ಬೆಂಗಳೂರು, ಏ.2, ಕೊರೊನಾ ವೈರಸ್ ನಿಯಂತ್ರಿಸಲು 21 ದಿನಗಳ ಕಾಲ ದೇಶವನ್ನು ಲಾಕ್ಡೌನ್ ಮಾಡಿರುವ ಹಿನ್ನೆಲೆಯಲ್ಲಿ ನಗರದ ಪಿಜಿಯಲ್ಲಿ ತಂಗಿದವರು ಅಲ್ಲಿಯೇ ಉಳಿದುಕೊಳ್ಳಬೇಕು ಎಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಸೂಚಿಸಿದ್ದಾರೆ.ಆದರೆ, ಕೆಲ ಮಾಲೀಕರು ಪಿಜಿಯಲ್ಲಿರುವ ವಿದ್ಯಾರ್ಥಿ, ಉದ್ಯೋಗಿಗಳಿಗೆ ತಮ್ಮ ಊರುಗಳಿಗೆ ಹಿಂದಿರುಗುವಂತೆ ಒತ್ತಾಯಿಸುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು.
ಹೀಗಾಗಿ ಆಯುಕ್ತರು ಅವರನ್ನು ಪಿಜಿಯಿಂದ ಹೊರಗಡೆ ಕಳುಹಿಸದೆ, ಕಡ್ಡಾಯವಾಗಿ ಊಟ ನೀಡಬೇಕು. ಒಂದು ವೇಳೆ ಉಲ್ಲಂಘನೆ ಆದ್ದಲ್ಲಿ ಮಾಲೀಕರ ಮೇಲೆ ಕಠಿಣ ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿದ್ದರು.ಈ ಹಿನ್ನೆಲೆಯಲ್ಲಿ ಪಿಜಿಯಲ್ಲಿ ತಂಗಿದವರ ಕುರಿತು ಮಾಹಿತಿ ಪಡೆಯಲು ಭಾಸ್ಕರ್ ರಾವ್ ಅವರು ಮುಂದಾಗಿದ್ದಾರೆ.ಈ ಕುರಿತು ಟ್ವೀಟ್ ಮಾಡಿರುವ ಆಯುಕ್ತರು, ಪಿಜಿಯಲ್ಲಿ ಉಳಿದುಕೊಂಡಿರುವವರು ಹೇಗಿದ್ದೀರಾ? ಎಲ್ಲರೂ ಅರಾಮಿದ್ದೀರಾ? ನಿಮ್ಮನ್ನು ಹೇಗೆ ನಡೆಸಿಕೊಳ್ಳಲಾಗುತ್ತಿದೆ ?! ಎಂಬುದರ ಬಗ್ಗೆ ಬೆಂಗಳೂರು ಪೊಲೀಸರಿಗೆ ಟ್ವೀಟ್ ಮಾಡುವ ಮೂಲಕ ತಿಳಿಸಿ ಎಂದು ಭಾಸ್ಕರ್ ರಾವ್ ತಿಳಿಸಿದ್ದಾರೆ. ನಿಮ್ಮ ಬಗ್ಗೆ ಸಿಟಿ ಪೊಲೀಸರು ತಿಳಿದುಕೊಳ್ಳಬೇಕು. ಅಲ್ಲದೇ, ಕಮಿಷನರ್ ಆದ ನನಗೂ ವಿಷಯ ತಿಳಿಯಬೇಕು. ಹಾಗಾಗಿ @CPBLR ಹಾಗೂ @BlrCityPolice ಗೆ ಟ್ಯಾಗ್ ಮಾಡಿ ಟ್ವೀಟ್ ಮಾಡಿ ಎಂದು ಅವರು ತಿಳಿಸಿದ್ದಾರೆ.