ಟ್ರಿನಿಡಾಡ್, ಅ13: ಜೋನಾಥನ್ ಕಾರ್ಟರ್ (ಔಟಾಗದೆ 50 ರನ್) ಹಾಗೂ ರೇಮನ್ ರೀಫರ್ (24ಕ್ಕೆ4) ಅವರ ಮಾರಕ ದಾಳಿಯ ನೆರವಿನಿಂದ ಬಾರ್ಬಡೋಸ್ ಟ್ರಿಡೆಂಟ್ಸ್ ಕೆರಿಬಿಯನ್ ಪ್ರೀಮಿಯರ್ ಲೀಗ್ ಫೈನಲ್ ಹಣಾಹಣಿಯಲ್ಲಿ ಗಯಾನ ಅಮೇಜಾನ್ ವಾರಿಯರ್ಸ್ ತಂಡವನ್ನು ಮಣಿಸಿ ಎರಡನೇ ಬಾರಿ ಚಾಂಪಿಯನ್ ಆಯಿತು.
ಇಲ್ಲಿನ ಬ್ರಿಯಾನ್ ಲಾರಾ ಕ್ರೀಡಾಂಗಣದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಬಾರ್ಬಡೋಸ್ ಟ್ರಿಡೆಂಟ್ಸ್ ತಂಡ ನಿಗದಿತ 20 ಓವರ್ ಗಳಲ್ಲಿ ಆರು ವಿಕೆಟ್ ನಷ್ಟಕ್ಕೆ 171 ರನ್ ದಾಖಲಿಸಿತು. ಬಳಿಕ ಗುರಿ ಹಿಂಬಾಲಿಸಿದ ಗಯಾನ ಅಮೇಜಾನ್ ವಾರಿಯರ್ಸ್ ತಂಡ ನಿಗದಿತ 20 ಓವರ್ ಗಳಲ್ಲಿ ಒಂಬತ್ತು ವಿಕೆಟ್ ನಷ್ಟಕ್ಕೆ 144 ರನ್ ಗಳಿಗೆ ಶಕ್ತವಾಯಿತು. ಆ ಮೂಲಕ ಐದನೇ ಬಾರಿ ಗಯಾನ ವಾರಿಯರ್ಸ್ ಫೈನಲ್ನಲ್ಲಿ ಸೋಲು ಒಪ್ಪಿಕೊಂಡು ರನ್ನರ್ ಅಪ್ಗೆ ತೃಪ್ತಿಪಟ್ಟುಕೊಂಡಿತು.
ವಾರಿಯರ್ಸ್ಗೆ ಆಘಾತ ನೀಡಿದ ರೀಫರ್:
ಟ್ರಿಡೆಂಟ್ಸ್ ನೀಡಿದ 172 ರನ್ ಗುರಿ ಹಿಂಬಾಲಿಸಿದ ಗಯಾನ ಅಮೇಜಾನ್ ವಾರಿಯರ್ಸ್ ತಂಡ ಉತ್ತಮ ಆರಂಭ ಪಡೆಯಲಿಲ್ಲ. ಇದಕ್ಕೆ ರೇಮನ್ ರೀಫರ್ ಅವಕಾಶ ನೀಡಲೇ ಇಲ್ಲ. ಆರಂಭಿಕ ಬ್ಯಾಟ್ಸ್ ಮನ್ ಚಂದ್ರಪಾಲ್ ಹೇಮರಾಜ್(1) ಹಾಗೂ ಶಿಮ್ರೋನ್ ಹೆಟ್ಮೇರ್ (9) ಅವರನ್ನು ರೀಫರ್ ಬಹುಬೇಗ ಔಟ್ ಮಾಡಿದರು. ನಾಯಕ ಶೊಯೆಬ್ ಮಲ್ಲಿಕ್ ಕೂಡ 4 ರನ್ ಗಳಿಸಿ ಔಟ್ ಆಗುವ ಮೂಲಕ ನಿರಾಸೆ ಮೂಡಿಸಿದರು.
ಮಿಂಚಿ ಮರೆಯಾದ ಬ್ರೆಂಡನ್ ಕಿಂಗ್:
ವಾರಿಯರ್ಸ್ ಪರ ಕೆಲಕಾಲ ಏಕಾಂಗಿ ಹೋರಾಟ ನಡೆಸಿದ ಆರಂಭಿಕ ಬ್ರೆಂಡನ್ ಕಿಂಗ್ ಟ್ರಿಡೆಂಟ್ಸ್ ಬೌಲರ್ ಗಳಿಗೆ ಕೆಲಕಾಲ ದಂಡಿಸಿದರು. 33 ಎಸೆತಗಳಲ್ಲಿ 43 ರನ್ ಗಳಿಸಿ ಭರವಸೆ ನೀಡಿದ್ದರು. ಆದರೆ, ಅವರನ್ನು ಆಶ್ಲೆ ನರ್ಸ್ ಕೆಡವಿದರು. ಇವರ ಜತೆಗೆ ಮಧ್ಯಮ ಕ್ರಮಾಂಕದಲ್ಲಿ ನೀಕೋಲಸ್ ಪೂರನ್(24) ಹಾಗೂ ಕಿಮೋ ಪಾಲ್ (25) ಕೆಲ ಕಾಲ ಪ್ರತಿರೋಧ ತೋರಿದರು. ವಾರಿಯರ್ಸ್ಗೆ ಯಾವುದೇ ಲಾಭವಾಗಲಿಲ್ಲ. ಇನ್ನುಳಿದ ಬ್ಯಾಟ್ಸ್ ಮನ್ಗಳು ವಿಫಲವಾಗಿದ್ದರಿಂದ ಗಯಾನ ಸತತ ಐದನೇ ಬಾರಿ ಫೈನಲ್ನಲ್ಲಿ ಸೋಲು ಒಪ್ಪಿಕೊಳ್ಳಬೇಕಾಯಿತು.
ಮಿಂಚಿದ ಕಾರ್ಟರ್:
ಇದಕ್ಕೂ ಮುನ್ನ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ್ದ ಬಾರ್ಬಡೋಸ್ ಟ್ರಿಡೆಂಟ್ಸ್ಗ ಆರಂಭಿಕರಾದ ಜಾನ್ಸನ್ ಚಾಲ್ರ್ಸ (39 ರನ್) ಹಾಗೂ ಅಲೆಕ್ಸ್ ಹೇಲ್ಸ್(28 ರನ್) ಅವರು ಮೊದಲನೇ ವಿಕೆಟ್ಗೆ 43 ರನ್ ಕಲೆಹಾಕಿ ಉತ್ತಮ ಆರಂಭ ನೀಡಿದ್ದರು. ಆದರೆ, ಇವರು ಔಟ್ ಆದ ಬಳಿಕ, ಮಧ್ಯಮ ಕ್ರಮಾಂಕದ ಬ್ಯಾಟ್ಸ್ ಮನ್ಗಳು ವಿಫಲರಾದರು. ಫಿಲಿಪ್ ಸೈಟ್ (0), ಶಾಯ್ ಹೋಪ್ (8), ಶಕೀಬ್ ಅಲ್ ಹಸನ್ (15), ಜೇಸನ್ ಹೋಲ್ಡರ್ (1) ನಿರಾಸೆ ಮೂಡಿಸಿದರು. ಆದರೆ, ಏಳನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಇಳಿದ ಜೋನಾಥನ್ ಕಾರ್ಟರ್ ಅವರು ತಂಡಕ್ಕೆ ಆಸರೆಯಾದರು. ಕೇವಲ 27 ಎಸೆತಗಳಲ್ಲಿ ನಾಲ್ಕು ಸಿಕ್ಸರ್ ಹಾಗೂ ನಾಲ್ಕು ಬೌಂಡರಿಯೊಂದಿಗೆ ಅಜೇಯ 50 ರನ್ ಸಿಡಿಸಿದರು. ಇವರಿಗೆ ಕೊನೆಯ ಹಂತದಲ್ಲಿ ಸಾಥ್ ನೀಡಿದ ಆಶ್ಲೆ ನರ್ಸ್ ಅಜೇಯ 19 ರನ್ ಗಳಿಸಿದರು. ಇವರ ಬ್ಯಾಟಿಂಗ್ ನೆರವಿನಿಂದ ಬಾರ್ಬಡೋಸ್ ಸವಾಲಿನ ಮೊತ್ತ ದಾಖಲಿಸಲು ಸಾಧ್ಯವಾಗಿತ್ತು.
ಸಂಕ್ಷಿಪ್ತ ಸ್ಕೋರ್
ಬಾರ್ಬಡೋಸ್ ಟ್ರಿಡೆಂಟ್ಸ್: 20 ಓವರ್ ಗಳಲ್ಲಿ 171/6 (ಜೋನಾಥನ್ ಕಾರ್ಟರ್ ಔಟಾಗದೆ 50, ಜಾನ್ಸನ್ ಚಾಲ್ರ್ಸ 39, ಅಲೆಕ್ಸ್ ಹೇಲ್ಸ್ 28; ಇಮ್ರಾನ್ ತಾಹೀರ್ 24 ಕ್ಕೆ 1)
ಗಯಾನ ಅಮೇಜಾನ್ ವಾರಿಯರ್ಸ: 20 ಓವರ್ ಗಳಲ್ಲಿ 144/9 (ಬ್ರೆಂಡನ್ ಕಿಂಗ್ 43, ಕಿಮೋ ಪಾಲ್ 25; ರೇಮನ್ ರೀಫರ್ 24 ಕ್ಕೆ 4, ಆಶ್ಲೆ ನರ್ಸ್ 17 ಕ್ಕೆ 2)