ರಸ್ತೆ ಅಪರಾಧಗಳ ವಿರುದ್ಧ ಜಾಗೃತರಾಗಿ-ಎನ್‌.ಶಶಿಕುಮಾರ

ರಸ್ತೆ ಅಪರಾಧಗಳ ವಿರುದ್ಧ ಜಾಗೃತರಾಗಿ-ಎನ್‌.ಶಶಿಕುಮಾರ Be vigilant against road crimes - N. Shashikumar

 

ಧಾರವಾಡ 12 : ರಸ್ತೆಯಲ್ಲಿ ಚಲಿಸುವಾಗ ರಸ್ತೆಯ ನಿಯಮಗಳನ್ನು ಪಾಲಿಸುವುದು ಅತಿ ಮುಖ್ಯ. ನಿಯಮಗಳು ಕೇವಲ ವಾಹನ ಸವಾರರಿಗೆ ಮಾತ್ರವಲ್ಲ ರಸ್ತೆಯಲ್ಲಿ ನಡೆದಾಡುವವರು ಸಹ ಪಾಲಿಸಬೇಕಾಗುತ್ತದೆ. ಜನದಟ್ಟಣೆಯಿರುವ ಸ್ಥಳಗಳಲ್ಲಿ ಟ್ರಾಫಿಕ್ ಸಮಸ್ಯೆ ಉಂಟಾಗುತ್ತಿದ್ದು, ಮಕ್ಕಳು, ವೃದ್ಧರು, ರೋಗಿಗಳು ಅತಿ ಜಾಗರೂಕತೆಯಿಂದ ರಸ್ತೆ ದಾಟಬೇಕು ಎಂದು ಧಾರವಾಡದ ವಿದ್ಯಾಗಿರಿಯ ಜನತಾ ಶಿಕ್ಷಣ ಸಮಿತಿಯ ಕದಂಬ ಕ್ರೀಡಾಂಗಣದಲ್ಲಿ ಜೆ.ಎಸ್‌.ಎಸ್, ಪೋಲಿಸ್ ಇಲಾಖೆ ಮತ್ತು ಶ್ರೀಗಂಧ ಫೌಂಡೆಶನ್ ವತಿಯಿಂದ ಆಯೋಜಿಸಲಾಗಿದ್ದ ರಸ್ತೆ ಸುರಕ್ಷತಾ ಸಪ್ತಾಹ ಕಾರ್ಯಕ್ರಮದಲ್ಲಿ ಹುಬ್ಬಳ್ಳಿ-ಧಾರವಾಡ ಮಹಾನಗರದ ಪೋಲಿಸ್ ಆಯುಕ್ತರಾದ ಎನ್‌. ಶಶಿಕುಮಾರವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. 

ರಸ್ತೆ ಸುರಕ್ಷತೆ-ಜೀವ ರಕ್ಷಣೆ ಅಡಿ ಬರಹದಲ್ಲಿ ಈ ಅಭಿಯಾನ ಪ್ರಾರಂಭವಾಗಿದ್ದು, ಜೀವ, ಜೀವನ ಅತಿಮುಖ್ಯ. ಅದನ್ನು ಬೇಜವಾಬ್ದಾರಿಯಿಂದ ವಾಹನ ಚಲಾಯಿಸಿ ರಸ್ತೆ ಅಪಘಾತಗಳಲ್ಲಿ ಕಳೆದುಕೊಳ್ಳಬೇಡಿ. ವಾಹನವನ್ನು ಜಾಗೂರತೆಯಿಂದ ಚಲಾಯಿಸಬೇಕು. ಪ್ರಯಾಣ ಮಾಡುವ ಮುನ್ನ ಸಮಯದ ಪರಿಕಲ್ಪನೆ ತಮಗಿರಬೇಕು. ಬೇಗ ಪ್ರಯಾಣ ಪ್ರಾರಂಭಿಸಿ ತಡವಾಗಿ ತಲುಪಿದರು ಸುರಕ್ಷಿತವಾಗಿ, ಮುನ್ನೆಚ್ಚರಿಕೆಗಳೊಂದಿಗೆ ಪ್ರಯಾಣ ಮಾಡಬೇಕು. ಅಪಘಾತಗಳಲ್ಲಿ ಯುವಕರೇ ಸಾವನ್ನಪ್ಪುತ್ತಿರುವುದು ಹಾಗೂ ಅಂಗಾಗ ವೈಫಲ್ಯಕ್ಕೆ ಕಾರಣರಾಗುತ್ತಿರುವುದು ದುಃಖದ ಸಂಗತಿ. ಮಾದಕ ವಸ್ತುಗಳ ಸೇವನೆ, ಮಾದಕ ದ್ರವ್ಯಗಳ ಸೇವನೆಯಿಂದ ಅತಿ ಹೆಚ್ಚಿನ ಅಪಘಾತಗಳಾಗುತ್ತಿವೆ.

ಮಕ್ಕಳು ಇಂತಹ ದುಶ್ಚಟಗಳಿಂದ ದೂರವಿರಿ. ದಿನದಿಂದ ದಿನಕ್ಕೆ ಸೈಬರ್ ಅಪರಾಧಗಳು ಹೆಚ್ಚಾಗುತ್ತಿದ್ದು, ಮೊಬೈಲ್ ಬಳಕೆ ಒಳ್ಳೆಯ ಕಾರ್ಯಕ್ಕೆ ಮಾತ್ರ ಸೀಮಿತವಾಗಿರಲಿ. ಮನೆಯಲ್ಲಿ ತಂದೆ ತಾಯಿಗೆ ತಿಳಿಸದೇ ಯಾವುದೇ ಆಪ್ ಮತ್ತು ಸಾಪ್ಟವೇರ್ ಬಳಕೆ ಮಾಡಬೇಡಿ. ಜೆ.ಎಸ್‌.ಎಸ್ ನಲ್ಲಿ ವಿದ್ಯಾರ್ಥಿಗಳಿಗೆ ಈಗಾಗಲೇ ಸುರಕ್ಷತೆಯ ಬಗ್ಗೆ ಮುಂಜಾಗ್ರತಾ ಕ್ರಮಗಳನ್ನು ಶಿಕ್ಷಕರು ಮಕ್ಕಳಲ್ಲಿ ತಿಳಿಹೇಳಿರುವುದು ಇಲ್ಲಿನ ನೈತಿಕ ಶಿಕ್ಷಣಕ್ಕೆ ಕೈಗನ್ನಡಿಯಾಗಿದೆ. ಅಪರಿಚಿತರಿಂದ ದೂರವಿರಿ. ಯಾವುದೇ ಸಂಶಯಾಸ್ಪದ ವ್ಯಕ್ತಿ ಹಾಗೂ ಘಟನೆಗಳು ಕಂಡುಬಂದಲ್ಲಿ ಪೋಲಿಸರಿಗೆ ಮಾಹಿತಿ ನೀಡಿ ಎಂದು ಹೇಳಿದರು. 

ಜೆ.ಎಸ್‌.ಎಸ್ ನ ಆಡಳಿತಾಧಿಕಾರಿಗಳಾದ ಅರಿಹಂತ ಪ್ರಸಾದರವರು ಮಾತನಾಡಿ, ವಾಹನ ಚಲಾಯಿಸುವ ಮುನ್ನ ಪರವಾನಿಗೆ ಪಡೆದು ವಾಹನ ಚಲಾಯಿಸಿ, ಹೆಲ್ಮೆಟ್ ಧರಿಸಿ, ಸೀಟ್ ಬೆಲ್ಟ್‌ ಧರಿಸಿ ವಾಹನ ಚಲಾಯಿಸಬೇಕು. ದುಷ್ಟರು ತಿಂಡಿ ತಿನಿಸುಗಳ ಆಸೆ ತೋರುವ ಮೂಲಕ ಅದರಲ್ಲಿ ಮಾದಕ ವಸ್ತುಗಳನ್ನು ಬಳಸಿ ಮಕ್ಕಳನ್ನು ತಪ್ಪು ದಾರಿಗೆ ತರುವ ಸಂಚು ಮಾಡುತ್ತಿರುತ್ತಾರೆ. ಅಪರಿಚಿತರು ನೀಡುವ ತಿಂಡಿ-ತಿನಿಸುಗಳನ್ನು ಸೇವಿಬೇಡಿ. ಮಕ್ಕಳಿಗೆ ದೈಹಿಕ ಕಿರುಕುಳ ನೀಡುತ್ತಿರುವ ಘಟನೆಗಳು ಹೆಚ್ಚಾಗುತ್ತಿದ್ದು, ಅಸಭ್ಯ ವರ್ತನೆ ತೋರುವ ವ್ಯಕ್ತಿಗಳು ಕಂಡಲ್ಲಿ ನಿಮ್ಮ ಶಿಕ್ಷಕರು, ತಂದೆ-ತಾಯಿ ಅಥವಾ ಹಿರಿಯರ ಗಮನಕ್ಕೆ ತನ್ನಿ. ಅಪರಾಧಗಳ ವಿರುದ್ದ ಜಾಗೃತರಾಗಿ ಎಂದು ಹೇಳಿದರು. 

ಸಮಾರಂಭದ ಅಧ್ಯಕ್ಷತೆಯನ್ನು ಜೆ.ಎಸ್‌.ಎಸ್ ನ ಕಾರ್ಯದರ್ಶಿಗಳಾದ ಡಾ. ಅಜಿತ ಪ್ರಸಾದರವರು ವಹಿಸಿದ್ದರು. ಶ್ರೀಗಂಧ ಫೌಂಡೆಶನ್‌ನ ಆದಿತ್ಯಾ,  ಮಹಾವೀರ ಉಪಾದ್ಯೆ, ಡಾ. ಸೂರಜ್ ಜೈನ್ ಡಾ. ಜಿನ್ನಪ್ಪ ಕುಂದಗೋಳ ಪೋಲಿಸ್ ಇಲಾಖೆಯ ಹಿರಿಯ ಅಧಿಕಾರಿಗಳು, ಇತರರು ಉಪಸ್ಥಿತರಿದ್ದರು. 


Road Safety Week Traffic Rules Pedestrian Safety