ಲಕ್ನೋ, ಮೇ 9,1992ರ ಬಾಬರಿ ಮಸ್ಜಿದ್ ಧ್ವಂಸ ಪ್ರಕರಣದ ವಿಚಾರಣೆಯನ್ನು ಆಗಸ್ಟ್ 31ರೊಳಗೆ ಮುಗಿಸುವಂತೆ ಸುಪ್ರೀಂಕೋರ್ಟ್ ನೀಡಿರುವ ಸೂಚನೆಯ ಹಿನ್ನೆಲೆಯಲ್ಲಿ ಇಲ್ಲಿನ ಸಿಬಿಐ ನ್ಯಾಯಾಲಯ, ದೈನಂದಿನ ವಿಚಾರಣೆ ಮತ್ತು ಆರೋಪಿಗಳ ಹೇಳಿಕೆಗಳನ್ನು ವೀಡಿಯೋ ಕಾನ್ಫರೆನ್ಸಿಂಗ್ ಮೂಲಕ ದಾಖಲಿಸಲು ಸಿದ್ಧತೆ ನಡೆಸುತ್ತಿದೆ.ನ್ಯಾಯಾಧೀಶ ಎಸ್. ಕೆ. ಯಾದವ್ ಅವರ ವಿಶೇಷ ಸಿಬಿಐ ನ್ಯಾಯಾಲಯವು ಈ ಪ್ರಕರಣವನ್ನು ಒಂದು ದಶಕದಿಂದ ವಿಚಾರಣೆ ನಡೆಸುತ್ತಿದೆ. ಆದರೆ ಆರೋಪಿಗಳು ತಮ್ಮ ಹೇಳಿಕೆಗಳನ್ನು ದಾಖಲಿಸಲು ನ್ಯಾಯಾಲಯಕ್ಕೆ ಇನ್ನೂ ಹಾಜರಾಗದ ಹಿನ್ನೆಲೆಯಲ್ಲಿ ಪ್ರಕರಣದ ವಿಚಾರಣೆ ಮುಕ್ತಾಯವಾಗಿಲ್ಲ.
ಸುಪ್ರೀಂಕೋರ್ಟ್‌ನ ಕಠಿಣ ಸೂಚನೆಗಳ ಬಳಿಕ ವಿಚಾರಣಾ ನ್ಯಾಯಾಲಯ ಮಾಜಿ ಉಪ ಪ್ರಧಾನಿ ಲಾಲ್ ಕೃಷ್ಣ ಅಡ್ವಾಣಿ, ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಕಲ್ಯಾಣ್ ಸಿಂಗ್, ಬಿಜೆಪಿ ನಾಯಕರಾದ ಮುರಳಿ ಮನೋಹರ ಜೋಷಿ, ಉಮಾ ಭಾರತಿ ಮತ್ತಿತರ ಬಿಜೆಪಿ ನಾಯಕರು ಸೇರಿದಂತೆ 33 ಆರೋಪಿಗಳ ಹೇಳಿಕೆ ದಾಖಲಿಸುವ ಪ್ರಯತ್ನ ನಡೆಸುತ್ತಿದೆ.ಇದಕ್ಕೂ ಮೊದಲು ಏಪ್ರಿಲ್ 18 ರೊಳಗೆ ವಿಚಾರಣೆಯನ್ನು ಪೂರ್ಣಗೊಳಿಸುವಂತೆ ವಿಶೇಷ ನ್ಯಾಯಾಲಯಕ್ಕೆ (ಅಯೋಧ್ಯೆ ) ಸುಪ್ರೀಂಕೋರ್ಟ್ ಸೂಚಿಸಿತ್ತು. ಆದರೆ ಲಾಕ್‌ಡೌನ್ ಕಾರಣ ನ್ಯಾಯಾಧೀಶರು ವಿಸ್ತರಣೆಯನ್ನು ಕೋರಿದ್ದರು.ವಿಶೇಷ ನ್ಯಾಯಾಧೀಶರ ಮನವಿಯ ಮೇರೆಗೆ ನ್ಯಾಯಾಲಯವು ಶುಕ್ರವಾರ ಆಗಸ್ಟ್ 31 ರೊಳಗೆ ವಿಚಾರಣೆಯನ್ನು ಪೂರ್ಣಗೊಳಿಸುವಂತೆ ಸಮಯವನ್ನು ವಿಸ್ತರಿಸಿದೆ.ಲಾಕ್‌ಡೌನ್‌ಗೆ ಮುಂಚಿತವಾಗಿ ದೈನಂದಿನ ವಿಚಾರಣೆಗೆ ಮುಂದಾಗಿದ್ದ ವಿಚಾರಣಾ ನ್ಯಾಯಾಲಯವು 294ನೇ ಸಾಕ್ಷಿ ಎಂ.ನಾರಾಯಣನ್ ಅವರ ಹೇಳಿಕೆಯನ್ನು ದಾಖಲಿಸುವ ಪ್ರಕ್ರಿಯೆಯನ್ನು ಕಳೆದ ಮಾರ್ಚ್ ಮೊದಲ ವಾರದಲ್ಲಿ ಪೂರ್ಣಗೊಳಿಸಿತ್ತು.
ಈ ಪ್ರಕರಣದಲ್ಲಿ ಸಿಬಿಐ ಪರವಾಗಿ ನಾರಾಯಣನ್ ಕೊನೆಯ ಸಾಕ್ಷಿಯಾಗಿದ್ದು, ಅವರು ಡಿಸೆಂಬರ್ 6,1992ರಂದು ರಾಮ್ ಜನ್ಮಭೂಮಿ ಪೊಲೀಸ್ ಠಾಣೆ ಎಸ್‌ಎಚ್‌ಒ ಮತ್ತು ರಾಮ್‌ಜನ್ಮಭೂಮಿ ಚೌಕಿ ಉಸ್ತುವಾರಿಯಾಗಿದ್ದರು. ನ್ಯಾಯಾಲಯವು ಈಗ ಸಿಆರ್‌ಪಿಸಿಯ ಸೆಕ್ಷನ್ 313 ರ ಅಡಿಯಲ್ಲಿ ಆರೋಪಿಗಳ ಹೇಳಿಕೆಗಳನ್ನು ಅಗತ್ಯವಿದ್ದರೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ದಾಖಲಿಸಬೇಕಾಗುತ್ತದೆ.ಮಸೀದಿ ಧ್ವಂಸಗೊಳಿಸಿದ ಘಟನೆಗೆ ಸಂಬಂಧಿಸಿದಂತೆ ಒಟ್ಟು 48 ಎಫ್‌ಐಆರ್‌ಗಳನ್ನು ನೋಂದಾಯಿಸಲಾಗಿದ್ದು, ಇದರಲ್ಲಿ ಸಿಬಿ-ಸಿಐಡಿ ತನಿಖೆ ನಡೆಸಿ ನಂತರ ಅದನ್ನು ಸಿಬಿಐಗೆ ಹಸ್ತಾಂತರಿಸಲಾಯಿತು. ನಂತರ, ಮೇ 31,2017 ರಂದು ಸಿಬಿಐ 49 ಆರೋಪಿಗಳ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಿದ್ದು, ಅವರಲ್ಲಿ 16 ಮಂದಿ ಸಾವನ್ನಪ್ಪಿದ್ದಾರೆ.
ಸುಪ್ರೀಂ ಕೋರ್ಟ್ ಕಳೆದ ವರ್ಷ ವಿಶೇಷ ನ್ಯಾಯಾಧೀಶರಿಗೆ ತನ್ನ ತೀರ್ಪನ್ನು ಒಂಬತ್ತು ತಿಂಗಳ ಅವಧಿಯಲ್ಲಿ ನೀಡುವಂತೆ ನಿರ್ದೇಶಿಸಿದ್ದರಿಂದ 2020 ರ ಕೊನೆಯಲ್ಲಿ ನ್ಯಾಯಾಲಯದ ತೀರ್ಪು ನಿರೀಕ್ಷಿಸಲಾಗಿತ್ತು. ಆದರೆ ಇದೀಗ ಲಾಕ್‌ಡೌನ್‌ನಿಂದಾಗಿ ಅದು ಕೂಡ ವಿಳಂಬವಾಗುವ ಸಾಧ್ಯತೆ ಇದೆ.