ಮಧ್ಯ ವಿಯೆಟ್ನಾಂನಲ್ಲಿ ಹಕ್ಕಿ ಜ್ವರ ಉಲ್ಬಣ

ಹನೋಯ್, ಫೆ 11, ವಿಯೆಟ್ನಾಂನ ಕೇಂದ್ರ ಭಾಗವಾದ ತನ್ ಹೋವಾ ಪ್ರಾಂತ್ಯ ಹಕ್ಕಿ ಜ್ವರ ಪೀಡಿತ ಎರಡು ಜಿಲ್ಲೆಗಳಲ್ಲಿ  23,000 ಕ್ಕೂ ಹೆಚ್ಚು ಕೋಳಿ ಮತ್ತು  ಬಾತುಕೋಳಿಗಳನ್ನು ಕೊಲ್ಲಲಾಗಿದೆ ಎಂದು ವಿಯೆಟ್ನಾಂ ಸುದ್ದಿ ಸಂಸ್ಥೆ ಮಂಗಳವಾರ ವರದಿ ಮಾಡಿದೆ.ಮಂಗಳವಾರದ ವೇಳೆಗೆ, ನಾಂಗ್ ಕಾಂಗ್ ಮತ್ತು ಕ್ವಾಂಗ್ ಕ್ಸುವಾಂಗ್ ಜಿಲ್ಲೆಗಳ 10 ಮನೆಗಳಲ್ಲಿ ಎ- ಹೆಚ್ 5 ಎನ್ 6 ಹಕ್ಕಿ ಜ್ವರ ದಿಢೀರ್ ಪತ್ತೆಯಾಗಿದೆ ಎಂದು ಪ್ರಾಂತೀಯ ಜಾನುವಾರು ಇಲಾಖೆಯ ಹೇಳಿಕೆಯನ್ನು ಉಲ್ಲೇಖಿಸಿ ಸುದ್ದಿಸಂಸ್ಥೆ ವರದಿ ಮಾಡಿದೆ.ಈ ವರ್ಷ ಫೆ 3 ರಿಂದ ನಾಂಗ್ ಕಾಂಗ್ ಜಿಲ್ಲೆಯ ಒಂಬತ್ತು ಮನೆಗಳಲ್ಲಿ ಏಕಾಏಕಿ ಹಕ್ಕಿ ಜ್ವರ ಪತ್ತೆಯಾಗಿದ್ದು, ಸುಮಾರು 19,800 ಕೋಳಿಗಳನ್ನು ಸಾಯಿಸಲಾಗಿದೆ. ಫೆ 4 ರಿಂದ ಮೊದಲ ಬಾರಿಗೆ ಕ್ವಾಂಗ್ ಕ್ಸುವಾಂಗ್ ಜಿಲ್ಲೆಯ ಮನೆಯೊಂದರಲ್ಲಿ 3,300 ಕ್ಕೂ ಹೆಚ್ಚು ಕೋಳಿಗಳನ್ನು ಸಾಯಿಸಲಾಗಿದೆ. ಸಂಬಂಧಿತ ಸ್ಥಳೀಯ ಸಂಸ್ಥೆಗಳು ಸುತ್ತಮುತ್ತಲಿನ ಪ್ರದೇಶಗಳನ್ನು ಸೋಂಕು ರಹಿತಗೊಳಿಸಿದ್ದು, ಕೋಳಿಗಳಿಗೆ ಲಸಿಕೆ ಹಾಕುವ ಕಾರ್ಯವನ್ನು ಚುರುಕುಗೊಳಿಸಿವೆ. 2019 ರಲ್ಲಿ ವಿಯೆಟ್ನಾಂನಾದ್ಯಂತ 24 ಪ್ರಾಂತ್ಯಗಳ 41 ಜಿಲ್ಲೆಗಳಲ್ಲಿ ಹಕ್ಕಿಜ್ವರ ಏಕಾಏಕಿ ಉಲ್ಬಣಗೊಂಡಿತ್ತು. ಒಟ್ಟು 133,000 ಕ್ಕೂ ಹೆಚ್ಚು ಕೋಳಿಗಳನ್ನು ಸಾಯಿಸಲಾಗಿತ್ತು ಎಂದು ವಿಯೆಟ್ನಾಂ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಸಚಿವಾಲಯ ತಿಳಿಸಿದೆ.