ಬಳ್ಳಾರಿ: ಬಂದ್ ಬದಲಿಗೆ ಪ್ರತಿಭಟನೆ

ಲೋಕದರ್ಶನ ವರದಿ

ಬಳ್ಳಾರಿ 14: ಸರೋಜಿನಿ ಮಹಿಷಿ ವರದಿ ಜಾರಿಗೆ ಆಗ್ರಹಿಸಿ ಕರೆ ನೀಡಲಾಗಿದ್ದ ಕರ್ನಾಟಕ ಬಂದ್ ಕೇವಲ ಪ್ರತಿಭಟನೆ ನಡೆಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಕೆಗಷ್ಟೇ ಸೀಮಿತವಾಗಿದ್ದು, ವಾಹನ ಸಂಚಾರ ಎಂದಿನಂತೆ ಚಾಲನೆಯಲ್ಲಿದ್ದವು. 

ದಶಕಗಳಿಂದ ನೆನೆಗುದಿಗೆ ಬಿದ್ದಿರುವ ಸರೋಜಿನಿ ಮಹಿಷಿ ವರದಿಯನ್ನು ಅನುಷ್ಠಾನಗೊಳಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ಬಂದ್ಗೆ ಕರೆ ನೀಡಲಾಗಿತ್ತು. ಇದನ್ನು ಬೆಂಬಲಿಸಿ ಬಳ್ಳಾರಿಯಲ್ಲೂ ಬಂದ್ ಆಚರಿಸುವುದಾಗಿ ಇಲ್ಲಿನ ಕನ್ನಡ ಪರ ಒಕ್ಕೂಟಗಳ ಸಂಘಟನೆ ಘೋಷಿಸಿತ್ತು. ಆದರೆ, ಜಿಲ್ಲಾಡಳಿತದಿಂದ ಅನುಮತಿ ದೊರೆಯದ ಹಿನ್ನೆಲೆಯಲ್ಲಿ ಸಂಘಟನೆಯು ಬಂದ್ ವಾಪಸ್ ಪಡೆದಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ಬಂದ್ ಕೇವಲ ಪ್ರತಿಭಟನೆ ನಡೆಸಿ, ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಷ್ಟೇ ಸೀಮಿತವಾಯಿತು. ವಾಣಿಜ್ಯ  ಮಳಿಗೆ, ಚಿತ್ರಮಂದಿರ, ಪೆಟ್ರೋಲ್ ಬಂಕ್ ತೆರೆದಿದ್ದವು. ಸಾರಿಗೆ ಬಸ್, ಆಟೋ ಸೇರಿ ಪ್ರಯಾಣಿಕ, ಸರಕು ಸಾಗಾಣಿಕಾ ವಾಹನಗಳು ಎಂದಿನಂತೆ ಚಾಲನೆಯಲ್ಲಿದ್ದವು. 

ನಗರದ ಗಡಗಿ ಚನ್ನಪ್ಪ ವೃತ್ತದಲ್ಲಿ ಬೆಳಗ್ಗೆ 10 ಗಂಟೆ ಸುಮಾರಿಗೆ ಜಮಾಯಿಸಿ ಕನ್ನಡಪರ ಸಂಘಟನೆಗಳ ಒಕ್ಕೂಟದ ಕಾರ್ಯಕರ್ತರು, ರಾಜ್ಯ ಸರ್ಕಾರದ ವಿರುದ್ಧ ವಿವಿಧ ಘೋಷಣೆಗಳನ್ನು ಕೂಗಿದರು. ಕೂಡಲೇ ಸರೋಜಿನಿ ಮಹಿಷಿ ವರದಿಯನ್ನು ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು. 

1983ರಲ್ಲಿ ಕೇಂದ್ರದಲ್ಲಿ ಅಂದು ಸಚಿವರಾಗಿದ್ದ ಸರೋಜಿನಿ ಮಹಿಷಿ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಲಾಗಿತ್ತು. ಕರ್ನಾಟಕದಲ್ಲಿ ಸ್ಥಳೀಯರಿಗೆ ಶೇ.80 ರಷ್ಟು ಉದ್ಯೋಗಾವಕಾಶ ಕಲ್ಪಿಸುವ ಸಲುವಾಗಿ ಸಮಿತಿಯನ್ನು ರಚಿಸಲಾಗಿತ್ತು. ಆ ನಿಟ್ಟಿನಲ್ಲಿ ರಚನೆಯಾಗಿದ್ದ ಸಮಿತಿಯಲ್ಲಿ ರಾಜ್ಯದ ಗೋಪಾಲಕೃಷ್ಣ ಅಡಿಗ ಸೇರಿ ನಾಲ್ವರು ಇದ್ದ ಸಮಿತಿಯು 1986ರಲ್ಲಿ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿತ್ತು. ವರದಿಯಲ್ಲಿ 58 ಶಿಫಾರಸ್ಸು ಮಾಡಲಾಗಿತ್ತು. ಆದರೆ, ಅಂದಿನ ರಾಜ್ಯ ಸರ್ಕಾರ 40 ಶಿಫಾರಸ್ಸುಗಳನ್ನು ಒಪ್ಪಕೊಂಡಿತ್ತು. ವರದಿಯನ್ನು ಜಾರಿಗೊಳಿಸಬೇಕು ಎಂದು ಕನ್ನಡಪರ ಸಂಘಟನೆಗಳು ಹಲವು ಬಾರಿ ಪ್ರತಿಭಟನೆ, ಹೋರಾಟಗಳನ್ನು ನಡೆಸಿದರೂ ಪ್ರಯೋಜನವಾಗುತ್ತಿಲ್ಲ. ರಾಜ್ಯದಲ್ಲಿ ಆಡಳಿತ ನಡೆಸಿದ ಯಾವುದೇ ಸಕರ್ಾರಗಳು ಸ್ಪಂದಿಸುತ್ತಿಲ್ಲ ಎಂದು ಪ್ರತಿಭಟನಾನಿರತರು ಅಸಮಾಧಾನ ವ್ಯಕ್ತಪಡಿಸಿದರು. 

ನೆರೆಯ ಆಂಧ್ರ ಪ್ರದೇಶದಲ್ಲಿ ಸ್ಥಳೀಯರಿಗೆ ಶೇ.75 ರಷ್ಟು ಕಡ್ಡಾಯವಾಗಿ ಉದ್ಯೋಗಾವಕಾಶ ನೀಡಲು ಆದೇಶ ಜಾರಿಗೊಳಿಸಿದೆ. ಅದೇ ರೀತಿ ಕರ್ನಾಟಕದಲ್ಲು ಸರ್ಕಾರ ಏಕೆ ಡಾ. ಸರೋಜಿನಿ ಮಹಿಷಿ ವರದಿಯನ್ನು ಜಾರಿಗೊಳಿಸುತ್ತಿಲ್ಲ. ಇವರ ಉದ್ದೇಶವಾದರೂ ಏನು ಎನ್ನುವುದೇ ನಮ್ಮ ಪ್ರಶ್ನೆಯಾಗಿದೆ. ಕನ್ನಡಿಗರಿಗೆ ಆಗುತ್ತಿರುವ ಅನ್ಯಾಯವನ್ನು ಮನಗೊಂಡು ಆದಷ್ಟು ಬೇಗ ಸ್ಥಳೀಯರಿಗೆ ಶೇ.80 ರಷ್ಟು ಉದ್ಯೋಗಾವಕಾಶ ಕಲ್ಪಿಸಲು ಸಲುವಾಗಿ ವರದಿಯನ್ನು ಜಾರಿಗೊಳಿಸಬೇಕು ಎಂದು ಪ್ರತಿಭಟನಾನಿರತರು ಒತ್ತಾಯಿಸಿದರು. ಬಳಿಕ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿ ಕಚೇರಿ ತೆರಳಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು. 

ಪ್ರತಿಭಟನೆಯಲ್ಲಿ ಒಕ್ಕೂಟದ ಹನುಮೇಶ್ ಉಪ್ಪಾರ್, ವಿಜಯಕುಮಾರ್, ಎಂ.ಮಲ್ಲೇಶ್, ಬಿ.ಎಂ.ಪಾಟೀಲ್, ವಿ.ಶ್ರೀನಿವಾಸಲು, ಪ್ರಸಾದ್, ಬಾಲಕೃಷ್ಣ, ಮೇಕಲ ಈಶ್ವರರೆಡ್ಡಿ, ಕೊಳಗಲ್ಲು ಅಂಜಿನಿ, ಮೋಹನ್ಬಾಬು, ಬಾಷಾ, ಬಸವರಾಜ ಸೇರಿದಂತೆ ಹಲವರು ಇದ್ದರು.