ನಕಲಿ ವಸ್ತು, ವ್ಯಾಪಾರಿಗಳ ಬಗ್ಗೆ ಜಾಗೃತರಾಗಿರಿ: ನ್ಯಾಯಾಧೀಶ ಪಿ.ಎಫ್‌.ದೊಡ್ಡಮನಿ

Be aware of counterfeit goods and traders: Judge P.F. Doddamani

 ನಕಲಿ ವಸ್ತು, ವ್ಯಾಪಾರಿಗಳ ಬಗ್ಗೆ ಜಾಗೃತರಾಗಿರಿ: ನ್ಯಾಯಾಧೀಶ ಪಿ.ಎಫ್‌.ದೊಡ್ಡಮನಿ 

ಧಾರವಾಡ 17: ಕೆಲವರು ಹಣ ಮಾಡಬೇಕೆಂಬ ಮಹಾದಾಸೆಯಿಂದ ಜನರಿಗೆ ಮೋಸ ಮಾಡುವಲ್ಲಿ ಸುಳ್ಳು ಹೇಳಿ ಎಲ್ಲಾ ಕ್ಷೇತ್ರದಲ್ಲಿಯೂ ಗ್ರಾಹಕರ ಜೋತೆ ಚಲ್ಲಾಟವಾಡುವುದು ಸಾಮಾನ್ಯವಾಗಿದೆ. ರೈತರಿಂದ ಹಿಡಿದು ದೊಡ್ಡ ದೊಡ್ಡ ಅಧಿಕಾರಿಗಳಿಗೂ ಮೋಸ ಮಾಡಲಾರಂಭಿಸಿದ್ದಾರೆ. ಒಂದು ತಾಯಿತ ಕಟ್ಟಿಸಿಕೊಳ್ಳಿ ಮೂರು ತಿಂಗಳಲ್ಲಿ ಒಳ್ಳೆಯದಾಗುತ್ತದೆ ಎಂದು ಹೇಳಿ ಸಾವಿರಾರು ರೂಪಾಯಿ ಬಾಚಿಕೊಳ್ಳುವ ಪ್ರಯತ್ನ ಸಮಾಜದಲ್ಲಿ ಕಂಡು ಬರುತ್ತಿದೆ ಎಂದು  ಧಾರವಾಡದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಪರಶುರಾಮ ಎಫ್‌. ದೊಡ್ಡಮನಿ ಅವರು ಹೇಳಿದರು. 

ಅವರು ಇಂದು (ಮಾ.17) ಬೆಳಿಗ್ಗೆ ನಗರದ ಶ್ರೀ ಹುರಕಡ್ಲಿ ಅಜ್ಜ ಶಿಕ್ಷಣ ಸಮಿತಿಯ ಶ್ರೀಮತಿ ಕ.ಶಿ. ಜಗಳೂರ ಕಲಾ ಹಾಗೂ ಡಾ.ಸು. ಮು. ಶೇಷಗಿರಿ ವಾಣಿಜ್ಯ ಮಹಿಳಾ ಮಹಾವಿದ್ಯಾಲಯದಲ್ಲಿ ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ, ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ, ಆಹಾರ ಸುರಕ್ಷಣೆ ಮತ್ತು ಗುಣಮಟ್ಟ ಇಲಾಖೆ, ಕಾನೂನು ಮಾಪನಶಾಸ್ತ್ರ ಇಲಾಖೆ, ಜಿಲ್ಲಾ ಗ್ರಾಹಕ ಮಾಹಿತಿ ಕೇಂದ್ರ ಹಾಗೂ ಎಲ್‌ಪಿಜಿ ಕಂಪನಿಗಳಾದ ಬಿಪಿಸಿ, ಎಚ್‌ಪಿಸಿ ಮತ್ತು ಐಓಸಿ ಮತ್ತು ಸ್ಥಳೀಯ ಗ್ರಾಹಕ ಪರ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ವಿಶ್ವ ಗ್ರಾಹಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡಿದರು. 

  ಒಂದು ಅಕ್ಷರ ಓದಲಾರದೆ, ಪರೀಕ್ಷೆ ಬರೆದು ಪಾಸಾಗುವುದು ಸಾಧ್ಯವಿಲ್ಲ. ತಾಯತವನ್ನು ಕಟ್ಟಿಸಿಕೊಂಡು, ಹೋಮ ಹವನ ಮಾಡಿ ಪಾಸ್ ಆಗಲು ಆಗುವುದಿಲ್ಲ. ಮೋಸ ಹೋಗದೆ ದುಡಿದ ದುಡ್ಡನ್ನು ಕಳೆದುಕೊಳ್ಳದೆ ಮನಸ್ಸನ್ನು ಹತೋಟಿಯಲ್ಲಿಟ್ಟುಕೊಂಡು ಓದಲು ಆರಂಭಿಸಬೇಕೆಂದು ಹೇಳಿದರು. ಎಲ್ಲರೂ ವ್ಯವಹಾರದ ರೂಪದಲ್ಲಿ ಅವರ ಹೊಟ್ಟೆಪಾಡಿಗೆ ಇಂತಹ ವ್ಯವಹಾರವನ್ನು ಮಾಡಿ ಜನರಿಂದ ಹಣ ಗಳಿಸುತ್ತಾರೆ. ಇದರಿಂದ ಗ್ರಾಹಕರು ವಿದ್ಯಾರ್ಥಿಗಳು ಜಾಗರೂಕರಾಗಿರಬೇಕು ಎಂದು ಹೇಳಿದರು. 

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ, ಧಾರವಾಡ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ಈಶಪ್ಪ ಕ. ಭೂತೆ ಅವರು ಮಾತನಾಡಿ, ವಿಶ್ವದಾದ್ಯಂತ ಗ್ರಾಹಕರ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಹಣವನ್ನು ಕೊಟ್ಟು ಯಾವುದೇ ವಸ್ತುವನ್ನು ಖರೀದಿ ಮಾಡಿದರೆ ಅವರು ಗ್ರಾಹಕರಾಗುತ್ತಾರೆ. ಯಾರು ವಸ್ತುವನ್ನು ಮಾರುತ್ತಾರೋ ಅವರು ಸೇವಾ ಪೂರೈಕೆದಾರರು ಆಗುತ್ತಾರೆ. ಗ್ರಾಹಕರು ತೆಗೆದುಕೊಂಡ ವಸ್ತುಗಳಿಂದ ಮೋಸ, ವಂಚನೆ ಆಗಬಾರದು ಎಂದು ಹಿತದೃಷ್ಟಿಯಿಂದ ಗ್ರಾಹಕ ರಕ್ಷಣೆಗಾಗಿ  ಗ್ರಾಹಕರ ಕಾಯ್ದೆಯನ್ನು ಜಾರಿಗೆ ತರಲಾಗಿದೆ ಎಂದರು.  

ಗ್ರಾಹಕರಿಗೆ ತೊಂದರೆ ಆಗಿದ್ದಲ್ಲಿ ಅವರಿಗೆ ನ್ಯಾಯ ಒದಗಿಸಿಕೊಡುವ ನಿಟ್ಟಿನಲ್ಲಿ ಆಯೋಗವು ಕರ್ತವ್ಯ ನಿರ್ವಹಿಸುತ್ತದೆ. ಗ್ರಾಹಕರಿಗೆ ಆದ ಪ್ರತಿಯೊಂದು ತೊಂದರೆಗಳಿಗೂ ನಾವು ಸ್ಪಂದಿಸುತ್ತೇವೆ. ವ್ಯವಹಾರ ಮಾಡಿದ ಬಿಲ್ಲ್‌ಗಳ ಜೊತೆಗೆ ನಮಗೆ ಬಂದು ದೂರು ದಾಖಲಿಸಿದರೆ, ನಾವು ಅದಕ್ಕೆ ನ್ಯಾಯ ಒದಗಿಸಿಕೊಡುವ ಪ್ರಯತ್ನ ಮಾಡುತ್ತೇವೆ ಎಂದು ಹೇಳಿದರು. 

ಕಾರ್ಯಕ್ರಮದಲ್ಲಿ ಶಿಕ್ಷಣ ತಜ್ಞರಾದ ಸಂಜೀವ ಘಾನಟೆ ಅವರು ವಿಶೇಷ ಉಪನ್ಯಾಸ ನೀಡಿದರು. ಹುಬ್ಬಳ್ಳಿ ಕಾನೂನು ಮಾಪನಶಾಸ್ತ್ರ ಇಲಾಖೆ ಸಹಾಯ ನಿರ್ದೇಶಕ ಎಂ.ಎಂ.ನರಸಣ್ಣವರ, ಎಸ್‌.ಕೆ.ಹೊಸಂಡಿ, ಅನಿತಾ ಕಡಪಟ್ಟಿ, ಅಶ್ವಿನಿ ಪಾಟೀಲ, ಶಕುಂತಲಾ ಬಿರಾದಾರ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. 

ಮಹಾವಿದ್ಯಾಲಯದ ಪ್ರಾಂಶುಪಾಲೆ ಡಾ. ರಾಜೇಶ್ವರಿ ಎಂ. ಶೆಟ್ಟರ ಸ್ವಾಗತಿಸಿದರು. 

ಆಹಾರ ಇಲಾಖೆ ಜಂಟಿ ನಿರ್ದೇಶಕ ಚನ್ನಬಸಪ್ಪ ವಿ. ಕೊಡ್ಲಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.  ಚೇತನ ಎಂ. ನಿರೂಪಿಸಿ, ವಂದಿಸಿದರು.  

ಕಾರ್ಯಕ್ರಮದಲ್ಲಿ ಕಾಲೇಜು ವಿದ್ಯಾರ್ಥಿಗಳು, ಸಿಬ್ಬಂದಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು. 

(ಫೋಟೊ ಇವೆ)