ಬಿಜೆಪಿ ಸರ್ಕಾರ ಟೇಕಾಫ್ ಆಗಿರುವ ಬಗ್ಗೆ ಬಿಎಸ್ವೈ ಮಾತನಾಡಲಿ: ಎಚ್.ಡಿ.ಕೆ

 ಹಾಸನ, ಆ 12     ಕೇಂದ್ರ ಗೃಹಸಚಿವ ಅಮಿತ್ ಷಾ ರಾಜ್ಯದಲ್ಲಿನ ನೆರೆ ಪರಿಸ್ಥಿತಿಯನ್ನು ಕಂಡೂ ಯಾವುದೇ ಪ್ರತಿಕ್ರಿಯೆ ಹಾಗೂ ಭರವಸೆ ನೀಡದೇ ಸುಮ್ಮನೆ ಹಿಂತಿರುಗಿರುವುದು ಸರಿಯಲ್ಲ ಎಂದು ಮಾಜಿ ಮುಖ್ಯಮಂತ್ರಿ, ಜೆಡಿಎಸ್ ಶಾಸಕಾಂಗ ನಾಯಕ ಎಚ್ ಡಿ ಕುಮಾರಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಹಿಂದೆಂದೂ ಇಷ್ಟೊಂದು ದೊಡ್ಡಮಟ್ಟದ ನೆರೆ ಪ್ರವಾಹ ಆಗಿರಲಿಲ್ಲ. ಬಿ.ಎಸ್.ಯಡಿಯೂರಪ್ಪ ಕಳೆದ ಬಾರಿ ಮುಖ್ಯಮಂತ್ರಿಯಾಗಿದ್ದಾಗಲೂ ಉತ್ತರ ಕರ್ನಾಟಕ ಭಾಗದಲ್ಲಿ ಪ್ರವಾಹ ಉಂಟಾಗಿತ್ತು. ಬೆಳಗಾವಿ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಭಾರೀ ಹಾನಿಯುಂಟಾಗಿದ್ದು, ಕನಿಷ್ಠ ಒಂದು ತಿಂಗಳು ಇಲ್ಲಿ ಕ್ಯಾಂಪ್ ಮಾಡಿ ತಂಗಿದರೂ ಸಹ ನಷ್ಟಪೀಡಿತ ಗ್ರಾಮಗಳಿಗೆ ತೆರಳಲು ಸಾಧ್ಯವಾಗುವುದಿಲ್ಲ. ಅಷ್ಟರ ಮಟ್ಟಿಗೆ ಈ ಭಾಗದಲ್ಲಿ ನಷ್ಟವುಂಟಾಗಿದೆ. ಕೊಡಗು, ವಿರಾಜಪೇಟೆ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿಯೂ ಹೆಚ್ಚು  ಪ್ರವಾಹವಾಗಿದೆ. ಅನಾರೋಗ್ಯದ ನಡುವೆಯೂ ಸಂಕಷ್ಟದಲ್ಲಿರುವ ಜನರ ಸಮಸ್ಯೆ ಆಲಿಸುವುದು ನನ್ನ ಜವಾಬ್ದಾರಿ ಎಂದು ನಂಬಿದವನು ನಾನು. ಪ್ರವಾಹ ಪರಿಸ್ಥಿತಿ ಬಗ್ಗೆ ಸರ್ಕಾರದ ನಡೆ ಕುರಿತು ಪ್ರಶ್ನಿಸುವುದಿಲ್ಲ. ಇಂತಹ ಸಂದರ್ಭದಲ್ಲಿ ರಾಜಕೀಯ ಬೆರೆಸುವುದು ಸರಿಯಲ್ಲ ಎಂದು ಕುಮಾರಸ್ವಾಮಿ ಹೇಳಿದರು. ರಾಜ್ಯದಲ್ಲಿ 4-5 ಲಕ್ಷ ಕುಟುಂಬಗಳು ಮನೆಬಿಟ್ಟು ಉಟ್ಟಬಟ್ಟೆಯಲ್ಲಿಯೇ ಬೇರೆ ಕಡೆ ಬಂದಿದ್ದಾರೆ. ಪ್ರವಾಹ ಪರಿಸ್ಥಿತಿಯನ್ನು ಅವಲೋಕಿಸಿದ ಕೇಂದ್ರ ಗೃಹ ಸಚಿವರು ಕೇಂದ್ರದ ನಿಲುವನ್ನು ಪ್ರಕಟಿಸಬೇಕಿತ್ತು. ಯಡಿಯೂರಪ್ಪ ಅಮಿತ್ ಷಾ ಅವರಿಗೆ ನೆರೆ ಸಂತ್ರಸ್ತರಿಗೆ ಹೆಚ್ಚಿನ ಅನುದಾನ ನೀಡುವಂತೆ ಮನವಿ ಮಾಡಿದ್ದಾರೆ. ಆದರೆ, ಅವರು ಈ ಬಗ್ಗೆ ಯಾವುದೇ ಹೇಳಿಕೆ ನೀಡದೇ ಹಿಂದಿರುಗಿರುವುದು ಸರಿಯಲ್ಲ. ಹಿಂದೆ ಮುಖ್ಯಮಂತ್ರಿಯಾಗಿದ್ದಾಗ ಕೇಂದ್ರದಿಂದ ನನಗಾದ ಅನುಭವ ಈಗ ಯಡಿಯೂರಪ್ಪನವರಿಗೆ ಆಗಿದೆ. ಕೇಂದ್ರ ಸರ್ಕಾರ ರಾಜ್ಯದ ಜನರಿಗೆ ಭರವಸೆ ನೀಡಿದ್ದರೆ ಒಂದು ಸಾಂತ್ವನ ಸಿಗುತ್ತಿತ್ತು ಎಂದರು. ಹಾಸನ ಜಿಲ್ಲೆಯಲ್ಲಿ ಆಲೂಗಡ್ಡೆ ಮತ್ತು ಕಾಫಿ ಬೆಳೆ ಸಂಪೂರ್ಣ ನಾಶವಾಗಿದೆ. ನೆರೆ, ಅತಿವೃಷ್ಟಿಯಿಂದಾಗಿರುವ ನಷ್ಟವನ್ನು ಅಂದಾಜು ಮಾಡಲು ಒಂದು ತಿಂಗಳಿಗಿಂತಲೂ ಹೆಚ್ಚು ಸಮಯವೇ ಬೇಕಾಗಬಹುದು. ರಾಜ್ಯ ಸರ್ಕಾರದಲ್ಲಿ ಸಚಿವರೇ ಇಲ್ಲ. ಹೀಗಾಗಿ ಅಧಿಕಾರಿಗಳು ಶಾಸಕರ ಮಾತು ಕೇಳುತ್ತಾರೆಯೋ ಇಲ್ಲವೋ ಗೊತ್ತಿಲ್ಲ ಎಂದು ಮಾರ್ಮಿಕವಾಗಿ ನುಡಿದರು. ಅಧಿಕಾರಿಗಳ ಸ್ಥಳ ನಿಯೋಜನೆ ಬಿಡ್ಡಿಂಗ್ ಪ್ರಕ್ರಿಯೆಯನ್ನು ಮುಂದಕ್ಕೆ ಹಾಕಿ ವಾಸ್ತವ ಪರಿಸ್ಥಿತಿಯನ್ನು ಸರಿಪಡಿಸಿಕೊಳ್ಳಬೇಕು.ಅಧಿಕಾರಿಗಳ ವರ್ಗಾವಣೆಯಲ್ಲಿ ಬಿಜೆಪಿ ಕಚೇರಿ ಮಾರುಕಟ್ಟೆಯಾಗಿದೆ. ಆದರೆ ತಮ್ಮ ಅವಧಿಯಲ್ಲಿ ಹೀಗಾಗಿರಲಿಲ್ಲ. ತಮ್ಮ ಸರ್ಕಾರದಲ್ಲಿ ನೇಮಿಸಿದ್ದ ಅಧಿಕಾರಿಗಳೇ ಈಗ ಯಡಿಯೂರಪ್ಪ ಅವರ ಜೊತೆ ನೆರೆ ಸಂದರ್ಭದಲ್ಲಿ ಕೆಲಸ ಮಾಡುತ್ತಿರುವುದರಿಂದ ಸರ್ಕಾರದ ಮಾನಮರ್ಯಾದೆ ಉಳಿದಿದೆ ಎಂದು ಕುಮಾರಸ್ವಾಮಿ ಕುಟುಕಿದರು. ನೆರೆ ಸಂತ್ರಸ್ತರಿಗೆ ಇನ್ನೂ ಸರ್ಕಾರ ಪರಿಹಾರ ನೀಡಿಲ್ಲ. ಎನ್ ಡಿಆರ್ ಎಫ್ ಗೈಡ್ ಲೈನ್  ಪ್ರಕಾರವಾದರೂ ಪರಿಹಾರ ನೀಡಬೇಕಿತ್ತು. ಅದು ಆಗಿಲ್ಲ. ಯಡಿಯೂರಪ್ಪ ಅವರಿಗೆ ದೆಹಲಿಯಲ್ಲಿ ಎಷ್ಟರಮಟ್ಟಿಗೆ ಮರ್ಯಾದೆ ಇದೆಯೋ ಗೊತ್ತಿಲ್ಲ ಎಂದು ಲೇವಡಿ ಮಾಡಿದರು. ಇನ್ನೂ ಸಚಿವ ಸಂಪುಟ ರಚನೆಯಾಗಿಲ್ಲ. ಆ.16 ರಂದು ಸಂಪುಟ ವಿಸ್ತರಣೆ ಎನ್ನುತ್ತಿದ್ದಾರಾದರೂ ಅದು ಯಾವಾಗಲೋ ಎಂದು ಅನುಮಾನ ವ್ಯಕ್ತಪಡಿಸಿದರು. ನೆರೆ ಅತಿವೃಷ್ಟಿ ಕುರಿತ ಚರ್ಚೆಗೆ ಯಡಿಯೂರಪ್ಪ ಆದಷ್ಟು ಬೇಗ ವಿಪಕ್ಷಗಳ ಮುಖಂಡರ ಸಭೆ ಕರೆಯಬೇಕು ಎಂದು ಆಗ್ರಹಿಸಿದರು. ನೆರೆ ಸಂತ್ರಸ್ತರಿಗೆ ಹೊಸ ಜೀವನ ನೀಡುವ ಮೂಲಕ ಉತ್ತಮ ಕೆಲಸ ಮಾಡಬೇಕು. ತಮ್ಮ ಅವಧಿಯಲ್ಲಿ ಸರ್ಕಾರ ಟೇಕಾಫ್ ಆಗಿದೆ ಎನ್ನುತ್ತಿದ್ದ ಯಡಿಯೂರಪ್ಪ ಈಗ ಬಿಜೆಪಿ ಸರ್ಕಾರ ಟೇಕಾಫ್ ಆಗಿದೆಯಾ ಎಂದು ಅವರೇ ಸ್ಪಷ್ಟಪಡಿಸಬೇಕು. ಸರ್ಕಾರ ಟೇಕಾಫ್ ಆಗೋದು ಬಿಡ್ಡಿಂಗ್ ನಲ್ಲಿ ಅಲ್ಲ., ಕೆಲಸದಲ್ಲಿ ಟೇಕಾಫ್ ಆಗಬೇಕು ಎಂದು ಕುಮಾರಸ್ವಾಮಿ ತಿರುಗೇಟು ನೀಡಿದರು. ನಮ್ಮ ಸರ್ಕಾರದ ಅವಧಿಯಲ್ಲಿ ಎಷ್ಟು ಕೆಲಸಗಳಾಗಿವೆ ಎಂಬುದನ್ನು ಕಡತ ತೆಗೆದು ನೋಡಲಿ. ಕೇಂದ್ರದಿಂದ ತಕ್ಷಣಕ್ಕೆ 4 ರಿಂದ 5 ಸಾವಿರ ಕೋಟಿ ಹಣ ಬಿಡುಗಡೆ ಮಾಡಬೇಕು.ನಮ್ಮ ಸರ್ಕಾರದ ಅವಧಿಯಲ್ಲಾದ ಕೆಲಸಗಳ ಅನುದಾನವನ್ನಾದರೂ ಕೇಂದ್ರ ಬಿಡುಗಡೆ ಮಾಡಲಿ. ರೈತರ ಸಾಲಮನ್ನಾ ಅಡಿಯಲ್ಲಿನ ಹಣವನ್ನ ಪ್ರಕೃತಿ ವಿಕೋಪಕ್ಕೆ ವರ್ಗಾವಣೆ ಮಾಡಲಿ. ಸರ್ಕಾರದ ಬೊಕ್ಕಸವನ್ನು ರಾಜ್ಯದ ಜನರು ಕಾಪಾಡುತ್ತಾರೆ. ಕೆಲಸ ಮಾಡುವ ವಿಷಯದಲ್ಲಿ ಯಡಿಯೂರಪ್ಪ ಅವರನ್ನು ಆ ದೇವರೇ ಕಾಪಾಡಬೇಕು. ಸರ್ಕಾರದ ಬಿಡ್ಡಿಂಗ್ ಬಗ್ಗೆ ತನಿಖೆಯಾಗಲಿ ಎಂದರು.