ಚಹಾ ವಿರಾಮಕ್ಕೆ ಬಾಂಗ್ಲಾ 7 ವಿಕೆಟ್ ಗೆ 140 ರನ್: ಮೇಲುಗೈ ಸಾಧಿಸಿದ ಭಾರತ

ಇಂದೋರ್, ನ.14 :      ಅನುಭವಿ ಬೌಲರ್ ಮೊಹಮ್ಮದ್ ಶಮಿ (27ಕ್ಕೆ 3) ಹಾಗೂ ಆರ್.ಅಶ್ವಿನ್ (43ಕ್ಕೆ 2) ಅವರ ಮಾರಕ ದಾಳಿಯ ನೆರವಿನಿಂದ ಭಾರತ ಇಲ್ಲಿ ಆರಂಭವಾದ ಮೊದಲ ಟೆಸ್ಟ್ ನಲ್ಲಿ ಚಹಾ ವಿರಾಮದ ವೇಳೆಗೆ ಬಾಂಗ್ಲಾದೇಶ ತಂಡವನ್ನು 7 ವಿಕೆಟ್ ಗೆ 140 ರನ್ ಗೆ ಕಟ್ಟಿ ಹಾಕಿದೆ.   

ಮೊದಲು ಬ್ಯಾಟ್ ಮಾಡಿದ ಬಾಂಗ್ಲಾದೇಶ ತಂಡಕ್ಕೆ ಆರಂಭಕ್ಕೆ ಆಘಾತಕ್ಕೆ ಒಳಗಾಯಿತು. ಶದಮಾನ್ ಇಸ್ಲಾಮ್ (6), ಇಮ್ರುಲ್ ಕೇಸ್ (6) ಹಾಗೂ ಮಧ್ಯಮ ಕ್ರಮಾಂಕದ ಮೊಹಮ್ಮದ್ ಮಿಥುನ್ (13) ರನ್ ಕಲೆ ಹಾಕುವಲ್ಲಿ ವಿಫಲರಾದರು. ನಾಲ್ಕನೇ ವಿಕೆಟ್ ಗೆ ಮೊಮಿನುಲ್ ಹಕ್ ಹಾಗೂ ಮುಷ್ಫೀಕರ್ ರಹೀಮ್ ಜೋಡಿ ಅರ್ಧಶತಕದ ಜೊತೆಯಾಟವನ್ನು ನೀಡಿತು.   

ಮೊಮಿನುಲ್ ಹಕ್ 37, ಮುಷ್ಫೀಕರ್ 43 ರನ್ ಗೆ ವಿಕೆಟ್ ಒಪ್ಪಿಸಿದರು. ಮಧ್ಯಮ ಕ್ರಮಾಂಕದಲ್ಲಿ ಮಹಮುದಲ್ಲ (10), ಲೀಟನ್ ದಾಸ್ (ಅಜೇಯ 21) ರನ್ ಕಲೆ ಹಾಕಿ ತಂಡಕ್ಕೆ ನೆರವಾಗಿದ್ದಾರೆ.  

ಮೊಹಮ್ಮದ್ ಶಮಿ 11 ಓವರ್ ಗಳಿಗೆ 3 ಮೆಡೆನ್ ಸೇರಿದಂತೆ 27 ರನ್ ನೀಡಿ 3 ವಿಕೆಟ್ ಪಡೆದರು. ಅಶ್ವಿನ್ 2 ವಿಕೆಟ್ ಪಡೆದು ಬೀಗಿದರು. ಉಳಿದಂತೆ ಇಶಾಂತ್ ಶರ್ಮಾ ಹಾಗೂ ಉಮೇಶ್ ಯಾದವ್ ತಲಾ ಒಂದು ವಿಕೆಟ್ ಪಡೆದರು.