ಬಾಲ್ಯವಿವಾಹ ತಡೆದ ಬೆಂಗಳೂರು ಸಿಟಿ ಪೊಲೀಸ್ ಫೇಸ್ ಬುಕ್ ಖಾತೆ

ಬೆಂಗಳೂರು,  ಜ 28 ತನ್ನ ಬಾಲ್ಯ ವಿವಾಹ ತಡೆಯುವಂತೆ ಕೋರಿ ಅಪ್ರಾಪ್ತೆಯೊಬ್ಬಳು ಸಲ್ಲಿಸಿದ  ಮನವಿಗೆ ಬೆಂಗಳೂರು ಪೊಲೀಸರು ಸ್ಪಂದಿಸಿರುವ ಪ್ರಕರಣವೊಂದು ವರದಿಯಾಗಿದೆ.ಮನೆಯವರು  ಬಲವಂತವಾಗಿ ತನಗೆ ಮದುವೆ ಮಾಡುತ್ತಿದ್ದಾರೆ ಎಂದು ಆರೋಪಿಸಿ ಬಾಲಕಿಯೊಬ್ಬಳು ತನ್ನ  ಸ್ನೇಹಿತೆಯ ಫೇಸ್ ಬುಕ್ ಖಾತೆಯಿಂದ ಬೆಂಗಳೂರು ಸಿಟಿ ಪೊಲೀಸ್​​ ಫೇಸ್​ಬುಕ್​ ಖಾತೆಗೆ  ಪೋಸ್ಟ್ ಮಾಡುವ ಮೂಲಕ  ಪೊಲೀಸರಿಗೆ‌ ತನ್ನ ಅಳಲು ತೊಡಿಕೊಂಡಿದ್ದಳು.

ಇದೇ  ತಿಂಗಳ 30ಕ್ಕೆ ನನ್ನ ವಿವಾಹ‌ ಮಾಡಲು ಪೋಷಕರು ತೀರ್ಮಾನಿಸಿದ್ದಾರೆ. ನಾನಿನ್ನು 9ನೇ  ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವೆ. ಹೀಗಾಗಿ ನನ್ನ ವಿವಾಹ ಮಾಡದಂತೆ ಪೋಷಕರಿಗೆ  ಬುದ್ಧಿವಾದ ಹೇಳಿ ಎಂದು ಬಾಲಕಿ ತಮ್ಮ ತಂದೆಯ ಮೊಬೈಲ್ ಸಂಖ್ಯೆಯನ್ನು ನಮೂದಿಸಿ ಪೋಸ್ಟ್  ಮಾಡಿದ್ದಳು.ತಕ್ಷಣವೇ ಬೆಂಗಳೂರು‌ ನಗರ ಪೊಲೀಸರು ಮನವಿಗೆ ಸ್ಪಂದಿಸುವುದಾಗಿ ಭರವಸೆ ನೀಡಿದರು‌.

ನಂತರ  ಬೆಂಗಳೂರು ಪೊಲೀಸರು, ಮೈಸೂರು ಪೊಲೀಸರಿಗೆ ಮಾಹಿತಿ ನೀಡಿ, ಬಾಲಕಿಯ  ಪೋಸ್ಟ್ ಕುರಿತು  ಮಾಹಿತಿ ನೀಡಿದ್ದರು. ಶೀಘ್ರವೇ ಮೈಸೂರು ಜಿಲ್ಲೆಯ ಜಯಪುರ ಗ್ರಾಮದ ಪೊಲೀಸರು ಬಾಲಕಿಯ  ಮನೆಗೆ ತೆರಳಿ, ಬಾಲ್ಯವಿವಾಹ ಅಪರಾಧ ಎಂದು ತಿಳಿ ಹೇಳಿ ಜ. 30ರಂದು ನಡೆಯಬೇಕಿದ್ದ  ಮದುವೆಯನ್ನು ರದ್ದು ಪಡಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಯಾವುದೇ ದೂರು ದಾಖಲಿಸಿಕೊಂಡಿಲ್ಲ. ಅದರೆ, ಬಾಲಕಿಯ ಪೋಷಕರಿಗೆ ಎಚ್ಚರಿಕೆ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಬಾಲಕಿಯು ಮೈಸೂರು ಜಿಲ್ಲೆಯ ಜಯಪುರ ಗ್ರಾಮದವಳು ಎಂದು ತಿಳಿದು ಬಂದಿದೆ