ಬಳ್ಳಾರಿ: ತೀವ್ರ ಕುತೂಹಲ ಕೆರಳಿಸಿದ ಕಾರು ಅಪಘಾತ

ಲೋಕದರ್ಶನ ವರದಿ

ಬಳ್ಳಾರಿ 13: ಹೊಸಪೇಟೆ ಸಮೀಪದ ಮರಿಯಮ್ಮಹಳ್ಳಿ ಬಳಿ ಸಂಭವಿಸಿದ ಮರ್ಸೆಡೆಸ್ ಬೆಂಜ್ ಕಾರು ಅಪಘಾತ ಪ್ರಕರಣ ಈಗ ತೀವ್ರ ಕುತೂಹಲ ಕೆರಳಿಸಿದೆ. 

ಅಪಘಾತಕ್ಕೆ ಈಡಾದ ಕಾರು ಯಾರದ್ದು ಎಂಬ ಪ್ರಶ್ನೆ ಎದುರಾಗಿದೆ. ಕಂದಾಯ ಸಚಿವ ಆರ್.ಅಶೋಕ್ ಅವರ ಪುತ್ರನಿಗೆ ಸೇರಿದ್ದು ಎಂಬ ಸುದ್ದಿ ಎಲ್ಲ ಕಡೆ ಹರಡಿದೆ. ಆದರೆ ಕಂದಾಯ ಸಚಿವ ಆರ್.ಅಶೋಕ್ ಇದನ್ನು ಅಲ್ಲಗಳೆದಿದ್ದಾರೆ. ಕಾರು ನನ್ನ ಪುತ್ರನದು ಅಲ್ಲ. ಅಪಘಾತಕ್ಕೆ ನನ್ನ ಪುತ್ರ ಕಾರಣ ಅಲ್ಲ ಎಂದು ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಹೀಗಿದ್ದರೆ ಈ ಕಾರು ಯಾರಿಗೆ ಸೇರಿದ್ದು ಎಂಬ ಪ್ರಶ್ನೆ ನಿಗೂಢವಾಗಿದೆ. ಸದ್ಯ ರಾಹುಲ್ ಎಂಬುವವರು ಕಾರು ಚಲಾಯಿಸುತ್ತಿದ್ದರು ಎಂದು ಪೊಲೀಸರು ಅವರ ಮೇಲೆ ಕೇಸು ದಾಖಲಿಸಿದ್ದಾರೆ. 

ಸಚಿವರ ಮಗನ ಪಾತ್ರ ಇಲ್ಲ: 

ಅಪಘಾತದಲ್ಲಿ ಕಂದಾಯ ಸಚಿವ ಆರ್.ಅಶೋಕ್ ಅವರ ಪುತ್ರನ ಪಾತ್ರ ಇದೆ ಎಂದು ಎಲ್ಲ ಕಡೆ ಹರಡಿದೆ. ಆದರೆ ಇದು ಊಹಾಪೋಹ ಎಂದು ಬಳ್ಳಾರಿ ಎಸ್ಪಿ ಸಿ.ಕೆ.ಬಾಬ ಸ್ಪಷ್ಟನೆ ನೀಡಿದರು. 

ಹೊಸಪೇಟೆಯಿಂದ ಸೋಮವಾರ ಬೆಂಗಳೂರಿಗೆ ತೆರಳುತ್ತಿದ್ದ ಮಸರ್ಿಡಿಸ್ ಬೆಂಜ್ ಕಾರು ಮರಿಯಮ್ಮಹಳ್ಳಿ ಬಳಿ ಅಪಘಾತಕ್ಕೆ ತುತ್ತಾಗಿತ್ತು. ಅಪಘಾತದಲ್ಲಿ ರವಿನಾಯ್ಕ ಎಂಬುವವರು ಸ್ಥಳದಲ್ಲೇ ಮೃತಪಟ್ಟರು. ತೀವ್ರ ಗಾಯಗೊಂಡ ಸಚಿನ್ ಎಂಬುವವರು ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯದಲ್ಲಿ ಕೊನೆಯುಸಿರೆಳೆದರು. ಗಾಯಾಳುಗಳಿಗೆ ಹೊಸಪೇಟೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿಗೆ ಸಾಗಿಸಲಾಗಿದೆ. ಕಾರು ಚಲಾಯಿಸುತ್ತಿದ್ದ ರಾಹುಲ್ ಎಂಬುವವರ ಮೇಲೆ ದೂರು ದಾಖಲಾಗಿದೆ. ಅಪಘಾತಕ್ಕೆ ಕಾರಣರಾದವರನ್ನು ರಕ್ಷಣೆ ಮಾಡುತ್ತಿಲ್ಲ. ಅಪಘಾತಕ್ಕೆ ಕಾರಣರಾದವರನ್ನು ರಕ್ಷಣೆ ಮಾಡುವಂತೆ ನಮ್ಮ ಮೇಲೆ ಯಾರು ಒತ್ತಡ ಹೇರಿಲ್ಲ. ಅಪಘಾತದ ಬಗ್ಗೆ ತನಿಖೆ ನಡೆಯುತ್ತಿದೆ. ಪೊಲೀಸರ ತಂಡ ಬೆಂಗಳೂರಿಗೆ ತೆರಳಿ ಗಾಯಾಳುಗಳ ಹೇಳಿಕೆ ಪಡೆಯಲಿದೆ ಎಂದು  ಹೇಳಿದರು.