ಲೋಕದರ್ಶನ ವರದಿ
ಬಳ್ಳಾರಿ 14: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಯುವಜನರು ಉದ್ಯೋಗಗಳನ್ನು ಗಿಟ್ಟಿಸಿಕೊಳ್ಳುವಲ್ಲಿ ಕೌಶಲ್ಯ ಅತ್ಯಂತ ಅಗತ್ಯವಾಗಿದ್ದು, ಅದನ್ನು ಬೆಳೆಸಿಕೊಳ್ಳುವ ನಿಟ್ಟಿನಲ್ಲಿ ಯುವಜನರು ಮುಂದಾಗಬೇಕು ಎಂದು ಸಿರುಗುಪ್ಪ ಶಾಸಕ ಸೋಮಲಿಂಗಪ್ಪ ಹೇಳಿದರು.
ಸಿರಗುಪ್ಪದ ಸರಕಾರಿ ಪ್ರಥಮದರ್ಜು ಕಾಲೇಜಿನಲ್ಲಿ ಶುಕ್ರವಾರ ನಡೆದ ಯುವಕೌಶಲ್ಯ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯು "ಯುವ ಕೌಶಲ್ಯ ಎಂಬ ವಿನೂತನ ಕಾರ್ಯಕ್ರಮವನ್ನು ಜಾರಿಗೆ ತಂದಿದ್ದು, ಈ ಕಾರ್ಯಕ್ರಮವು ಕರ್ನಾಟಕ ರಾಜ್ಯದಾದ್ಯಂತ ನಿಗದಿಪಡಿಸಿರುವ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದಲ್ಲಿ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗಳಲ್ಲಿ ಹಾಗೂ ಪದವಿ ಕಾಲೇಜುಗಳಲ್ಲಿ ನಡೆಸಲಾಗುತ್ತಿದ್ದು, ಇದರ ಸದುಪಯೋಗವನ್ನು ನಮ್ಮ ಯುವಜನರು ಪಡೆದುಕೊಳ್ಳಬೇಕು ಎಂದರು.
ಜಿಲ್ಲಾ ಉದ್ಯೋಗಾಧಿಕಾರಿ ಹಾಗೂ ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಪಿ.ಎಸ್.ಹಟ್ಟಪ್ಪ ಅವರು ಮಾತನಾಡಿ, 18 ರಿಂದ 35 ವರ್ಷದೊಳಗಿನ ನಿರುದ್ಯೋಗಿ ಯುವಕ/ಯುವತಿಯರಿಗೆ ಅದರಲ್ಲೂ ಎಸ್ಸೆಸ್ಸೆಲ್ಸಿ, ಪಿಯುಸಿ, ಐಟಿಐ, ಪದವಿ ವಿದ್ಯಾಭ್ಯಾಸ ಮುಗಿಸಿದವರು/ಡ್ರಾಪ್ ಔಟ್ ಆದ ಹಾಗೂ ಪ್ರಸಕ್ತ ಅಂತಿಮ ವರ್ಷದಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಈ ಕಾರ್ಯಕ್ರಮದ ಮೂಲಕ ಕರ್ನಾಟಕದಾದ್ಯಂತ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದಲ್ಲಿ ನೆಲೆಸಿರುವಂತಹ ಉದ್ಯೋಗಾಕಾಂಕ್ಷಿಗಳಿಗೆ ಮೃದು ಕೌಶಲ್ಯ ಹಾಗೂ ಉದ್ಯೋಗವನ್ನು ಪಡೆಯಲು ಬೇಕಾದ ಅವಶ್ಯಕ ಕೌಶಲ್ಯದ ಬಗ್ಗೆ ತರಬೇತಿ ನೀಡಲಾಗುತ್ತದೆ ಎಂದರು.
"ಯುವ ಕೌಶಲ್ಯ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿರುವ ಅಭ್ಯರ್ಥಿಗಳಿಗೆ "ಕೌಶಲ್ಯ ಕೈಪಿಡಿ" ಎಂಬ ವಿನೂತನ ಪುಸ್ತಕವನ್ನು ವಿತರಿಸಲಾಗುವುದು. ಕೌಶಲ್ಯ ಕೈಪಿಡಿಯು ರಚನಾತ್ಮಕ ಪುಸ್ತಕವಾಗಿದ್ದು ಅದರ ಓದುಗರಿಗೆ ತಮ್ಮ ಸಂವಹನ ಕೌಶಲ್ಯ ತೊಂದರೆಗಳನ್ನು ನಿವಾರಿಸಿಕೊಳ್ಳಬಲ್ಲ ಕೌಶಲ್ಯ ಸಮಯ ನಿರ್ವಹಣಾ ಕೌಶಲ್ಯ ಹೀಗೆ ಹಲವಾರು ಅಂಶಗಳನ್ನು ಸುಧಾರಿಸಿಕೊಂಡು ವೃತ್ತಿ ಜೀವನದಲ್ಲಿ ಮುನ್ನೆಡೆವ ಸಲಹೆಗಳನ್ನು ಇದರಲ್ಲಿ ನೀಡಲಾಗಿದೆ ಎಂದರು.
ಕಾಲೇಜಿನ ಪ್ರಾಂಶುಪಾಲ ಬಸವರಾಜ ಮಾತನಾಡಿದರು.
ಸಿರಗುಪ್ಪ ನಗರಸಭೆ ಸಮುದಾಯ ಸಂಘಟನಾಧಿಕಾರಿ ಅಮರೇಶ, ಕೌಶಲ್ಯಾಭಿವೃದ್ಧಿ ಅಭಿಯಾನದ ಜಿಲ್ಲಾ ವ್ಯವಸ್ಥಾಪಕ ಪ್ರಾಣೇಶ, ಯೆಸ್ ಸೆಂಟರ್ ಸಿಬ್ಬಂದಿ ವರ್ಗ ಸೇರಿದಂತೆ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಇದ್ದರು.