ಲೋಕದರ್ಶನ ವರದಿ
ಸಿದ್ದಾಪುರ: ತಾಲೂಕಿನ ಬಾಳೇಸರದಲ್ಲಿ ಬುಧವಾರ ರಾತ್ರಿ ಬೀಸಿದ ಗಾಳಿಗೆ ಹಾಗೂ ಸುರಿದ ಮಳೆಗೆ ಬಿಎಸ್ಎನ್ಎಲ್ನ ಟವರ್, ಪೊವರ್ ಪ್ಲಾಂಟ್ನ ಮನೆಯ ಮೇಲ್ಚಾವಣಿ ಹಾರಿ ಹೋಗಿ ಉಪಕರಗಳು ಹಾನಿಗೊಂಡಿದೆ.
ಮೇಲ್ಚಾವಣಿ ಹಾರಿ ಹೋಗಿದ್ದರಿಂದ ಒಳಗಡೆ ನೀರು ತುಂಬಿಕೊಂಡಿದೆ. ಸ್ಥಿರ ದೂರವಾಣಿ ಹಾಗೂ ಮೊಬೈಲ್ ಟವರ್ ಸೇವೆ ಸ್ಥಗಿತಗೊಂಡಿದೆ.
ಈ ಕುರಿತು ಬಿಎಸ್ಎನ್ಲ್ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದ್ದು ಸಂಬಂಧ ಪಟ್ಟ ಇಲಾಖೆ ಅಧಿಕಾರಿಗಳು ಕೂಡಲೇ ಸ್ಥಿರ ಹಾಗೂ ಮೊಬೈಲ್ ಟವರ್ ಸರಿಪಡಿಸಿ ಗ್ರಾಹಕರಿಗೆ ಅನುಕೂಲಮಾಡಿಕೊಡುವಂತೆ ಬಾಳೇಸರ ಸುತ್ತಮುತ್ತಲಿನ ದೂರವಾಣಿ ಗ್ರಾಹಕರು ಆಗ್ರಹಿಸಿದ್ದಾರೆ.
ಬಿದ್ರಕಾನ ಗ್ರಾಪಂ ವ್ಯಾಪ್ತಿಯ ಮಣ್ಣಿಕೊಪ್ಪದ ಮಾದೇವ ಗೋವಿಂದ ನಾಯ್ಕ ಅವರ ಮನೆಯ ಮೇಲೆ ಮರವೊಂದು ಬಿದ್ದು ಭಾಗಶಃ ಮನೆ ಜಖಂಗೊಂಡಿದೆ. ಅಂದಾಜು 20ಸಾವಿರ ರೂ ಹಾನಿ ಸಂಭವಿಸಿದೆ.
ಇಟಗಿ ಸಮೀಪದ ಚಂದ್ರಘಟಗಿಯ ವಾಸ್ತವ್ಯದ ಮನೆಯೊಂದಕ್ಕೆ ಸಿಡಿಲು ಬಡಿದು ಕೆರಿಯಪ್ಪ ಕನ್ನ ನಾಯ್ಕ ಹಾಗೂ ಪ್ರಶಾಂತ ಕೆರಿಯಪ್ಪ ನಾಯ್ಕ ಇವರಿಗೆ ಸ್ವಲ್ಪ ಪ್ರಮಾಣದಲ್ಲಿ ಸಿಡಿಲು ಬಡಿದಿದೆ. ಇಬ್ಬರೂ ಚಿಕಿತ್ಸೆ ಪಡೆದುಕೊಂಡಿದ್ದರೆ ಮನೆಯಲ್ಲಿನ ವಿದ್ಯುತ್ ಉಪಕರಣಗಳು ಸುಟ್ಟುಹೋಗಿದ್ದು ಐವತ್ತು ಸಾವಿರ ರೂಗಳಷ್ಟು ಹಾನಿ ಸಂಭವಿಸಿದೆ.
ಬಿದ್ರಕಾನ ಗ್ರಾಪಂ ವ್ಯಾಪ್ತಿಯ ಅಗಳಗದ್ದೆಯ ಶೋಭಾ ಬಿಳಿಯಾ ಗೌಡ ಅವರ ಕೊಟ್ಟಿಗೆ ಮನೆಗೆ ಗುರುವಾರ ಬೆಳಗ್ಗೆ ಆಕಸ್ಮಿಕ ಬೆಂಕಿ ಬಿದ್ದು ಕೊಟ್ಟಿಗೆ ಮನೆ ಸಂಪೂರ್ಣ ಸುಟ್ಟು ಹೋಗಿದ್ದು ಅಂದಾಜು 20ಸಾವಿರ ರೂಗಳಷ್ಟು ಹಾನಿ ಸಂಭವಿಸಿದೆ.