ಫಲಾನುಭವಿಗಳನ್ನು ಖುದ್ದಾಗಿ ಭೇಟಿ ನೀಡಿ ಪ್ರಗತಿ ವರದಿ ಸಲ್ಲಿಸಿ: ಜಿಲ್ಲಾಧಿಕಾರಿ ಸುನೀಲ್ಕುಮಾರ್

ಕೊಪ್ಪಳ: ನಗರ ಸ್ಥಳೀಯ ಸಂಸ್ಥೆಗಳಿಂದ ವಿಕಲಚೇತನರಿಗಾಗಿ ಇರುವ ಯೋಜನೆಗಳು ಮತ್ತು ಸೌಲಭ್ಯಗಳು ಅರ್ಹ ಫಲಾನುಭವಿಗಳಿಗೆ ತಲುಪಿರುವ ಬಗ್ಗೆ ಖುದ್ದಾಗಿ ಫಲಾನುಭವಿಗಳನ್ನು ಭೇಟಿ ಮಾಡಿ ಪರಿಶೀಲಿಸಿ ವರದಿ ಸಲ್ಲಿಸಿ ಎಂದು ಅಂಗವಿಕಲರ ಕಲ್ಯಾಣಾಧಿಕಾರಿಗೆ ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ್ ಸೂಚಿಸಿದರು.

ಜಿಲ್ಲಾ ಪಂಚಾಯತನ ಜೆ. ಎಚ್. ಪಟೇಲ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ವಿಕಲಚೇತನರ ಹಕ್ಕುಗಳ ಅಧಿನಿಯಮ-2016 ರ ಅನುಷ್ಠಾನ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿರುವ ಒಂಭತ್ತು ನಗರ ಸ್ಥಳೀಯ ಸಂಸ್ಥೆಗಳಿಗೆ ಅಂಗವಿಕಲರ ಕಲ್ಯಾಣಾಧಿಕಾರಿ ಖುದ್ದಾಗಿ ಭೇಟಿ ನೀಡಬೇಕು. ಸಂಸ್ಥೆಗಳಿಂದ ವಿಕಲಚೇತನರಿಗಾಗಿ ಇರುವ ವಿವಿಧ ಯೋಜನೆಗಳ ಮೂಲಕ ಅವರಿಗೆ ಯೋಜನೆಯ ಲಾಭ ದೊರಕಿರುವ ಕುರಿತು ವಾಸ್ತವಾಂಶಗಳೊಂದಿಗೆ ಫಲಾನುಭವಿಯನ್ನು ಭೇಟಿಯಾದ ಕುರಿತು ಛಾಯಾಚಿತ್ರ ಸಹಿತ ವರದಿ ನೀಡಬೇಕು. ನಗರ ಸ್ಥಳೀಯ ಸಂಸ್ಥೆಗಳು ವಿಕಲತೆಗಳ ವಿಂಗಡಣೆ ಮಾಡಿ ನಿರ್ದಿಷ್ಟ ವಿಕಲಾಂಗತೆ ಹೊಂದಿದವರ ವಯಸ್ಸು, ಸ್ವವಿಳಾಸ, ದೂರವಾಣಿ ಸಂಖ್ಯೆ ಮತ್ತು ನೀಡಬಹುದಾದ ಸೌಲಭ್ಯದ ಕುರಿತು ಪ್ರತ್ಯೇಕ ಕಾಲಂಗಳನ್ನು ಮಾಡಿ ವಿವರವಾದ ದತ್ತಾಂಶಗಳನ್ನು ನಮೂದಿಸಬೇಕು. ಎಂಆರ್ಡಬ್ಲ್ಯೂ ಗಳು ತಮ್ಮ ವ್ಯಾಪ್ತಿಯಲ್ಲಿ ಸಮೀಕ್ಷೆ ನಡೆಸಿ ನೀಡದ ವಿಕಲಚೇತನರ ಸಂಖ್ಯೆಯನುಸಾರ ಎಷ್ಟು ಜನರಿಗೆ ಸರ್ಕಾರಿ ಸೌಲಭ್ಯ ನೀಡಲಾಗಿದೆ ಎಂಬುದರ ಪಟ್ಟಿ ತಯಾರಿಸಿ ಪ್ರತಿ ಸಭೆಗೆ ಬರುವಾಗ ಪ್ರಗತಿ ವರದಿಯನ್ನು ತರಬೇಕು. ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ನೋಡಲ್ ಅಧಿಕಾರಿಯಾಗಿದ್ದು ಇವುಗಳನ್ನು ಆಗಿಂದಾಗ್ಗೆ ಪರಿಶೀಲಿಸಬೇಕು ಎಂದು ಅವರು ಹೇಳಿದರು.

ನ. 22 ರಂದು ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ರಾಜ್ಯ ಆಯುಕ್ತರು ಜಿಲ್ಲೆಗೆ ಭೇಟಿ ನೀಡುತ್ತಿದ್ದು ವಿಕಲಚೇತನರ ಕಾರ್ಯಕ್ರಮಗಳ ಅನುಷ್ಠಾನದ ಬಗ್ಗೆ ಪ್ರಗತಿ ಪರಿಶೀಲನೆ ನಡೆಸುವರು. ಆದ್ದರಿಂದ ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳು ಹಾಗೂ ವಿವಿಧ ಇಲಾಖೆಗಳು ತಮ್ಮ ಇಲಾಖೆಯಲ್ಲಿ ವಿಕಲಚೇತನರ ಅಭಿವೃದ್ಧಿಗಾಗಿ ಇರುವ ಯೋಜನೆಗಳ ಅನುಷ್ಠಾನದ ಕುರಿತು ಪ್ರಗತಿ ವರದಿಯನ್ನು ತಪ್ಪದೇ ತರಬೇಕು ಮತ್ತು ವರದಿಯು ತಪ್ಪು ಮಾಹಿತಿಯಿಂದ ಕೂಡಿರಬಾರದು ಎಂದು ಸೂಚನೆ ನೀಡಿದರು.

ವಸತಿ ರಹಿತ ವಿಕಲಚೇತನರಿಗೆ ವಸತಿ ಕಲ್ಪಿಸುವ ಕೆಲಸವನ್ನು ಮಾಡಬೇಕು. ಇಲಾಖೆಯಲ್ಲಿರುವ ಎಲ್ಲಾ ಯೋಜನೆಯ ಬಗ್ಗೆ ವಿಕಲಚೇತನರಿಗೆ ಸರಿಯಾದ ಮಾಹಿತಿಯನ್ನು ನೀಡಬೇಕು. ಜಿಲ್ಲಾಸ್ಪತ್ರೆಯಲ್ಲಿ ಶ್ರವಣ ತಜ್ಞರು ಲಭ್ಯವಿದ್ದು, ಶ್ರವಣ ದೋಷ ಪರೀಕ್ಷೆ ಮಾಡಿಸಿ ವಿಕಲಚೇತನರ ವಿಶೇಷ ಗುರುತಿನ ಚೀಟಿಯನ್ನು ಪಡೆಯಬಹುದು. ಚಿಕ್ಕ ಮಕ್ಕಳ ಶ್ರವಣ ಪರೀಕ್ಷೆ ಯಂತ್ರವನ್ನು ಶೀಘ್ರವೇ ಅಳವಡಿಸಿ ಅನುಕೂಲ ಮಾಡಿಕೊಡಲಾಗುವುದು ಎಂದು ಅವರು ಹೇಳಿದರು.

ಸಭೆಯಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಟಿ. ಶ್ರೀನಿವಾಸ್, ವಿಕಲಚೇತನರ ಕಲ್ಯಾಣಾಧಿಕಾರಿ ಡಿ.ಜಿ. ಮೂಲಿಮನಿ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.