ಜನದಟ್ಟಣೆ ನಿರ್ವಹಿಸಲು ಟೋಕನ್ ವ್ಯವಸ್ಥೆ ಅಳವಡಿಸಿಕೊಳ್ಳುವಂತೆ ಬ್ಯಾಂಕ್‍ಗಳಿಗೆ ಸೂಚನೆ

ಹೈದರಾಬಾದ್, ಮಾರ್ಚ್ 31, ರಾಷ್ಟ್ರವ್ಯಾಪಿ ಘೋಷಿಸಲಾಗಿರುವ 21 ದಿನಗಳ ಲಾಕ್‌ಡೌನ್ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಫಲಾನುಭವಿಗಳಿಗೆ ಬ್ಯಾಂಕ್‍ಗಳ ಮೂಲಕ ವಿವಿಧ ಪ್ರಯೋಜನಗಳನ್ನು ನೀಡುವುದಾಗಿ ಘೋಷಿಸಿದ ಕೆಲ ದಿನಗಳಲ್ಲೇ  ಜನದಟ್ಟಣೆ ನಿರ್ವಹಿಸಲು ಶಾಖೆಗಳಲ್ಲಿ ಟೋಕನ್ ವ್ಯವಸ್ಥೆ ಕಾರ್ಯಗತಗೊಳಿಸುವಂತೆ ಭಾರತೀಯ ಬ್ಯಾಂಕ್‍ಗಳ ಸಂಘ (ಐಬಿಎ) ಬ್ಯಾಂಕ್‍ಗಳಿಗೆ ಸೂಚಿಸಿದೆ. ಹಣಕಾಸು ಸೇವೆಗಳ ಇಲಾಖೆ, ಹಣಕಾಸು ಸಚಿವಾಲಯ, ಭಾರತ ಸರ್ಕಾರದೊಂದಿಗೆ ಅಖಿಲ ಭಾರತ ಬ್ಯಾಂಕ್ ನೌಕರರ ಸಂಘ (ಎಐಬಿಇಎ) ವಿಷಯವನ್ನು ಚರ್ಚಿಸಿದ ನಂತರ ಐಬಿಎ ಈ ನಿರ್ಧಾರ ಕೈಗೊಂಡಿದೆ.ಲಾಕ್‍ಡೌನ್‍ನ ಪರಿಸ್ಥಿತಿಗಳು, ಸಾಮಾಜಿಕ ಅಂತರದ ಮಾನದಂಡಗಳು ಮತ್ತು ಶಾಖೆಗಳಲ್ಲಿ ಫಲಾನುಭವಿಗಳಿಗೆ ತಡೆರಹಿತ ಸೇವೆ ಲಭ್ಯವಾಗುವಂತಾಗಲು  ಐಬಿಎ ಬ್ಯಾಂಕುಗಳಿಗೆ ಸೂಚನೆಗಳನ್ನು ರವಾನಿಸಿದೆ ಎಂದು ಎಐಬಿಇಎ ಪ್ರಧಾನ ಕಾರ್ಯದರ್ಶಿ ಚ ವೆಂಕಟಾಚಲಂ ತಿಳಿಸಿದ್ದಾರೆ.ಈ ಕುರಿತಂತೆ ಅವರು ಎಐಬಿಇಎ ಪದಾಧಿಕಾರಿಗಳು, ರಾಜ್ಯ ಒಕ್ಕೂಟಗಳು ಮತ್ತು ಅಖಿಲ ಭಾರತ ಬ್ಯಾಂಕ್‍ ವಾರು ಸಂಸ್ಥೆಗಳಿಗೆ ಸುತ್ತೋಲೆ ಹೊರಡಿಸಿದ್ದಾರೆ.
ಜನದಟ್ಟಣೆ ನಿರ್ವಹಿಸುವ ದೃಷ್ಟಿಯಿಂದ ಶಾಖೆಗಳಲ್ಲಿ ಟೋಕನ್ ವ್ಯವಸ್ಥೆ ಜಾರಿಗೆ ತರಲು ಐಬಿಎ ಸೋಮವಾರ ಬ್ಯಾಂಕುಗಳಿಗೆ ಸೂಚನೆ ನೀಡಿದೆ. ಪ್ರತಿ ಶಾಖೆಯಲ್ಲಿನ ಸಾಮರ್ಥ್ಯಕ್ಕೆ ಅನುಗುಣವಾಗಿ ಫಲಾನುಭವಿಗಳಿಗೆ ದಿನಕ್ಕೆ ಸುಮಾರು 200 ಟೋಕನ್‍ಗಳನ್ನು ನೀಡಲಾಗುವುದು ಎಂದು ವೆಂಕಟಾಚಲಂ ತಿಳಿಸಿದ್ದಾರೆ. ರುಪೇ ಕಾರ್ಡ್ ಹೊಂದಿರುವ ಗ್ರಾಹಕರು ಹಣವನ್ನು ಡ್ರಾ ಮಾಡಲು ಎಟಿಎಂ / ಎಇಪಿಎಸ್ ನಂತಹ ವಿದ್ಯುನ್ಮಾನ ವ್ಯವಸ್ಥೆಗಳನ್ನು ಬಳಸುವಂತೆ ಐಬಿಎ ಸಲಹೆ ಮಾಡಿದೆ. ಹೆಚ್ಚಿನ ಸಂಖ್ಯೆಯ ಫಲಾನುಭವಿಗಳಿಗೆ ವಿವಿಧ ಪ್ರಯೋಜನಗಳನ್ನು ಬ್ಯಾಂಕ್‍ಗಳ ಮೂಲಕ ವಿತರಿಸಲು ಕೇಂದ್ರ ಸರ್ಕಾರ ಪ್ರಕಟಿಸುವುದರೊಂದಿಗೆ  ಲಾಕ್‌ಡೌನ್ ಪರಿಸ್ಥಿತಿಯಲ್ಲಿ ಪಾವತಿ ಮತ್ತು ವಿತರಣೆಯ ಪರಿಣಾಮಕಾರಿ ನಿರ್ವಹಣೆ ಬಗ್ಗೆ ಸಾಕಷ್ಟು ಆತಂಕಗಳಿವೆ. ಅಲ್ಲದೆ ಬ್ಯಾಂಕ್‍ ಶಾಖೆಗಳಲ್ಲಿ ಹೆಚ್ಚು ಜನ ಸೇರುವುದರಿಂದ ವೈರಸ್‍ ಸೋಂಕಿನ ಅಪಾಯವಿದೆ ಎಂದು ವೆಂಕಟಾಚಲಂ ಹೇಳಿದ್ದಾರೆ.