ವಿಶಾಖಪಟ್ಟಣಂ, ಫೆ ೭ , ತೆಲುಗು ದೇಶಂ ಶಾಸಕ, ಪ್ರಸಿದ್ದ ಚಿತ್ರ ನಟ ಬಾಲಕೃಷ್ಣ ಅಳಿಯ ಹಾಗೂ ಗೀತಂ ಶೈಕ್ಷಣಿಕ ಸಂಸ್ಥೆಗಳ ಮುಖ್ಯಸ್ಥ ಭರತ್ ಕರೂರ್ ವೈಶ್ಯ ಬ್ಯಾಂಕ್ ಆಘಾತ ನೀಡಿದೆ. ಸಾಲ ಮರುಪಾವತಿಸದ ಕಾರಣ ಭರತ್ ಅವರ ತಂದೆ ಪಟ್ಟಾಭಿ ರಾಮ ರಾವ್ ಮತ್ತು ಕುಟುಂಬ ಸದಸ್ಯರಿಗೆ ಕರೂರ್ ವೈಶ್ಯ ಬ್ಯಾಂಕ್ ನೋಟೀಸ್ ನೀಡಿದೆ. ಟೆಕ್ನೋ ಯುನಿಕ್ ಇನ್ಫ್ರಾಟೆಕ್ ಕಂಪನಿ ಹೆಸರಿನಲ್ಲಿ ಭರತ್ ಸಂಸ್ಥೆ ಪಡೆದುಕೊಂಡಿರುವ ೧೨೪ ಕೋಟಿ, ೩೯ ಲಕ್ಷ ೨೧ ಸಾವಿರ ಮತ್ತು ೪೮೫ ಪೈಸೆಯನ್ನು ಜನವರಿ ೨೧ ರೊಳಗೆ ಪಾವತಿಸಬೇಕೆಂದು ಬ್ಯಾಂಕ್ ನೋಟಿಸ್ ನೀಡಿತ್ತು. ಆದರೆ, ಯಾವುದೇ ಪ್ರತಿಕ್ರಿಯೆ ನೀಡದ ಕಾರಣ ಮತ್ತೊಂದು ನೋಟೀಸ್ ನೀಡಿ ಸಾಲದ ಭದ್ರತೆಗೆ ನೀಡಿರುವ ಸ್ಥಿರಾಸ್ತಿ ಹರಾಜು ಹಾಕುವುದಾಗಿ ಎಚ್ಚರಿಕೆ ನೀಡಿದೆ. ಸಾಲದ ಭದ್ರತೆಗಾಗಿ ನೀಡಿರುವ ಗಾಜುವಾಕ ಮಂಡಲಂ, ಭೀಮಿಲಿ ಮಂಡಲಂನ ನೂರಾರು ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಂಡು, ಹರಾಜು ಹಾಕುವುದಾಗಿ ನೋಟೀಸ್ ನಲ್ಲಿ ಎಚ್ಚರಿಸಿದೆ. ಈ ಹಿಂದೆ ಭರತ್, ಆಂಧ್ರ ಬ್ಯಾಂಕ್ ನಲ್ಲೂ, ಸುಮಾರು ರೂ. ೧೦೦ ಕೋಟಿ ಸಾಲ ಪಡೆದು ಸುಸ್ತಿದಾರರಾಗಿದ್ದಾರೆ ಎಂದು ಹೇಳಲಾಗಿದೆ. ಕಳೆದ ಸಾರ್ವತ್ರಿಕ ಚುನಾವಣೆಯಲ್ಲಿ ವಿಶಾಖಪಟ್ಟಣಂ ಲೋಕಸಭಾ ಕ್ಷೇತ್ರದಲ್ಲಿ ಟಿಡಿಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಭರತ್ ಸೋಲುಕಂಡಿದ್ದರು.