ಕರಾಚಿ, ಮೇ 13,ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ 2017ರ ಆವೃತ್ತಿಯಲ್ಲಿ ಪಾಕಿಸ್ತಾನಕ್ಕೆ ಪ್ರಶಸ್ತಿ ಗೆದ್ದುಕೊಟ್ಟು, ಐಸಿಸಿ ಟಿ20 ಶ್ರೇಯಾಂಕ ಪಟ್ಟಿಯಲ್ಲಿ ಹಲವು ತಿಂಗಳು ಕಾಲ ನಂ.1 ಸ್ಥಾನದಲ್ಲಿ ಉಳಿಯುವಂತೆ ಮಾಡಿದ್ದ ಯಶಸ್ವಿ ನಾಯಕ ಸರ್ಫರಾಜ್ ಅಹ್ಮದ್ ಅವರ ಭವಿಷ್ಯ ಬಹುತೇಕ ಕೊನೆಗೊಂಡಂತಾಗಿದೆ.ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಬುಧವಾರ ತನ್ನ ಅಧಿಕೃತ ಒಪ್ಪಂದ ಪಡೆದಿರುವ ಆಟಗಾರರ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಇದೇ ವೇಳೆ ಟೆಸ್ಟ್ ತಂಡಕ್ಕೆ ಅಜರ್ ಅಲಿ ಅವರನ್ನು ಮತ್ತು ಅಂತಾರಾಷ್ಟ್ರೀಯ ಟಿ20 ಮತ್ತು ಏಕದಿನ ಕ್ರಿಕೆಟ್ ತಂಡಗಳಿಗೆ ಯುವ ಬ್ಯಾಟ್ಸ್‌ಮನ್ ಬಾಬ್ ಆಜಮ್ ಅವರನ್ನು ನಾಯಕರನ್ನಾಗಿ ಆಯ್ಕೆ ಮಾಡಿದೆ.
ಇದಕ್ಕೂ ಮೊದಲು ಟೆಸ್ಟ್ ಮತ್ತು ಟಿ20 ತಂಡಗದಲ್ಲಿ ಸ್ಥಾನ ಕಳೆದುಕೊಂಡಿದ್ದ ಅನುಭವಿ ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ಸರ್ಫರಾಜ್ ಅಹ್ಮದ್ ಅವರನ್ನು ಈಗ ಏಕದಿನ ಕ್ರಿಕೆಟ್ ತಂಡದಿಂದಲೂ ಹೊರಗಿಡಲಾಗಿದೆ. 2019ರ ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ತಂಡ ನಾಕ್‌ಔಟ್ ಹಂತಕ್ಕೆ ತಲುಪಲು ವಿಫಲವಾಗಿತ್ತು. ಇದಕ್ಕೆ ಸರ್ಫರಾಜ್ ಅಹ್ಮದ್ ಅವರನ್ನು ಬಲಿಪಶು ಮಾಡಲಾಗಿತ್ತು."ಅಜರ್ ಅಲಿ ಮತ್ತು ಬಾಬರ್ ಆಜಮ್‌ಗೆ ನಾಯಕತ್ವದಲ್ಲಿ ಮುಂದುವರಿಯುವ ಅವಕಾಶ ಸಿಕ್ಕಿರುವುದಕ್ಕೆ ಶುಭಾಶಯ ಹೇಳಬಯಸುತ್ತೇನೆ. ಆಟಗಾರರಿಗೆ ತಮ್ಮ ಭವಿಷ್ಯದ ದಾರಿ ರೂಪಿಸಿಕೊಳ್ಳಲು ನಾಯಕತ್ವದ ಅಗತ್ಯತೆ ಇತ್ತು. ಹೀಗಾಗಿ ಇದೊಂದು ಉತ್ತಮ ನಿರ್ಧಾರವಾಗಿದೆ," ಎಂದು ಪಾಕಿಸ್ತಾನ ತಂಡ ಮುಖ್ಯ ಆಯ್ಕೆಗಾರ ಮತ್ತು ಮುಖ್ಯ ಕೋಚ್ ಮಿಸ್ಬಾ ಉಲ್ ಹಕ್ ಹೇಳಿರುವುದಾಗಿ ಪಿಸಿಬಿ ಹೇಳಿಕೆ ಬಿಡುಗಡೆ ಮಾಡಿದೆ.