ಲೋಕದರ್ಶನ ವರದಿ
ಸಿದ್ದಾಪುರ,20:. ತಾಲೂಕಿನ ಗುಂಜಗೋಡಿನ ಗಣಪತಿ ನಾ ಹೆಗಡೆಯವರ ಮನೆಯಲ್ಲಿ ಮೋಹಿನಿ ಏಕಾದಶಿಯಂದು ಭುವನೇಶ್ವರಿ ತಾಳ ಮದ್ದಳೆ ಕೂಟದ ವತಿಯಿಂದ ಸನ್ಮಾನ ಮತ್ತು ತಾಳಮದ್ದಳೆ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.
ಸುಷಿರ ಸಂಗೀತ ಪರಿವಾರದ ಸಂಚಾಲಕ ಹಾಗೂ ಸಂಘಟಕ ನಾರಾಯಣ ಹೆಗಡೆ ಕಲ್ಲಾರೆಮನೆಯವರಿಗೆ ತಿಮ್ಮಪ್ಪ ಹೆಗಡೆ ಅಳಗೋಡು ಇವರ ಹೆಸರಿನಲ್ಲಿ ನೀಡಲಾಗುವ ಪುರಸ್ಕಾರವನ್ನು ನೀಡಿ ಸನ್ಮಾನಿಸಲಾಯಿತು.ಈ ಸಂದರ್ಭದಲ್ಲಿ ಅಭಿನಂದನಾ ನುಡಿಗಳನ್ನಾಡಿದ ಶಂಕರ ಮಠದ ಧಮರ್ಾಧಿಕಾರಿ ವಿಜಯ ಹೆಗಡೆ ದೊಡ್ಮನೆ ನಾರಾಯಣ ಹೆಗಡೆಯವರ ಸಂಘಟನಾ ಶೃದ್ಧೆ, ಕಲೆ ಮತ್ತು ಸಂಸ್ಕೃತಿಯ ಕುರಿತು ಅವರಿಗಿರುವ ಕಾಳಜಿಯನ್ನು ಶ್ಲಾಘಿಸಿದರು. ಗಣಪತಿ ಹೆಗಡೆ ಗುಂಜಗೋಡ ದಂಪತಿಗಳು ಹಾಗೂ ವೇದಿಕೆಯ ಗಣ್ಯರು ನಾರಾಯಣ ಹೆಗಡೆಯವರನ್ನು ಸನ್ಮಾನಿಸಿದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ನಾರಾಯಣ ಹೆಗಡೆ ಕಳೆದ ಹದಿನೆಂಟು ವರ್ಷಗಳಿಂದ ಸುಷಿರ ಸಂಗೀತ ಪರಿವಾರ ಕಾರ್ಯನಿರ್ವಹಿಸುತ್ತಿದೆ. ಸಹೃದಯರ ಸಹಕಾರದಿಂದ ತಮ್ಮ ಸಂಘಟನೆಯಿಂದ ಹಲವು ಹತ್ತು ಕಾರ್ಯಕ್ರಮಗಳನ್ನು ನಡೆಸಲು ಸಾಧ್ಯವಾಗಿದೆ ಎಂದರು. ವೇದಿಕೆಯಲ್ಲಿ ಉಪಸ್ಥಿತರಿದ್ದ ಆರ್.ಟಿ.ಹೆಗಡೆ ಅಳಗೋಡ ಮಾತನಾಡಿದರು. ಶಿವಾನಂದ ಹೆಗಡೆ ಕೆರೆಮನೆ ಅಧ್ಯಕ್ಷತೆ ವಹಿಸಿದ್ದರು. ಅವರು ಮಾತನಾಡಿ ಕಲಾವಿದರಿಗೆ ಸನ್ಮಾನಗಳು ನಡೆಯುತ್ತಿರುತ್ತವೆ. ಕಲೆ ಉಳಿಯುವುದಕ್ಕೆೆ, ಕಲಾವಿದ ಬೆಳೆಯುವುದಕ್ಕೆ. ಸಂಘಟಕರು ಬಹಳ ಮುಖ್ಯರಾಗುತ್ತಾರೆ.ಕಲಾವಿದ ಕಾಣಿಸಿಕೊಳ್ಳುತ್ತಾನೆ. ಸಂಘಟಕ ಕಾಣಿಸಿಕೊಳ್ಳುವುದೇ ಇಲ್ಲ. ಸಂಘಟನೆ ಸುಲಭವಲ್ಲ. ನಾರಾಯಣ ಹೆಗಡೆ ತಮ್ಮ ಅನೇಕ ವರ್ಷಗಳ ಸೇವೆಯಿಂದ ಜನಮೆಚ್ಚುಗೆ ಪಡೆದಿದ್ದಾರೆ ಎನ್ನುವುದಕ್ಕೆ ಈ ಸನ್ಮಾನ ಸಾಕ್ಷಿ ಎಂದರು. ಗಣಪತಿ ಗುಂಜಗೋಡು ಸ್ವಾಗತಿಸಿದರು. ಶ್ರೀಕಾಂತ ಭಟ್ಟ ಮುತ್ತಿಗೆ ವಂದಿಸಿದರು. ಶೇಷಗಿರಿ ಭಟ್ಟ ಗುಂಜಗೋಡ ನಿರೂಪಿಸಿದರು.
ನಂತರ ನಡೆದ ಭೀಷ್ಮ ವಿಜಯ ತಾಳಮದ್ದಳೆಯಲ್ಲಿ ಗಜಾನನ ಭಟ್ಟ ತುಳಗೇರಿಮಠ, ಶೇಷಗಿರಿ ಭಟ್ಟ ಗುಂಜಗೋಡ ಭಾಗವತರಾಗಿ, ಮಂಜುನಾಥ ಹೆಗಡೆ ಕಂಚಿಮನೆ ಮದ್ದಳೆವಾದಕರಾಗಿ ಉತ್ತಮ ಹಿಮ್ಮೇಳ ಒದಗಿಸಿದರು. ಅರ್ಥದಾರಿಗಳಾಗಿ ಶಿವಾನಂದ ಹೆಗಡೆ ಕೆರೆಮನೆ(ಭೀಷ್ಮ-ಮೊದಲಭಾಗ),ಗಣಪತಿ ಹೆಗಡೆ(ಪ್ರತಾಪಸೇನ), ಕೌಸ್ತುಭ ಹೆಗಡೆ ಅಳಗೋಡು(ಮಂತ್ರಿ),ಜೈರಾಮ ಭಟ್ಟ ಗುಂಜಗೋಡ(ಅಂಬೆ) ,ಶ್ರೀಧರ ಭಟ್ಟ ಮುತ್ತಿಗೆ (ದೃಢಸೇನ), ಪರಮೇಶ್ವರ ಹೆಗಡೆ(ಸಾಲ್ವ ಮೊದಲಭಾಗ), ಗಣೇಶ ಭಟ್ಟ , ಟಿ.ಎಂ.ರಮೇಶ(ಬ್ರಾಹ್ಮಣ), ಎಂ.ಜಿ.ಭಟ್ಟ (ದೂತ), ಎಂ.ಕೆ.ನಾಯ್ಕ ಹೊಸಳ್ಳಿ (ಸಾಲ್ವ -ಎರಡನೇಭಾಗ), ಮಂಜುನಾಥ ಗೊರಮನೆ (ಭೀಷ್ಮ -2ನೇಭಾಗ), ವಿ.ಶೇಷಗಿರಿ ಭಟ್ಟ (ಪರಶುರಾಮ), ಎಂ.ಕೆ.ಹೆಗಡೆ ಹಳದೋಟ(ಅಕೃತವ್ರಣ)ಪಾತ್ರಗಳನ್ನು ನಿರ್ವಹಿಸಿದರು.