ಲೋಕದರ್ಶನ ವರದಿ
ಬಳ್ಳಾರಿ 13: ದಾನಗಳಲ್ಲಿ ಶ್ರೇಷ್ಟದಾನ ಕಣ್ಣಿನ ದಾನ. ನಾವು ಮರಣ ಹೊಂದಿದರೂ ನಮ್ಮ ಕಣ್ಣು ಮತ್ತೊಬ್ಬರಿಗೆ ಜೀವನವನ್ನು ನೀಡುತ್ತದೆ ಎಂದು ಲಯನ್ಸ್ ಕ್ಲಬ್ನ ಸದಸ್ಯರಾದ ನೂರ್ ಮಹಮ್ಮದ್ ಭಾಷಾ ಹೇಳಿದರು.
ನಗರದ ತಾಳೂರು ರಸ್ತೆಯಲ್ಲಿರುವ ವೈ. ಮಹಾಬಲೇಶ್ವರಪ್ಪ ಸ್ಮಾರಕ ಕಣ್ಣಿನ ಕೇಂದ್ರದಲ್ಲಿ 7 ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಬಳ್ಳಾರಿ ಬೆಳಗಾಯಿತು ಪತ್ರಿಕೆಯ ಸಂಸ್ಥಾಪಕ ಸಂಪಾದಕರಾದ ವಿ. ವಿಜಯ್ಕುಮಾರ್ ಮಾತನಾಡಿ, ಆಸ್ಪತ್ರೆಯಲ್ಲಿನ ಸಿಬ್ಬಂದಿಗಳು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದು, ಇಲ್ಲಿಗೆ ಬರುವ ಎಲ್ಲಾ ರೋಗಿಗಳನ್ನು ಸಮಾನ ಭಾವದಿಂದ ಕಾಣುತ್ತಾರೆ. ಹಳ್ಳಿ ಹಳ್ಳಿಗಳಲ್ಲಿ ಕ್ಯಾಂಪ್ ಹಾಕುವ ಮೂಲಕ ಅಂಧರಿಗೆ ಧೈರ್ಯ ತುಂಬಿ, ಅವರ ಜೀವನಕ್ಕೆ ದಾರಿ ಮಾಡಿಕೊಡುತ್ತಿದ್ದಾರೆ ಎಂದರು. ಆಸ್ಪತ್ರೆಯ ನಿರ್ಮಾಣಕ್ಕೆ ಸ್ಥಳ ನೀಡಿದ ವೈ. ಮಹಾಬಲೇಶ್ವರಪ್ಪ ಅವರನ್ನು ಈ ಸಂದರ್ಭದಲ್ಲಿ ಅವರು ನೆನಪಿಸಿಕೊಂಡರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವೈ. ಮಹಾಬಲೇಶ್ವರಪ್ಪ ಅವರ ಮೊಮ್ಮಗಳಾದ ಪ್ರೀತಿ ವಹಿಸಿಕೊಂಡಿದ್ದರು. ಗ್ರಾ. ಪಂ. ಸದಸ್ಯೆ ತಿಮ್ಮಕ್ಕ, ಬಳ್ಳಾರಿ ಬೆಳಗಾಯಿತು ಪತ್ರಿಕೆಯ ಸಂಸ್ಥಾಪಕರಾದ ವಿಜಯಕುಮಾರ್, ಲಯನ್ಸ್ ಕ್ಲಬ್ನ ಅಧ್ಯಕ್ಷರಾದ ಗಣೇಶ್ ಬಾಬು, ಡಾ. ಮಮತ, ಬಿ. ವಿಜಯ್ಕುಮಾರ್, ಕೆ. ಗಾದೆಪ್ಪ, ಬಿ.ಎಂ. ಪಾಟೀಲ್, ಜಿ.ವಿ. ಮಂಜುನಾಥ್, ಟಿ. ಮಲ್ಲಿಕಾರ್ಜುನ, ಉತ್ರೇಶ್ಗೌಡ, ಆಸ್ಪತ್ರೆಯ ವ್ಯವಸ್ಥಾಪಕಾರದ ದಿಲೀಪ್ರೆಡ್ಡಿ, ಸಂಗನಕಲ್ಲು ಮಹಾಂತೇಶ್ ಹಾಗೂ ಇತರರು ಇದ್ದರು.
ಆಸ್ಪತ್ರೆಯ ಕಿರು ಪರಿಚಯ
2013 ರಲ್ಲಿ ಎಲ್.ವಿ. ಪ್ರಸಾದ್ ಐ ಇನ್ಸ್ಟಿಟ್ಯೂಟ್ ಬಳ್ಳಾರಿಯಲ್ಲಿ ಕಣ್ಣಿನ ಕೇಂದ್ರವನ್ನು ಆರಂಭಿಸಿತು. ಆಸ್ಪತ್ರೆಗೆ ಸ್ಥಳ ನೀಡಿದ ವೈ. ಮಹಾಬಲೇಶ್ವರಪ್ಪ ಅವರ ಜ್ಞಾಪಕಾರ್ಥ ಆಸ್ಪತ್ರೆಗೆ ಅವರ ಹೆಸರನ್ನಿಡಲಾಯಿತು. ಅಂದಿನಿಂದ ಇಂದಿನವರೆಗೆ ಒಂದು ಲಕ್ಷಕ್ಕಿಂತಲೂ ಹೆಚ್ಚಿನ ರೋಗಿಗಳಿಗೆ, ಉತ್ತಮ ಶಸ್ತ್ರ ಚಿಕಿತ್ಸೆಯನ್ನು ನೀಡಲಾಗಿದೆ. 14643 ಜನರಿಗೆ ಶೇ. 80 ರಷ್ಟು ರಿಯಾಯಿತಿಯಲ್ಲಿ ಕಣ್ಣಿನ ಶಸ್ತ್ರ ಚಿಕಿತ್ಸೆಯನ್ನು ಮಾಡಲಾಗಿದೆ. ಈ ಕೇಂದ್ರವು ಸಿರುಗುಪ್ಪ, ಕುರುಗೋಡು, ಕಂಪ್ಲಿ, ರಾಯದುರ್ಗ, ಉರವಕೊಂಡ ಮತ್ತು ಹೊಳಗುಂದದಲ್ಲಿ ಪ್ರಥಮ ಚಿಕಿತ್ಸಾ ಕೇಂದ್ರಗಳನ್ನು ಹೊಂದಿದೆ. ಸುನೇತ್ರ ಪ್ರಾಜೆಕ್ಟ್ ವತಿಯಿಂದ ಬಳ್ಳಾರಿ ಜಿಲ್ಲೆಯಲ್ಲಿ 42 ಹಳ್ಳಿಗಳನ್ನು ದತ್ತು ಪಡೆದು ಈ ಹಳ್ಳಿಯ ಜನರಿಗೆ ಉಚಿತವಾಗಿ ನೇತ್ರ ತಪಾಸಣೆ, ಶಸ್ತ್ರ ಚಿಕಿತ್ಸೆಯನ್ನು ಮಾಡುತ್ತಿದೆ.