ಹರಿಹರ : ಏಕಾಗ್ರತೆ ಮತ್ತು ಆತ್ಮವಿಶ್ವಾಸದಿಂದ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆಯಲು ಸಾಧ್ಯ ಎಂದು ಹರಪನಹಳ್ಳಿ ಎಸ್ ಯು ಜೆ ಎಂ ಕಾಲೇಜಿನ ಕನ್ನಡ ಉಪನ್ಯಾಸಕ ಎಚ್ ಮಲ್ಲಿಕಾರ್ಜುನ ಪರೀಕ್ಷಾ ತಂತ್ರಗಳನ್ನು ವಿವರಿಸಿದರು.
ತಾಲೂಕಿನ ಬನ್ನಿಕೊಡು ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಭಯ ಹೋಗಲಾಡಿಸಲು ಪರೀಕ್ಷೆಯ ಯಶಸ್ಸಿನ ತಂತ್ರಗಳು ತರಬೇತಿಯಲ್ಲಿ ಮಾತನಾಡಿ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳನ್ನು ಪಡೆಯುವ ಯಶಸ್ಸಿನ ತಂತ್ರಗಳನ್ನು ಪಡೆಯಲು ಭಯ ಬೇಡ. ಭಯ ಎನ್ನುವುದು ಕಲ್ಪನೆ ಮಾತ್ರ. ಅತಿ ಹೆಚ್ಚು ಅಂಕಗಳನ್ನು ಪಡೆಯಲು ಗುರಿ, ಆತ್ಮವಿಶ್ವಾಸ, ಸಮಯ ಪಾಲನೆ, ನೆನಪಿನ ಶಕ್ತಿ ಮತ್ತು ಪರೀಕ್ಷೆಯನ್ನು ಬರೆಯುವ ತಂತ್ರಗಳನ್ನು ಕಲಿತರೆ ಗೆಲುವು ನಿಮ್ಮದೇ, ಬುದ್ಧಿಶಕ್ತಿಯನ್ನು ಹೆಚ್ಚು ಮಾಡುವ ನಿರ್ದಿಷ್ಟ ಆಹಾರ, ಪಾನೀಯ, ಓಷಧಿ, ಟಾನಿಕ್ ಕೊಂಡುಕೊಳ್ಳಬೇಡಿ. ನಿದ್ದೆಗೆಟ್ಟು ಓದಬೇಡಿ, ಆಹಾರದ ವಿಷಯದಲ್ಲಿ ಉದಾಸೀನತೆ ಬೇಡ, ಪರೀಕ್ಷೆ ಬಗ್ಗೆ ಭರವಸೆ ಇರಲಿ ಭಯ ಬೇಡ. ಪರೀಕ್ಷೆಯಲ್ಲಿ ಸೋತರೆ ಅಸಮರ್ಥರಲ್ಲ, ಅವಕಾಶಗಳು ಬಹಳ ಇವೆ. ತಮ್ಮ ಬಗ್ಗೆ ಕೀಳರಿಮೆ ಬೇಡ. ವಿದ್ಯಾರ್ಥಿಗಳು ತಮ್ಮೊಂದಿಗೆ ಸ್ಪರ್ಧಿಸಬೇಕೆ ಹೊರತು ಇತರರೊಂದಿಗೆ ಅಲ್ಲ, ಪರೀಕ್ಷೆ ಬಗ್ಗೆ ಭಯಪಡದೆ ಗೆಲುವಿನ ಆಲಿಂಗನ ಮಾಡಿಕೊಳ್ಳಿ ಎಂದರು.
ಮುಖ್ಯ ಅತಿಥಿಗಳಾಗಿ ನಿವೃತ್ತ ಮುಖ್ಯ ಗುರುಗಳಾದ ಎಸ್.ಹೆಚ್.ಹೂಗಾರ್ ಮಾತನಾಡಿ ಶಿಕ್ಷಕರು ನೀಡುವ ಅಂಕಕ್ಕಿಂತ ವಿದ್ಯಾರ್ಥಿಗಳು ಪಡೆಯುವ ಅಂಕಗಳೇ ಶ್ರೇಷ್ಠ. ಅದು ವಿದ್ಯಾರ್ಥಿಗಳ ನೈತಿಕ ಸಾಮರ್ಥ್ಯವನ್ನು ತೋರಿಸುತ್ತದೆ ಎಂದು ವಿದ್ಯಾರ್ಥಿಗಳನ್ನು ಹುರಿದುಂಬಿಸಿದರು. ಯಾವುದೇ ಒಂದು ವಿಷಯದ ಮೇಲೆ ನಿರಂತರವಾಗಿ ಅರಾ್ಣ ಭಾವದಿಂದ ಅಭ್ಯಾಸ ಬೇಕು, ಸಮಾಜದ, ತಂದೆ-ತಾಯಿಯ ಋಣ, ಗುರುಗಳ ಋಣವನ್ನು ತೀರಿಸಲು ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ಗಳಿಸಿ ಜೀವನದ ಪರೀಕ್ಷೆಯಲ್ಲಿ ತೇರ್ಗಡೆಯಾಗಬೇಕೆಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಉಪ ಪ್ರಾಚಾರ್ಯರಾದ ವಿ.ಬಿ. ಕೊಟ್ರೇಶ್, ಹಿರಿಯ ಶಿಕ್ಷಕರಾದ ಮುಸ್ತಾಫ್ ಅಹಮದ್ ಹಾಗೂ ಎಲ್ಲಾ ಶಾಲಾ ಶಿಕ್ಷಕರು ಮತ್ತು ಸಿಬ್ಬಂದಿ ಹಾಜರಿದ್ದರು.