ನವದೆಹಲಿ, ಫೆ.6 : ಐಸಿಸಿ ಅಂಡರ್ -19 ವಿಶ್ವಕಪ್‌ನ ಎರಡನೇ ಸೆಮಿಫೈನಲ್‌ನಲ್ಲಿ ಬಾಂಗ್ಲಾದೇಶ ಅತ್ಯುತ್ತಮ ಬೌಲಿಂಗ್ ಪ್ರದರ್ಶಿಸಿ ನ್ಯೂಜಿಲೆಂಡ್ ತಂಡವನ್ನು 50 ಓವರ್‌ಗಳಲ್ಲಿ ಎಂಟು ವಿಕೆಟ್‌ಗೆ 211 ರನ್ ಗಳಿಗೆ ಕಟ್ಟಿ ಹಾಕಿದೆ.
ಟಾಸ್ ಗೆದ್ದ ಬಾಂಗ್ಲಾದೇಶ ಮೊದಲು ಫೀಲ್ಡಿಂಗ್ ಮಾಡಲು ನಿರ್ಧರಿಸಿತು. ಬಾಂಗ್ಲಾ ಬೌಲರ್ ಗಳ ಕರಾರುವಕ್ ದಾಳಿಯ ಎದುರು ಕಿವೀಸ್ ಬ್ಯಾಟ್ಸ್ ಮನ್ ಗಳು ರನ್ ಕಲೆ ಹಾಕುವಲ್ಲಿ ಹಿಂದೆ ಬಿದ್ದರು. ನ್ಯೂಜಿಲೆಂಡ್ ತಂಡದ ಪರ ಬ್ಯಾಕ್‌ಹ್ಯಾಮ್ ವೀಲರ್ ಗ್ರೀನಾಲ್ 83 ಎಸೆತಗಳಲ್ಲಿ ಐದು ಬೌಂಡರಿ ಮತ್ತು ಎರಡು ಸಿಕ್ಸರ್‌ಗಳ ಸಹಾಯದಿಂದ ಅಜೇಯ 75 ರನ್ ಗಳಿಸಿದರೆ, ನಿಕೋಲಸ್ ಲಿಡ್‌ಸ್ಟೋನ್ 44 ರನ್ ಗಳಿಸಿ ತಂಡಕ್ಕೆ ನೆರವಾದರು.
ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ಕಳಪೆ ಆರಂಭ ಕಂಡಿತು. ಎರಡನೇ ಓವರ್‌ನಲ್ಲಿ ಆರಂಭಿಕ ರೀಸ್ ಮಾರೌ (1) ವಿಕೆಟ್ ಕಳೆದುಕೊಂಡಿತು. ಮೊದಲ ವಿಕೆಟ್ ಕುಸಿದ ನಂತರ, ಆಲಿ ವೈಟ್ ಮತ್ತು ಫರ್ಗುಸ್ ಲಾಲ್ಮನ್ ತಂಡವನ್ನು ಅಪಾಯದಿಂದ ಮೇಲೆತ್ತುವ ಯೋಜನೆ ಹಾಕಿಕೊಂಡರೂ ಫಲಿಸಲಿಲ್ಲ. ನ್ಯೂಜಿಲೆಂಡ್‌ನ ಪರ ಲಾಲ್‌ಮನ್ 24, ವೈಟ್ 18, ಜೋ ಫೀಲ್ಡ್ 12 ಮತ್ತು ನಾಯಕ ಜೆಸ್ಸಿ ತಾಶ್‌ಕಾಫ್ 10 ರನ್ ಗಳಿಸಿದರು.
ಬಾಂಗ್ಲಾದೇಶದ ಪರ ಶರೀಫುಲ್ ಇಸ್ಲಾಂ 45 ರನ್‌ಗಳಿಗೆ 3, ಶಮೀಮ್ ಹುಸೇನ್ ಮತ್ತು ಹಸನ್ ಮುರಾದ್ ತಲಾ ಎರಡು ವಿಕೆಟ್ ಪಡೆದರು.