ಮರಳಿ ಸಾಹಿತ್ಯಕ್ಕೆ : ಕಾವ್ಯ ಸಾಹಿತ್ಯ ಮತ್ತು ಪ್ರಾಚೀನ ಭಾರತದ ಸಾಮಾಜಿಕ ಚರಿತ್ರೆ

Back to Literature: Poetry and Social History of Ancient India

ಬಳ್ಳಾರಿ 04:ಕನ್ನಡ ವಿಶ್ವವಿದ್ಯಾಲಯದ ಚರಿತ್ರೆ ವಿಭಾಗದಲ್ಲಿ ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಘದ ಸಹಯೋಗದೊಂದಿಗೆ ಆನ್‌ಲೈನ್‌ನಲ್ಲಿ ವಿಶೇಷ ದತ್ತಿ ಉಪನ್ಯಾಸ ಕಾರ್ಯಕ್ರಮ ನಡೆಯಿತು. ದೆಹಲಿ ವಿಶ್ವವಿದ್ಯಾಲಯದ ಇತಿಹಾಸ ವಿಭಾಗದ ವಿಶ್ರಾಂತ ಪ್ರಾಧ್ಯಾಪಕರಾದ ಡಾ. ಕೇಶವನ್ ವೆಳುತ್ತಾಟ್ ಅವರು “ಮರಳಿ ಸಾಹಿತ್ಯಕ್ಕೆ : ಕಾವ್ಯ ಸಾಹಿತ್ಯ ಮತ್ತು ಪ್ರಾಚೀನ ಭಾರತದ ಸಾಮಾಜಿಕ ಚರಿತ್ರೆ” ಎನ್ನುವ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿದರು.  

ಸಾಹಿತ್ಯ ಮತ್ತು ಚರಿತ್ರೆಯ ನಡುವಿನ ಸಂಬಂಧ, ಚಾರಿತ್ರಿಕ ಜ್ಞಾನ ಸಂಪಾದನೆಗೆ ಸಾಹಿತ್ಯಕ್ಕೆ ಮರಳಿ ಹೋಗುವ ಅನಿವಾರ್ಯತೆ ಹಾಗೂ ಚಾರಿತ್ರಿಕ ಪ್ರಜ್ಞೆಯೊಂದಿಗೆ ಸಾಹಿತ್ಯವನ್ನು ಓದುವ ಕ್ರಮದ ಕುರಿತು ವಿಮರ್ಶಾತ್ಮಕವಾಗಿ ಮಾತನಾಡಿದರು. ಮಹಾಭಾರತದಿಂದ ಆಯ್ದ ಭಾರವಿಯ ಕಿರಾತಾರ್ಜುನೀಯ ಹಾಗೂ ಮಾಗನ ಶಿಶುಪಾಲವಧ ಕಾವ್ಯಗಳ ಮೂಲಕ ಪ್ರಾಚೀನ ಹಾಗೂ ಆರಂಭಿಕ ಮಧ್ಯಕಾಲಿನ ಭಾರತದ ಸಾಮಾಜಿಕ ಹಾಗೂ ರಾಜಕೀಯ ಸ್ಥಿತ್ಯಂತರಗಳನ್ನು ತುಲನಾತ್ಮಕವಾಗಿ ವಿವರಿಸಿದರು. ಮಹಾಭಾರತವನ್ನು ಮೂಲ ಪಠ್ಯವಾಗಿ ಹಾಗೂ ಭಾರವಿ ಮತ್ತು ಮಾಗನ ಕಾವ್ಯಗಳನ್ನು ಅದರ ರೂಪಾಂತರಗಳಾಗಿ ನೋಡಿ ಅವುಗಳಲ್ಲಿನ ಭಿನ್ನತೆ ಹಾಗೂ ಸಾಮ್ಯತೆಗಳನ್ನು ಆಯಾ ಚಾರಿತ್ರಿಕ ಸಂದರ್ಭದ ಬೆಳವಣಿಗೆಯೊಂದಿಗೆ ವಿಮರ್ಶಿಸಿದರು.  

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕನ್ನಡ ವಿಶ್ವವಿದ್ಯಾಲಯದ ಮಾನ್ಯ ಕುಲಪತಿಗಳಾದ ಡಾ. ಡಿ.ವಿ ಪರಮಶಿವಮೂರ್ತಿ ಅವರು ಸಾಹಿತ್ಯವನ್ನು ಚರಿತ್ರೆಗೆ ಆಕರವಾಗಿ ಬಳಸಿಕೊಳ್ಳುವಾಗ ಚರಿತ್ರಕಾರರಿಗೆ ಇರಬೇಕಾದ ಎಚ್ಚರಿಕೆ ಹಾಗೂ ಪ್ರಭುತ್ವದ ಚೌಕಟ್ಟಿನಲ್ಲಿ ನಿರ್ಮಾಣಗೊಂಡ ಸಾಹಿತ್ಯದ ಮಿತಿಗಳ ಕುರಿತು ಮಾತನಾಡಿದರು.  

ಚರಿತ್ರೆ ವಿಭಾಗದ ಮುಖ್ಯಸ್ಥರಾದ ಡಾ. ಕೆ. ಮೋಹನ್‌ಕೃಷ್ಣ ರೈ ಅವರು ಪ್ರಾಸ್ತಾವಿಕ ಮಾತುಗಳನ್ನಾಡಿ ಎಲ್ಲರನ್ನೂ ಸ್ವಾಗತಿಸಿದರು. ಡಾ. ಮಣಿಕಂಠ ಹಂಗಳ ಕಾರ್ಯಕ್ರಮ ನಿರೂಪಿಸಿದರು. ಆನ್‌ಲೈನ್ ಕಾರ್ಯಕ್ರಮದಲ್ಲಿ ಕನ್ನಡ ವಿಶ್ವವಿದ್ಯಾಲಯದ ಪ್ರಾಧ್ಯಾಪಕರು, ಸಂಶೋಧಕರು ಹಾಗೂ ವಿವಿಧ ವಿಶ್ವವಿದ್ಯಾನಿಲಯಗಳ ಪ್ರಾಧ್ಯಾಪಕರು ಹಾಗೂ ವಿದ್ವಾಂಸರು ಭಾಗವಹಿಸಿದ್ದರು.