ಹಾಲು ಉತ್ಪಾದಕರ ಹಿತ ಕಾಪಾಡಲು ಬಮೂಲ್ ಬದ್ಧ: ನರಸಿಂಹಮೂರ್ತಿ

ಬೆಂಗಳೂರು, ಮಾ.31,ಕೊರೋನಾ ಸೋಂಕಿನ ಭೀತಿ ಹಾಗೂ ಲಾಕ್‌ಡೌನ್‌ ನ ಕ್ಲಿಷ್ಟ ಪರಿಸ್ಥಿತಿಯಲ್ಲೂ ಸಹ ರೈತರು ಸರಬರಾಜು ಮಾಡುವ ಹಾಲಿಗೆ ರಜಾ ಘೋಷಿಸದೆ  ಹಾಲು ಉತ್ಪಾದಕರ ಹಿತ ಕಾಪಾಡಲು ಒಕ್ಕೂಟದ ಆಡಳಿತ ಮಂಡಳಿಯು ಸಹ ಬದ್ಧವಾಗಿದೆ ಎಂದು ಅಧ್ಯಕ್ಷ ನರಸಿಂಹಮೂರ್ತಿ ತಿಳಿಸಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರು ನಗರ, ಗ್ರಾಮಾಂತರ ಹಾಗೂ ರಾಮನಗರ ಜಿಲ್ಲಾ ಹಾಲು ಒಕ್ಕೂಟ  (ಬಮೂಲ್) ಸಂಸ್ಥೆಯು ನಿರಂತರವಾಗಿ ಗ್ರಾಮಾಂತರ ಹಾಲು ಉತ್ಪಾದಕರ ಹಾಗೂ ನಗರದ ಗ್ರಾಹಕ ಸೇವೆಯನ್ನು ಸಮರ್ಪಕವಾಗಿ ನೀಡುತ್ತಾ ಬಂದಿದೆ. ಪ್ರಸ್ತುತ ದಿನಂಪ್ರತಿ ಸರಾಸರಿ 14.30 ಲಕ್ಷ ಲೀಟರ್ ಹಾಲು ಶೇಖರಣೆ ಮಾಡಲಾಗುತ್ತಿದೆ. ಬೆಂಗಳೂರು ನಗರದಲ್ಲಿ 9.5 ಲಕ್ಷ ಲೀಟರ್ ಹಾಲು ಹಾಗೂ 1.6 ಲಕ್ಷ ಲೀಟರ್ ಮೊಸರು ಪ್ರತಿನಿತ್ಯ ಮಾರಾಟ ಮಾಡಲಾಗುತ್ತಿತ್ತು ಎಂದು ನರಸಿಂಹಮೂರ್ತಿ ತಿಳಿಸಿದ್ದಾರೆ.
ಉಳಿದ ಹಾಲನ್ನು ಕನಕಪುರ ಉತ್ಪನ್ನ ಸಂಕೀರ್ಣದಲ್ಲಿ ಉತ್ಪನ್ನಗಳ ತಯಾರಿಕೆಗೆ ಬಳಸಲಾಗುತ್ತಿತ್ತು.ಪ್ರಸ್ತುತ ಕೊರೋನಾ ವೈರಸ್‌ ರೋಗ ಹರಡುವುದನ್ನು ತಡೆಗಟ್ಟಲು ಸರ್ಕಾರ ವಿಧಿಸಿರುವ ಲಾಕ್‌ಡೌನ್‌ ವ್ಯವಸ್ಥೆಯಿಂದಾಗಿ ಹೋಟೆಲ್‌ಗಳು, ಹಾಸ್ಟೆಲ್‌ಗಳು ಇತರ ಕಚೇರಿ ಹಾಗೂ ಸಂಸ್ಥೆಗಳು ಮುಚ್ಚಿರುವುದರಿಂದ 1.5 ಲಕ್ಷ ಲೀಟರ್ ಹಾಲು ಹಾಗೂ 40 ಸಾವಿರ ಲೀಟರ್ ಮೊಸರಿನ ಮಾರಾಟದಲ್ಲಿ ಕಡಿಮೆಯಾಗಿತದೆ. ಇದರಿಂದಾಗಿ 8 ಲಕ್ಷ ಲೀಟರ್ ಹಾಲು ಹಾಗೂ 1.20 ಲೀಟರ್ ಮೊಸರು ಈಗ ಮಾರಾಟವಾಗುತ್ತಿದೆ. ಕನಕಪುರ ಉತ್ಪನ್ನ ಸಂಕೀರ್ಣದಲ್ಲಿ 3.5-4.0 ಲಕ್ಷ ಲೀಟರ್ ಹಾಲಿನಿಂದ ಹಾಲಿನ ಪುಡಿ ತಯಾರಿಸಲಾಗುತ್ತಿದೆ. ಉಳಿದ ಹೆಚ್ಚುವರಿ ಹಾಲನ್ನು ಹೊರ ರಾಜ್ಯದ ಹಾಲಿನ ಪುಡಿ ಘಟಕಗಳಾದ ಫಾರ್ಮ್ ಗೇಟ್‌ ಡೈರಿ, ಒಂಗೋಲ್ ಡೈರಿ ಹಾಗೂ ಪರಾಗ್ ಡೈರಿಗೆ ಹಾಲಿನ ಪುಡಿ ಪರಿವರ್ತನೆಗೆ ಕಳುಹಿಸಲಾಗುತ್ತಿದೆ.
ಇಂತಹ ಕ್ಲಿಷ್ಟ ಪರಿಸ್ಥಿತಿಯಲ್ಲೂ ಸಹ ರಾಜ್ಯ ಸರ್ಕಾರದ ಹಾಗೂ ಕರ್ನಾಟಕ ಹಾಲು ಮಹಾ ಮಂಡಳಿಯ ಸಹಕಾರದೊಂದಿಗೆ ಗ್ರಾಹಕರಿಗೆ ಅನಾನುಕೂಲವಾಗದಂತೆ ಹಾಲು ಹಾಗೂ ಹಾಲಿನ ಉತ್ಪನ್ನಗಳನ್ನು ಸರಬರಾಜು ಮಾಡಲು ಸಿಬ್ಬಂದಿ ವರ್ಗ, ಗುತ್ತಿಗೆದಾರರು, ಗುತ್ತಿಗೆ ಸಿಬ್ಬಂದಿಗಳು ಹಾಲಿನ ವಿತರಕರು ಸಂಪೂರ್ಣವಾಗಿ ಅವರ ಕಾರ್ಯದಲ್ಲಿ ತೊಡಗಿಸಿಕೊಂಡು ಯಾವ ವ್ಯತ್ಯಾಸವಾಗದೆ ಸೇವೆ ನೀಡುತ್ತಿರುವುದಕ್ಕೆ ಹಾಗೂ ನಂದಿನಿ ಹಾಲನ್ನು ನಿಯಮಿತವಾಗಿ ಖರೀದಿಸಿ ಗ್ರಾಮೀಣ ಬಡ ರೈತರ ಅಭ್ಯುದಯಕ್ಕೆ ಸಹಕರಿಸುತ್ತಿರುವ ಎಲ್ಲಾ ಗ್ರಾಹಕರಿಗೂ ಒಕ್ಕೂಟದ ಆಡಳಿತ ಮಂಡಳಿಯು ಅಭಿನಂದಿಸುತ್ತದೆ. ಸರ್ಕಾರದ ನಿರ್ದೇಶನದಂತೆ ಪೊಲೀಸ್ ಇಲಾಖೆಯು ಕೂಡ ಹಾಲಿನ ಶೇಖರಣೆ ವಾಹನ, ಬಿಎಂಸಿ ಟ್ಯಾಂಕರ್ ಸಾಗಾಣಿಕೆ, ವಿತರಣಾ ವಾಹನ ಹಾಗೂ ಸಿಬ್ಬಂದಿಗಳು ಕೆಲಸಕ್ಕೆ ಹಾಜರಾಗಲು ಸಹಕಾರ ನೀಡುತ್ತಿದ್ದಾರೆ ಎಂದು ಅವರು ತಿಳಿಸಿದರು.