ಹಂಪಿ 07: ಸಾಮಾನ್ಯರು ಜನ್ಮ ದಿನವನ್ನು ಆಚರಿಸಿದರೆ ಸಮಾಜಕ್ಕಾಗಿ ತಮ್ಮ ಸೇವೆಯನ್ನು ಮೀಸಲಿಟ್ಟು ಸಾಧನೆಮಾಡಿ ತಮ್ಮಲ್ಲಿರುವ ಜ್ಞಾನವನ್ನು ವಿದ್ಯೆಯ ರೂಪದಲ್ಲಿ ಸಾಮಾನ್ಯರಿಗೆ ನೀಡಿದವರ ಸ್ಮರಣೆಯ ಅಂಗವಾಗಿ ಜನ್ಮದಿನೋತ್ಸವವನ್ನು ಆಚರಣೆ ಮಾಡಲಾಗುತ್ತದೆ ಎಂದು ಬಾಗಲಕೋಟೆಯ ಬಸವೇಶ್ವರ ಕಲಾ ಮಹಾವಿದ್ಯಾಲಯದ ಸಂಗೀತ ಮತ್ತು ನೃತ್ಯ ವಿಭಾಗದ ಮುಖ್ಯಸ್ಥರಾದ ಡಾ. ಕಾಶಿಲಿಂಗ ಮಠ ಅವರು ಹೇಳಿದರು.
ಕನ್ನಡ ವಿಶ್ವವಿದ್ಯಾಲಯದ ಸಂಗೀತ ಮತ್ತು ನೃತ್ಯ ವಿಭಾಗ ವತಿಯಿಂದ 5ನೇ ಮಾರ್ಚ್ 2025ರಂದು ವಿಭಾಗದಲ್ಲಿ ಪಂಡಿತ್ ಪುಟ್ಟರಾಜ ಗವಾಯಿ ಹಾಗೂ ಗಂಗೂಬಾಯಿ ಹಾನಗಲ್ ಅವರ ಜನ್ಮ ದಿನೋತ್ಸವದ ಅಂಗವಾಗಿ ಅವರ ಜೀವನ ಮತ್ತು ಸಾಧನೆ ಎಂಬ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಪುಟ್ಟರಾಜ ಗವಾಯಿಗಳ ಜೀವನ ಚರಿತ್ರೆ ಎಂಬ ವಿಶೇಷ ಉಪನ್ಯಾಸದಲ್ಲಿ ಮಾತನಾಡುತ್ತ ಸಂಗೀತದಲ್ಲಿ ಧರ್ಮ, ಕರ್ಮ ಹಾಗೂ ರಕ್ತ ಸಂಬಂಧ ಇರುವುದಿಲ್ಲ, ಅಲೌಕಿಕ ಸಂಬಂಧ ಮಾತ್ರ ಇರುತ್ತದೆ. ಸಂಗೀತ ಕ್ಷೇತ್ರದಲ್ಲಿ ಪ್ರಮಾಣಪತ್ರಗಳು ಮುಖ್ಯವಲ್ಲ, ಸಂಗೀತ ಜ್ಞಾನ ಮುಖ್ಯವಾಗುತ್ತದೆ ಎಂದು ತಿಳಿಸಿದರು.
ಕನ್ನಡ ವಿಶ್ವವಿದ್ಯಾಲಯದ ಸಂಗೀತ ಮತ್ತು ನೃತ್ಯ ವಿಭಾಗದ ಮುಖ್ಯಸ್ಥರಾದ ಡಾ. ವೀರೇಶ ಬಡಿಗೇರ ಅವರು ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ, ಮಾತನಾಡಿದ ಅವರು ಕಷ್ಟ ಕಾಲದಲ್ಲಿ ಸಹಾಯ ಮಾಡಿದ ವ್ಯಕ್ತಿಗಳನ್ನು ಜೀವನದಲ್ಲಿ ಯಾವತ್ತೂ ಮರೆಯಬಾರದು. ನಾವು ಸೌಲಭ್ಯಗಳ ಸಂತೆಯಲ್ಲಿ ಇದ್ದೇವೆ ಆದರೆ ಕಲಿಕೆಯಲ್ಲಿ ವಂಚಿತರಾಗುತ್ತಿದ್ದೇವೆ. ಯಾವುದೇ ಸಂಪನ್ಮೂಲಗಳು ಏಕಕಾಲಕ್ಕೆ ಮುಗಿದು ಹೋಗಬಾರದು ಅವುಗಳನ್ನು ನಾವು ಸೂಕ್ತ ರೀತಿಯಲ್ಲಿ ಬಳಸಬೇಕು. ಇನ್ನು ಮುಖ್ಯವಾಗಿ ಶ್ರದ್ಧೆ ಆಸಕ್ತಿ ಇದ್ದರೆ ಮಾತ್ರ ಸಂಗೀತ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಬಹುದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವಿವಿಧ ವಿಭಾಗಗಳ ಮುಖಸ್ಥರು, ಪ್ರಾಧ್ಯಾಪಕರು, ಬೋಧಕ, ಬೋಧಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಮಲ್ಲಿಕಾರ್ಜುನ್ ಹೆಚ್. ಕಾರ್ಯಕ್ರಮವನ್ನು ನಿರೂಪಿಸಿದರು. ಹರೀಶ್ ಭಂಡಾರಿ ಅವರು ಗಣ್ಯರನ್ನು ಸ್ವಾಗತಿಸಿದರು. ದೊಡ್ಡಮನೆ ಜ್ಯೋತಿ ಕಾರ್ಯಕ್ರಮವನ್ನು ವಂದಿಸಿದರು.