ಅಮರಾವತಿ 18: ಬಂಗಾಳಕೊಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದಾಗಿ ನೆರಯ ಆಂಧ್ರ ಪ್ರದೇಶದಲ್ಲಿ ಡಿಸೆಂಬರ್ 18, 19 ಹಾಗೂ 20ರಂದು 3 ದಿನ ಕಾಲ ವ್ಯಾಪಕ ಮಳೆಯಾಗುವ ಸಾಧ್ಯತೆ ಇದ್ದು, ಕರ್ನಾಟಕದಲ್ಲಿ ಕೂಡ ಬೆಂಗಳೂರು ಸೇರಿದಂತೆ 5 ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಸರಾಸರಿ ಸಮುದ್ರ ಮಟ್ಟದಿಂದ 5.8 ಕಿ.ಮೀವರೆಗೆ ಚಂಡಮಾರುತ ಪರಿಚಲನೆ ವಿಸ್ತರಿಸಿರುವುದು ದೃಢವಾಗಿದೆ. ಚಂಡಮಾರುತ ಮುಂದಿನ 24 ಗಂಟೆಗಳಲ್ಲಿ ಉತ್ತರ ತಮಿಳುನಾಡು ಮತ್ತು ದಕ್ಷಿಣ ಆಂಧ್ರ ಪ್ರದೇಶ ಕರಾವಳಿಯ ಕಡೆಗೆ ವಾಯವ್ಯವಾಗಿ ಚಲಿಸುವ ಸಾಧ್ಯತೆಯಿದೆ.
ಬಳಿಕ, ಮುಂದಿನ 24 ಗಂಟೆಗಳಲ್ಲಿ ಆಂಧ್ರಪ್ರದೇಶ ಕರಾವಳಿಯುದ್ದಕ್ಕೂ ಉತ್ತರದ ಕಡೆಗೆ ಚಲಿಸುವ ನಿರೀಕ್ಷೆಯಿದೆ. ಡಿಸೆಂಬರ್ 25 ರವರೆಗೆ ಉತ್ತರ ಕರಾವಳಿ ಆಂಧ್ರಪ್ರದೇಶ ಮತ್ತು ಯಾನಂನ ಕೆಲವು ಸ್ಥಳಗಳಲ್ಲಿ ಹಗುರದಿಂದ ಮಧ್ಯಮ ಮಳೆಯಾಗುವ ಸಾಧ್ಯತೆಯಿದೆ ಎಂದು ಇಲಾಖೆ ಮಾಹಿತಿ ನೀಡಿದೆ.
ಕರ್ನಾಟಕದಲ್ಲೂ ಮಳೆ
ಡಿಸೆಂಬರ್ 19 ರಂದು ದಕ್ಷಿಣ, ಕರಾವಳಿ ಮತ್ತು ಮಧ್ಯ ಕರ್ನಾಟಕದ ಕೆಲವು ಭಾಗಗಳಲ್ಲಿ ಹಗುರದಿಂದ ಮಧ್ಯಮ ಮಳೆಯಾಗುವ ನಿರೀಕ್ಷೆಯಿದೆ.
ಪ್ರಮುಖವಾಗಿ ರಾಜಧಾನಿ ಬೆಂಗಳೂರು, ಕೋಲಾರ, ಬೆಂಗಳೂರು ಗ್ರಾಮಾಂತರ, ರಾಮನಗರ ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತನ್ನ ಮುನ್ಸೂಚನೆಯಲ್ಲಿ ತಿಳಿಸಿದೆ.