಸಿರೆಳೆದರು. ಗಾಂಧಿ ಅವರ ತತ್ವಾದರ್ಶಗಳನ್ನು ಅಳವಡಿಸಿಕೊಂಡಿದ್ದ ಸರಳ ಸಜ್ಜನಿಕೆಯ ಪ್ರಾಮಾಣಿಕ ವ್ಯಕ್ತಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರನ್ನು ದೇಶಾದ್ಯಂತ ಸ್ಮರಿಸಲಾಗುತ್ತಿದೆ.