ತೆರೆಯಿಂದ ಮರೆಯಾದ ಹಿರಿಯ ಪತ್ರಕರ್ತ ಭೀಮಸೇನ ತೊರಗಲ್ಲ ಒಂದು ನೆನಪು

ಮರೆಯಾದ ಹಿರಿಯ ಜೀವಿ, ಬೆಳಗಾವಿ ಪತ್ರಿಕೋದ್ಯಮದ ಹೆಸರಾಂತ ಪತ್ರಕರ್ತ ಭೀಮಸೇನ ತೊರಗಲ್ಲ ಪತ್ರಿಕಾರಂಗಕ್ಕೆ ಸಲ್ಲಿಸಿದ ಸೇವೆ ಅಪಾರವಾಗಿದೆ. 

ತಮ್ಮದೇ ಆದ ವಿಶಿಷ್ಟ ವ್ಯಕ್ತಿತ್ವವನ್ನು ಹೊಂದಿದ್ದ ಇವರು ತೀರಿ ಇದೆ ಫೇಬ್ರುವರಿ 7ಕ್ಕೆ 1 ವರ್ಷಗಳು ಮುಗಿಯುತ್ತಿವೆ.   

ಬೆಳಗಾವಿ ಪತ್ರಿಕಾರಂಗದ ಭೀಷ್ಮ ಎಂದು ಹೆಸರಾಗಿದ್ದ ಭೀಮಸೇನ್ ತೊರಗಲ್ಲ ಅವರ ಕುರಿತು ಎಷ್ಟು ಬರೆದರೂ ಕಡಿಮೆಯೇ ಎನಿಸಿರುವುದು ನಿಜ. ಸಾಹಿತ್ಯ, ಸಂಸ್ಕೃತಿ, ಸಮಾಜಿಕ, ಶೈಕ್ಷಣಿಕ, ರಂಗಭೂಮಿ, ಪತ್ರಿಕಾರಂಗ, ಕನ್ನಡ ಹೋರಾಟ ಹೀಗೆ ಅವರ ಕಾರ್ಯಕ್ಷೇತ್ರಗಳನ್ನು ನೋಡುತ್ತಾ ಹೋದಂತೆ ಅವರ ವ್ಯಕ್ತಿತ್ವದ ಪರಿಚಯವಾಗುತ್ತಾ  ಹೋಗುತ್ತದೆ. 

ಕತ್ತಿಗಿಂತ ಲೇಖನಿ ಹರಿತ ಎಂಬ ಮಾತನ್ನು ಸಾಧ್ಯವಾಗಿಸಿ ತೋರಿಸಿದವರು ಭೀಮಸೇನ ತೊರಗಲ್ಲ. ಅವರ ಸಂಪಾದಕೀಯ “ಪ್ರಚಲಿತ” ದಿನಪತ್ರಿಕೆ ಹಾಗೂ “ಸಮತೋಲ” ದಿನಪತ್ರಿಕೆಗಳ ಮೂಲಕ ಸಮಾಜದಲ್ಲಿಯ ಅನ್ಯಾಯ ಭ್ರಷ್ಟಾಚಾರಿಗಳ ಕರಾಳ ಮುಖಗಳನ್ನು ಪತ್ರಿಕೆಗಳಲ್ಲಿ ತಮ್ಮ ಹರಿತ ಬರಹಗಳ ಮೂಲಕ ಬಯಲಿಗೆಳೆದು ಜನಸಾನ್ಯರಲ್ಲಿ ಜಾಗೃತಿ ಮೂಡಿಸಿದ ಬಹುಮುಖ ಪ್ರತಿಭೆಯ ಪತ್ರಕರ್ತರಲ್ಲಿ ಒಬ್ಬರು ಎಂದರೆ ಅತಿಶಯೋಕ್ತಿಯಾಗಲಾರದು. 

ಇವರ ಬದುಕು ಬರಹ ಒಂದೇ ಆಗಿತ್ತು. ಆದರೆ ಇತ್ತೀಚೆಗೆ ಗಮನಿಸಲಾಗಿ ಸಾಹಿತ್ತಿಕ ಕ್ಷೇತ್ರ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಬದುಕು ಬರಹದ ಅಂತರ ಹೆಚ್ಚಾಗಿದೆ. ಅದನ್ನು ಸಮರ್ಥಸಲೂ ವಿಕೃತ ವಿಚಾರಧಾರೆಗಳು ಸೃಷ್ಟಿಯಾಗಿವೆ. ಇದು ತೀರಾ ಅಪಾಯಕಾರಿ ಬೆಳವಣಿಗೆ. ಬದುಕಿದಂತೆ ಬರೆಯಬೇಕಿಲ್ಲ. ಬರೆದಂತೆ ಬದುಕಬೇಕಿಲ್ಲ ಎಂಬ ಆತ್ಮವಂಚಕ ಮನಸ್ಸು ಬಹುತೇಕರಲ್ಲಿ ಮೂಡಿದೆ ಎನ್ನಬಹುದು. ಅಕ್ಷರದ ಅಹಂಕಾರ ಹೆಚ್ಚಾಗಿರುವುದು ವಿಷಾಧನೀಯ. ವಾಸ್ತವದಿಂದ ದೂರವಾದ ಯಾವ ಬರಹಗಳೂ ದೀರ್ಘಕಾಲ ಉಳಿಯುವುದಿಲ್ಲ. 

ತೊರಗಲ್ಲ ಅವರ ಬರಹಗಳಲ್ಲಿ ಭಾವನೆಗಳ ವ್ಯಕ್ತಪಡಿಸುವಿಕೆ ಅನುಭವ, ಅನಿಸಿಕೆಗಳು, ವಾಸ್ತವಗಳು, ಆದರ್ಶ, ಕಲ್ಪನೆಗಳು ಆಯಾ ವಿಷಯಕ್ಕನುಗುಣವಾಗಿ ನೇರಾನೇರವಾಗಿರುತ್ತಿದ್ದವು. ಸಂಪಾದಕೀಯ ಬರಹದಲ್ಲಂತು ಎಂದೂ ಯಾರೊಂದಿಗೂ ರಾಜಿಮಾಡಿಕೊಂಡು ಬರೆಯುತ್ತಿರಲಿಲ್ಲ.  

ಅಪಾರ ತಾಳ್ಮೆ ಹೊಂದಿದ್ದ, ನಿಷ್ಠೂರ ವ್ಯಕ್ತಿತ್ವ ನಿರ್ಭಿಡೆಯ ಬರಹಗಾರ ಸಂಘಟನಾ ಚತುರ, ಅಪಾರ ಸ್ನೇಹ ಜೀವಿ, ಸಾತ್ವಿಕ ನಡುವಳಿಕೆ ದಿಟ್ಟ ನಿಲುವು, ಕನ್ನಡಾಭಿಮಾನಿ, ಪುಸ್ತಕ ಪ್ರೇಮಿ, ಸುಸಂಸ್ಕೃತ ನಡೆನುಡಿ ಹೊಂದಿದ್ದ ಭೀಮಸೇನ ತೊರಗಲ್ಲರದ್ದು ಅಪರೂಪದ ವ್ಯಕ್ತಿತ್ವ. 

ಹಿರಿಯ ಜೀವಿ ಹೆಸರಾಂತ ಪತ್ರಕರ್ತ ಭೀಮಸೇನ ತೊರಗಲ್ಲ ಅವರ ಹುಟ್ಟೂರು ಬೆಳಗಾವಿ 1940ರಲ್ಲಿ ಮಧ್ಯಮ ವರ್ಗದ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದರು. ತಂದೆ ವೆಂಕಟೇಶ ತೋರಗಲ್, ಶಿಕ್ಷಕರಾಗಿದ್ದವರು, ತಾಯಿ ತಾರಾ. 

ತಂದೆಯ ಸಾಂಗತ್ಯದಲ್ಲಿ ಕನ್ನಡ ಸಾಹಿತ್ಯವನ್ನು ಅಭ್ಯಸಿಸಿದ್ದ ಇವರಿಗೆ ಸಾಹಿತ್ಯದಲ್ಲಿ ಆಸಕ್ತಿ ಬೆಳೆಯಿತು. ಓದಿದ್ದು ಬಿ.ಎಸ್‌.ಸಿ, ವಿಧ್ಯಾರ್ಥಿದಿಸೆಯಿಂದ ಗಣೀತ ಶಾಸ್ತ್ರದಲ್ಲಿ ಇವರಿಗೆ ತುಂಬಾ ಆಸಕ್ತಿ, ಕಾಲೇಜು ದಿನಗಳಲ್ಲಿಯೇ ತೋರಗಲ್ ಅವರು ಅಂತರರಾಷ್ಟ್ರೀಯ ಗಣೀತದ ಜರ್ನಲ್‌ನಲ್ಲಿ ಧೀರ್ಘಕಾಲದ ಗಣೀತದ ಸಮಸ್ಯೆಯನ್ನು ಪರಿಹರಿಸುವ ಲೇಖನವನ್ನು ಪ್ರಕಟಿಸಿದರು. ಇವರ ಬದುಕಿನ ಪಯಣ ಅನೇಕ ರೋಚಕಗಳನ್ನು ಒಳಗೊಂಡಿದೆ ಎಂದೆನಿಸದೇ ಇರದು.  

ಪದವಿನಂತರದಲ್ಲಿ ಜೀವನೋಪಾಯಕ್ಕಾಗಿ ಮುಂಬೈಗೆ ಪ್ರಯಾಣ ಬೆಳೆಸುತ್ತಾರೆ. ಹೊಟೇಲ್ ತಾಜ್‌ನಲ್ಲಿ ವ್ಯಾಪಾರ ನಿರ್ವಹಣೆ ಮತ್ತು ಮಾರಾಟಗಾರ ತರಬೇತಿ ಪಡೆದ ಇವರು ತದನಂತರ “ಹೆಕ್ಸ-್ಟ“ ಫಾರ್ಮಾಸ್ಯಟಿಕಲ್ ಕಂಪನಿಯಲ್ಲಿ ವೈಧ್ಯಕೀಯ ಪ್ರತಿನಿಧಿಯಾಗಿ ಕೆಲಸ ನಿರ್ವಹಿಸುತ್ತಾರೆ. 

ಯಾವಾಗಲು ಹೊಸತನ ಹುಡುಕುವ ಮನಸ್ಸು ಅಪೇಕ್ಷಿಸಿದಂತೆ ಮುಂಬೈ ನಲ್ಲಿ “ ಪ್ಲಾಸ್ಟಿಲ್ಸ್‌ “ ಎಂಬ ಉಧ್ಯಮ ಪ್ರಾರಂಭಿಸಿ ಪಿವಿಸಿ ಲೈನಿಂಗಗಳು ಮತ್ತು ಆಸಿಡ್  ಪ್ರೂಫ್ ಟ್ಯಾಂಕರಗಳನ್ನು ತಯಾರು ಮಾಡಿ ಯಶಸ್ವಿ ಉದ್ಯಮಿ ಅನಿಸಿಕೊಂಡಿದ್ದುಂಟು. 

ಸ್ವಲ್ಪ ದಿನಗಳ ನಂತರದಲ್ಲಿ ಮೂಲ ನೆಲ ಬೆಳಗಾವಿ ಕೈಮಾಡಿ ಭೀಮಸೇನ ತೊರಗಲ್ಲ ಅವರನ್ನು ಕರೆಯುತ್ತದೆ.  ಮುಂಬೈಯಲ್ಲಿ ಯಶಸ್ವಿ ಉದ್ಯಮಿಯಾಗಿ, ಮಾರ್ಕೇಟಿಂಗ ಎಕ್ಸಿಕ್ಯೂಟಿವ್ ಆಗಿ ಪಳಗಿದ ಇವರು “ ಮುದ್ರಣಾಧಾರ “ ಎಂಬ ಮುದ್ರಣ ಘಟಕ ಬೆಳಗಾವಿಯಲ್ಲಿ ಸ್ಥಾಪಿಸಿ, ಡಾ.ಶಿವರಾಮ ಕಾರಂತ ಅವರಿಂದ ಉದ್ಘಾಟನೆ ಮಾಡಿಸುತ್ತಾರೆ. ಸೆಕೆಂಡುಗಳಲ್ಲಿ ಸಾವಿರಾರು ಮುದ್ರಣಗಳನ್ನು ಮುದ್ರಿಸಲು ಸಾಧ್ಯವಾಗುವ ಈ ಘಟಕ ಉತ್ತರ ಕರ್ನಾಟಕದಲ್ಲಿಯೇ ಮೊದಲನೆಯದು ಎಂಬ ಹೆಮ್ಮೆಗೆ ಪಾತ್ರವಾಗುತ್ತದೆ. ಇದು ಬೆಳಗಾವಿ ಇತಿಹಾಸದ ಧಾಖಲೆಗಳಲ್ಲಿ ಸೇರಬೇಕಾದ ಹೆಮ್ಮೆಯ ವಿಷಯ.  

ಸಾಮಾಜಿಕ ಕಳಕಳಿ ಹೋಂದಿದ ಇವರು “ಪ್ರತಿಭಾ” ಎಂಬ ಮುದ್ರಣಾಲಯ ಪ್ರಾರಂಭಿಸಿ ಎಸ್‌.ಎಸ್‌.ಎಲ್‌.ಸಿ ಮಕ್ಕಳಿಗೆ “ಎಸ್‌.ಎಸ್‌.ಎಲ್‌.ಸಿ ಮಾರ್ಗದರ್ಶಿ” ಎಂಬ ಪುಸ್ತಿಕೆಯನ್ನು ಪ್ರಕಟಿಸುತ್ತಾರೆ. ಅಮೋಘ ಪ್ರಕಾಶನ ಎಂಬ ಸಂಸ್ಥೆ ಸ್ಥಾಪಿಸಿ ಬೆಲೆಯುಳ್ಳ ಅನೇಕ ಪುಸ್ತಕ, ಕಾದಂಬರಿಗಳನ್ನು ಮುದ್ರಿಸುತ್ತಾರೆ. ಕೆಲವೊಂದು ಕೃತಿಗಳು ಅಕಾಡಮಿಯಿಂದ ಬಹುಮಾನ ಪಡೆದಿವೆ. 

ಭೀಮಸೇನ ತೋರಗಲ್ ಎಂದೂ ಪ್ರಚಾರದ ಬೆನ್ನು ಹತ್ತಲಿಲ್ಲವೆಂದೆ ಹೇಳಬೇಕು. ಅವರು ಸ್ಥಾಪಿಸಿದ ಸಂಘ ಸಂಸ್ಥೆಗಳಿಗೆ ಲೆಕ್ಕವಿಲ್ಲ. ಇಂದೂರಿನಲ್ಲಿದ್ದಾಗ ಸ್ಥಾಪಿಸಿದ ಕರ್ನಾಟಕ ಸಂಘ ಇನ್ನೂ ಉಛ್ಚಾಯ ಸ್ಥಿತಿಯಲ್ಲಿದೆ. ಈಗ ಹೆಮ್ಮರವಾಗಿ ನಿಂತಿರುವ ಬೆಳಗಾವಿ ಜಿಲ್ಲಾ ಸಾಹಿತ್ಯ ಪ್ರತಿಷ್ಠಾನದ ಸ್ಥಾಪಕರು ಭೀಮಸೇನ ತೋರಗಲ್ ಅವರು ಎಂಬುದು ವಿಶೇಷ. ಹೀಗೆ ಹತ್ತು ಹಲವಾರು ಸಂಸ್ಥೆಗಳನ್ನು ಸ್ಥಾಪಿಸಿ ಅವು ಭದ್ರವಾಗಿ ಬೇರೂರುವಂತೆ ಆರ್ಥಿಕ ಯೋಜನೆಗಳನ್ನು ಹಾಕಿಕೊಟ್ಟು ಅವು ನೈತಿಕತೆಯಿಂದ ಮುನ್ನಡೆಯುವಂತೆ ಸರಿಯಾದ ಮಾರ್ಗಸೂಚಿಗಳನ್ನು ಹಾಕಿಕೊಡುತ್ತಿದ್ದರು. ಆದರೆ ಅವರಿಗೆ ಸಲ್ಲಬೇಕಾದ ಕೀರ್ತಿಯನ್ನು ತಮ್ಮ ಮುಡಿಗೇರಿಕೊಂಡು ಬೀಗುವ ಭಂಡ ಪ್ರಚಾರ ಪ್ರೀಯ ಸಾಕಷ್ಟು ಜನರು ತಮ್ಮ ಸುತ್ತಲೇ ಇದ್ದುದನ್ನು ಗುರುತಿಸಿದರೂ ಅವರೆಂದೂ ಅಂಥವರನ್ನು ಎಂದೂ ದ್ವೇಷಿಸಲಿಲ್ಲ ಸಾಧನೆಯ ಮಾರ್ಗ ನನ್ನದು ಎನ್ನುತ್ತಿದ್ದರು ಎಂದು ಅವರ ಪತ್ನಿ ಭಾರತಿ ತೋರಗಲ್ ನೆನಪಿಸಿಕೊಳ್ಳುತ್ತಾರೆ. 

ಪತ್ನಿ ಭಾರತಿ ತೋರಗಲ್ ಅವರು ಕೂಡ ಪತಿಯಂತೆ ಹಲವು ಸಂಘ ಸಂಸ್ಥೆಗಳೊಂದಿಗೆ ಒಡನಾಟ ಇಟ್ಟುಕೊಂಡವರು ಬೆಳಗಾವಿ ಜಿಲ್ಲಾ ಸಂಗೀತ ಪ್ರತಿಷ್ಠಾನದ ಸ್ಥಾಪಕರು.  

ಭೀಮಸೇನ ತೊರಗಲ್ಲ ಮುಡನಂಬಿಕೆಗಳನ್ನು ಎಂದು ನಂಬುತ್ತಿರಲಿಲ್ಲ. ಮೊದಲು ನಮ್ಮ ಮೇಲೆ ನಮಗೆ ವಿಶ್ವಾಸವಿರಬೇಕು ಎನ್ನುತ್ತಿದ್ದರು. ವಿಜ್ಞಾನ ತಂತ್ರಜ್ಞಾನ ಬೆಳವಣಿಗೆ ಹೊಂದಿದ್ದರೂ ಸಮಾಜದಲ್ಲಿ ಮೂಡನಂಬಿಕೆ ತಾಂಡವವಾಡುತ್ತಿದೆ. ಮೌಢ್ಯ ಇದ್ದ ಕಡೆ ಅಜ್ಞಾನ ಇರುತ್ತದೆ. ಅಜ್ಞಾನ ದಿಂದ ಕ್ರೌರ್ಯ ಹೆಚ್ಚುತ್ತದೆ. ಕ್ರೌರ್ಯ ಮಾನವೀಯತೆ ಮರೆಸುತ್ತದೆ. ಮೂಢನಂಬಿಕೆಯ ವಿರುದ್ಧ ಜನರಲ್ಲಿ ಜಾಗೃತಿ ಮೂಡಿಸಬೇಕಾದ ಅಗತ್ಯವಿದೆ. ದೇವರಲ್ಲಿ ನಂಬಿಕೆ ಇರಬೇಕು ಮೂಢನಂಬಿಕೆ ಅಲ್ಲ. ಆದರೆ ದೇವರ ಹೆಸರಿನಲ್ಲಿ ಬಲಿ ಕೊಡುವುದು, ವಾಮಾಚಾರ, ಮಾಟ, ಮಂತ್ರ ಅಮಾನವೀಯ ಆಚರಣೆಯಾಗಿದೆ. ಇದನ್ನು ತಡೆಯಬೇಕು ಎಂದು ಪ್ರತಿಪಾದಿಸುತಿದ್ದರು.  

ಸುಸಂಸ್ಕೃತ ಹಿನ್ನೆಲೆಯ ಭೀಮಸೇನ ತೊರಗಲ್  ತಮ್ಮ ಮೇಧಾಶಕ್ತಿಯಿಂದ ಪತ್ರಿಕೋಧ್ಯಮದಲ್ಲಿ ತಮ್ಮದೇ ಆದ ವಿಶೇಷ ಛಾಪನ್ನು ಮೂಡಿಸಿದ್ದು, ಅವರ ಸಂಪಾದಕತ್ವದ ಸಮತೋಲ ದಿನಪತ್ರಿಕೆಯಲ್ಲಿ ಆರ್ಥಿಕ, ರಾಜಕೀಯ ವಿಶ್ಲೇಷಕರಾಗಿ ಸಾಂಸ್ಕೃತಿಕ ಚಿಂತಕರಾಗಿ ಇವರು ಸಂಜೆ ಬರೆದ ವಿಷಯಗಳು ಮರುದಿನ ರಾಷ್ಟ್ರೀಯ ಪತ್ರಿಕೆಗಳ ಹೆಡ್ ಲೈನ್ ಆಗಿರುತ್ತಿದ್ದವು. ಇವರ ನಿಸ್ಪಕ್ಷಪಾತ ಸಂಪಾದಕೀಯ ಲೇಖನಗಳು ಹಾಗೂ ವಿವಿಧ ವಿಷಯಗಳ ಮೇಲಿನ ವೈಚಾರಿಕ ಲೇಖನಗಳಿಗಾಗಿ ನಾಡಿನ ಪ್ರಮುಖ ಪತ್ರಿಕೆಗಳಿಂದ ಅಹ್ವಾನ ಬಂದದ್ದು ಇದೆ. ಇವರ ಅನೇಕ ಲೇಖನಗಳು, ರಾಜಕೀಯ ವಿಶ್ಲೇಷಣೆ ನಾಡಿನ ಪ್ರಮುಖ ದಿನಪತ್ರಿಕೆಗಳಲ್ಲಿ ಪ್ರಕಟವಾಗಿ ಜನಮನ್ನಣೆ ಪಡೆದಿವೆ. ಇವರ ಚಿಂತನೆಗಳು ಆಕಾಶವಾಣಿ, ಧಾರವಾಡ, ಬೆಂಗಳೂರು ನಿಂದ ಪ್ರಸಾರವಾಗಿವೆ. 

ಭೀಮಸೇನ ತೊರಗಲ್ಲರದು ದೂರದೃಷ್ಟಿ ಮುಂದಿನ ಆಗು ಹೋಗುಗಳಿಗೆ ಇಂದೆ ಸ್ಪಂದಿಸುವ ತವಕ. ಹದಿನೈದು ವರ್ಷಗಳ ಹಿಂದೆಯೇ ಮೊಬೈಲ್ ಫೋನುಗಳ ಕಸದ ರಾಶಿಯ ಬಗ್ಗೆ ಎಚ್ಚರಿಕೆಯ ಮಾತುಗಳ ಕುರಿತು ಪತ್ರಿಕೆಯಲ್ಲಿ ಲೇಖನ ಬರೆದಿದ್ದರು. 

ಇಂದಿರಾ ಗಾಂಧಿ ಮುಕ್ತ ವಿಶ್ವವಿಧ್ಯಾಲಯ ಹಾಗೂ ಹಂಪಿ ವಿಶ್ವವಿಧ್ಯಾಲಯದಲ್ಲಿ ರಾಜಕೀಯ, ಪ್ರಚಲಿತ ಮಾನವ ಹಿತಾಸಕ್ತಿ, ಪತ್ರಿಕಾರಂಗ ಸಂವಹನ ಕೌಶಲ್ಯ ಹೀಗೆ ಅನೇಕ ವಿಷಯಗಳ ಕುರಿತು ವಿಧ್ಯಾರ್ಥಿಗಳಿಗೆ ಉಪನ್ಯಾಸ ನೀಡಲು ಹೋಗುತ್ತಿದ್ದ ಇವರು ವಿಧ್ಯಾರ್ಥಿಗಳ ನೆಚ್ಚಿನ ಪ್ರಾಧ್ಯಾಪಕರಾಗಿದ್ದರು.       

1983 ಮೊಳೆಗಳನ್ನು ಜೋಡಿಸಿ ಪತ್ರಿಕೆಗಳನ್ನು ಮುದ್ರಣ ಮಾಡುತ್ತಿದ್ದ ಕಾಲವದು. ಪತ್ರಿಕೆಯನ್ನು ನಡೆಸುವಲ್ಲಿ ಅನೇಕ ಏಳುಬೀಳುಗಳನ್ನು ಕಂಡಿದ್ದ ಇವರು ತನ್ನಿಂದ ಪತ್ರಿಕಾರಂಗಕ್ಕೆ ಹೊಸತನದೊಂದಿಗೆ ಬದಲಾವಣೆಗೆ ನಾಂದಿಹಾಡುವ ಮೂಲಕ ಬೆಳಗಾವಿಯಲ್ಲಿ ಮೊಟ್ಟ ಮೊದಲ ಬಾರಿ ಪತ್ರಿಕಾರಂಗಕ್ಕೆ ಕಂಪ್ಯೂಟರ್ ಪರಿಚಯಿಸಿದ ಶ್ರೇಯಸ್ಸು ಭೀಮಸೇನ ತೊರಗಲ್ಲ ಅವರಿಗೆ ಸಲ್ಲುತ್ತದೆ. 

ಆ ದಿನಗಳಲ್ಲಿ ಕನ್ನಡ ಸಾಫ್ಟವೇರ್‌ಗಳು ಇರಲಿಲ್ಲ. ಅಮೇರಿಕದ ಆಪಲ್ ಕಂಪನಿಯನ್ನು ಸಂಪರ್ಕಿಸಿ ಕನ್ನಡ  ಸಾಫ್ಟ ವೇರ್ ರೆಡಿ ಮಾಡಿಸಿಕೊಂಡಿದ್ದು ಸಾಹಸದ ಕೆಲಸವೆ ಆಗಿತ್ತು. ಆ ದಿನಗಳಲ್ಲಿ 5 ಲಕ್ಷಕ್ಕೂ ಹೆಚ್ಚು ರೂಪಾಯಿಗಳನ್ನು ಕನ್ನಡ ಸಾಫ್ಟವೇರ್‌ಗಾಗಿ ಸಾಲ ಮಾಡಿದ್ದು ಇತಿಹಾಸ.  

ಪತ್ರಿಕೋದ್ಯಮದಲ್ಲಿ ಕಂಪ್ಯೂಟರ್‌ನ್ನು ಯಶಸ್ವಿಯಾಗಿ ಉಪಯೋಗಿಸಿದ ಭೀಮಸೇನ ತೊರಗಲ್ಲ ತಾವು ತಂದ ಕಂಪ್ಯೂಟರ್ ತಂತ್ರಜ್ಞಾನವನ್ನು ತಮಗೆ ಮಾತ್ರ ಸೀಮಿತ ಮಾಡಿಕೊಳ್ಳದೆ ತಂದ ತಂತ್ರಜ್ಞಾನವನ್ನು ಬೆಳಗಾವಿಯ ಸ್ಥಳಿಯ, ನಾಡೋಜ್, ತರುಣ ಭಾರತ, ನ್ಯೂಸ್ ಲಿಂಕ್, ಪಾಟೀಲ್ ಪುಟ್ಟಪ್ಪ ಅವರ ಪ್ರಪಂಚ ಮುಂತಾದ ಇತರ ಪತ್ರಿಕೆಗಳೊಂದಿಗೆ ಹಂಚಿಕೊಳ್ಳುತ್ತಾರೆ. ಅಷ್ಟೇ ಅಲ್ಲ, ನಿಸ್ವಾರ್ಥತೆಯಿಂದ ಪ್ರತಿಯೊಬ್ಬರಿಗೂ ಪತ್ರಿಕೆಗಳಿಗೆ ಕಂಪ್ಯೂಟರ್ ಉಪಯೋಗಿಸಿಕೊಳ್ಳುವ ಕುರಿತು ತರಬೇತಿ ನೀಡುತ್ತಾರೆ. 

ಪತ್ರಿಕೆಗಳಲ್ಲಿ ಕಂಪ್ಯೂಟರ್ ಗಳನ್ನು ಅಳವಡಿಸಿಕೊಂಡು ಸುದ್ದಿ ಮುದ್ರಣವನ್ನು ಇನ್ನು ಹೆಚ್ಚು ವೇಗ ಹಾಗೂ ಪರಿಣಾಮಕಾರಿಯಾಗಿ ಪ್ರಾರಂಭಿಸಲು ಸ್ಥಳೀಯ ಪತ್ರಿಕೆಗಳನ್ನು ಹುರುದುಂಬಿಸಿದ ತೋರಗಲ್ಲ ಸ್ವಾರ್ಥವನ್ನು  ತಮ್ಮ ಬಳಿ ಸುಳಿಯಲು ಎಂದೂ ಬಿಡಲಿಲ್ಲ.  

ಕೇವಲ ಪತ್ರಿಕೋಧ್ಯಮ ಅವರ ಕ್ಷೇತ್ರವಾಗಿರಲಿಲ್ಲವೆಂದೆ ಹೇಳಬೇಕು ಸಾಮಾಜಿಕ ಸಾಂಸ್ಕೃತಿಕ ಸಾಹಿತ್ತಿಕ ಚಟುವಟಿಕೆಗಳಲ್ಲು ತಮ್ಮನ್ನು ತೊಡಗಿಸಿಕೊಂಡ ಭೀಮಸೇನ್ ತೊರಗಲ್ಲ ಪ್ರತಿ ವಾರಂತ್ಯದಲ್ಲಿ ಒಬ್ಬ ವಿದ್ವಂಸರನ್ನು ಆಹ್ವಾನಿಸಿ ಬೌದ್ಧಿಕ ಮಟ್ಟದಲ್ಲಿ ಮೌಲ್ಯಯುತವಾದ ಉಪನ್ಯಾಸ ಮಾಲಿಕೆಯನ್ನು ಏರಿ​‍್ಡಸಿ “ಥಿಂಕರ್ಸ ಕ್ಲಬ್‌” ಎಂಬ ಕ್ಲಬ್ ನ್ನು ಪ್ರಾರಂಭಿಸಿದ್ದುಂಟು. 

ಎಲೆಯಮರೆಯ ಕಾಯಿಯಂತಿದ್ದ ಪ್ರತಿಭಾವಂತ ಲೇಖಕರ ಕೃತಿಗಳನ್ನು ಗುರುತಸಲು ಹಾಗೂ  ಪ್ರೋತ್ಸಾಹಿಸಲು “ಅಮೋಘ ವಾಙ್ಮಯ ಪ್ರಸಾರ” ಎಂಬ ಪ್ರಕಾಶನ ಸಂಸ್ಥೆಯನ್ನು ಪ್ರಾರಂಭಿಸಿ ಅವುಗಳನ್ನು ಪ್ರಕಟಿಸಿದ್ದಾರೆ. 

ಎಸ್‌.ಎಲ್‌. ಬೈರ​‍್ಪನವರು ಮಹಾಭಾರತದ ವಸ್ತು ವಿನ್ಯಾಸ ತೆಗೆದುಕೊಂಡು “ಪರ್ವ” ಬರೆದಿದ್ದು, ಕನ್ನಡದ ಮಟ್ಟಿಗೆ ಒಂದು ರೀತಿಯ ವೈಚಾರಿಕತೆಯ ನೆಲೆಯನ್ನು ಶೋಧಿಸಿಕೊಳ್ಳುತ್ತಲೆ ಕಲಾಕೃತಿಯನ್ನಾಗಿಸುವ ಸಾಹಸದಲ್ಲಿ ಬೈರ​‍್ಪನವರು ಸಾಕಷ್ಟು ಯಶಸ್ವಿಯಾಗಿದ್ದಾರೆ. 

ಇದೆ ಹಿನ್ನೆಲೆಯಲ್ಲಿ ಮಹಾಭಾರತದ ವಸ್ತು ವಿನ್ಯಾಸದ ಒಂದು ಕೊನೆ ಕೊಂಡಿಯನ್ನು ಹಿಡಿದು ಸಮಗ್ರ ವೈಚಾರಿಕ ಎಳೆಯನ್ನು ಬಿಡಿಸುವ ಸಾಹಸ ಮಾಡಿದ ಬೀಮಸೇನ ತೊರಗಲ್ಲ, ಮಹಾಭಾರತದ ವಸ್ತುವನ್ನು ಆಧುನಿಕ ಮನಸ್ಸು ಗ್ರಹಿಸುವ ಮತ್ತು ಶೋಧಿಸುವ ನೆಲೆ ಮತ್ತು ಆಶಯದೊಂದಿಗೆ 1992ರಲ್ಲಿ ಮಹಾಭಾರತದ ಕಥೆಯನ್ನು ವಿಡಂಬನಾತ್ಮಕವಾಗಿ ಚಿಂತನಕ್ಕೊಳಪಡಿಸಿ “ಸಂಚು“ ಎಂಬ ಕನ್ನಡ ಕಾದಂಬರಿ ಬರೆದರು. ಸಂಚು ಕಾದಂಬರಿ ಓದುತ್ತಿದ್ದರೆ ಬಂಧ, ಭಾವ ಮತ್ತು ಭಾಷೆಯ ವಿಷಯದಲ್ಲಿ ಬೈರ​‍್ಪನವರು ಅಡಿಗಡಿಗೆ ನೆನಪಿಸುತ್ತಾರೆ. ಬೈರ​‍್ಪನವರಿಗೆ ಪಾತ್ರಗಳ ಶೋಧನೆಯೇ ಮುಖ್ಯ. ಆದರೆ ಬೀಮಸೇನ ತೊರಗಲ್ಲರಿಗೆ ಪಾತ್ರಗಳ ಶೋಧನೆ ಗೌಣವಾಗಿ, ಘಟನೆಗಳ ಶೋಧನೆ ಮುಖ್ಯವಾಗುತ್ತದೆ. ಬೈರ​‍್ಪನವರಿಗೆ ತರ್ಕದಿಂದ ಹುಟ್ಟುವ ನಿಲುವುಗಳು ಮುಖ್ಯವಾದರೆ; ತೊರಗಲ್ಲ ಅವರಿಗೆ ತಾತ್ವಿಕ ಸಂಬಂಧದಿಂದ ಹುಟ್ಟಿಕೊಳ್ಳುವ ನಿಲುವುಗಳು ಮುಖ್ಯವಾಗುತ್ತವೆ. ತೊರಗಲ್ಲ ಅವರ “ಸಂಚು” ಕಾದಂಬರಿ ತಾತ್ವಿಕ ನಿಲುಮೆಗಳ ಕುರಿತಾದ ಪ್ರಶ್ನೆಯನ್ನೂ ಶೋಧಿಸಲು ತೊಡಗುತ್ತದೆ. ತೊರಗಲ್ಲ ಅವರ ನಿಲುವಿರುವುದು ವ್ಯಕ್ತಿ ವ್ಯಕ್ತಿಗಳ ನೆಲೆಗಿಂತ ಒಂದು ಘಟನೆ ಮತ್ತು ಚಾರಿತ್ರಿಕ ತರ್ಕಗಳಿಂದ ಹುಟ್ಟುವ ಕಡೆ ದೃಷ್ಟಿಹಾಯಿಸುತ್ತದೆ. ಈ “ಸಂಚು” ಕಾದಂಬರಿ ನ್ಯಾಶನಲ್ ಬುಕ್ ಟ್ರಸ್ಟ್‌ನಿಂದ ಬೇರೆ ಬೇರೆ ಭಾಷೆಗಳಿಗೆ ಅನುವಾದವಾಗಿರುವುದು ಹೆಮ್ಮೆಯ ವಿಷಯ. 

ನಾಟಕ ರಚನೆಗೂ ತೊಡಗಿದ ಇವರು  “ನಾರಾಯಣ ಸತ್ತಾ” ಹಾಗೂ “ಅಪರಿಚಿತರು” ಎಂಬ ನಾಟಕಗಳನ್ನು ಬರೆಯುತ್ತಾರೆ. ಭಾವ ಜೀವಿಯಾದ ಇವರು “ನಾಲ್ಕು-ನಾಲ್ವತ್ತು” ಎಂಬ ಕವನ ಸಂಕಲನ ಹೊರತಂದಿದ್ದಾರೆ. ಇವರ ಬಹುಮುಖ ಪ್ರತಿಭೆ ಸಾಹಿತ್ಯ ಕ್ಷೇತ್ರದ ದಿಗ್ಗಜರ ಮೆಚ್ಚುಗೆಗೆ ಪಾತ್ರವಾಗಿದೆ. ಬೆಳಗಾವಿಯ ಆಗಿನ ನಟಸಂಪದ ಈಗಿನ ರಂಗಸಂಪದದಲ್ಲಿ ಅಭಿನಯಿಸಿದ್ದು ಉಂಟು. ಹೀಗೆ ತೋರಗಲ್ಲರ ಆಸಕ್ತಿಯ ವಿಭಿನ್ನ ವ್ಯಕ್ತಿತ್ವ ಅನಾವರಣಗೊಳ್ಳುತ್ತಾ ಹೋಗುತ್ತದೆ. ಆಡು ಮುಟ್ಟದ ತೊಪ್ಪಲಿಲ್ಲವೆನ್ನುವಂತೆ ತೊರಗಲ್ಲ ಅವರು ಮಾಡದ ಕೆಲಸವಿಲ್ಲ ಎಂದು ಹೇಳಬಹುದು. 

ಭೀಮಸೇನ ತೊರಗಲ್ಲ ಇಂದು ನಮ್ಮೊಂದಿಗಿಲ್ಲ. ನೆನಪು ಮಾತ್ರ ಅವರು ಮಾಡಿದ ಸಾಮಾಜಿಕ ಕಳಕಳಿಯ ಕಾರ‌್ಯ, ಪತ್ರಿಕೋಧ್ಯಮ ಸೇವೆ ಸ್ಮರಣೀಯ. 

- ಅನಂತ ಪಪ್ಪು 

ಮೊ: 9448527870 

  

- * * * -