ಬಿಎಂಟಿಸಿ ಸಿಬ್ಬಂದಿಗೆ ಹೊಸ ಮಾರ್ಗಸೂಚಿ ಪ್ರಕಟ

ಬೆಂಗಳೂರು, ಮೇ 18,ನಾಳೆಯಿಂದ ಬಿಎಂಟಿಸಿ ಬಸ್‌ಗಳ ಸಂಚಾರಕ್ಕೆ ಸರ್ಕಾರ ಅವಕಾಶ ಮಾಡಿಕೊಟ್ಟ ಹಿನ್ನೆಲೆಯಲ್ಲಿ  ಬಿಎಂಟಿಸಿ ಸಿಬ್ಬಂದಿಗಳಿಗೆ ಹೊಸ ಮಾರ್ಗಸೂಚಿ ಹೊರಡಿಸಲಾಗಿದೆ.ಬಿಎಂಟಿಸಿ  ಕಂಡಕ್ಟರ್ ಹಾಗೂ ಡ್ರೈವರ್, ತಾಂತ್ರಿಕ ಸಿಬ್ಬಂದಿ ಡಿಪೋಗಳ ಅಧಿಕಾರಿಗಳಿಗೆ ವಿಶೇಷವಾಗಿ  ಮಾರ್ಗಸೂಚಿ ಹೊರಡಿಸಲಾಗಿದ್ದು, ಮಾರ್ಗಸೂಚಿಯಲ್ಲಿ ಪ್ರತಿಯೊಬ್ಬ ಸಿಬ್ಬಂದಿಯು ವೈಯಕ್ತಿಕ  ಶುಚಿತ್ವಕ್ಕೆ ಮೊದಲ ಆದ್ಯತೆ ಕೊಡಬೇಕು. ಕರ್ತವ್ಯಕ್ಕೆ ಹಾಜರಾಗುವ ಪ್ರತಿಯೊಬ್ಬರು ಮಾಸ್ಕ್  ಧರಿಸಿದರೆ ಮಾತ್ರ ಪ್ರವೇಶ ಕಲ್ಪಿಸಲಾಗಿದೆ. ಕರ್ತವ್ಯಕ್ಕೆ ಹಾಜರಾಗುವ ಪ್ರತಿ ಸಿಬ್ಬಂದಿಯನ್ನು ಪ್ರವೇಶ  ದ್ವಾರ ಬಳಿಯೇ ಥರ್ಮಲ್ ಪರೀಕ್ಷೆಗೆ ಒಳ ಪಡಿಸಬೇಕು ಎಂದು ಸೂಚಿಸಲಾಗಿದೆ.ಸಾರಿಗೆ ನೌಕರರು ಇತರೆ  ವ್ಯಕ್ತಿಗಳೊಂದಿಗೆ ವ್ಯವಹರಿಸುವಾಗ ಕನಿಷ್ಠ ಆರು ಅಡಿ ಸಾಮಾಜಿಕ ಅಂತರವನ್ನು  ಪಾಲಿಸಬೇಕು. ಎಲ್ಲಾ ಶಾಖೆಗಳಲ್ಲಿಯೂ ಸ್ಯಾನಿಟೈಸರ್ ಮತ್ತು  ಸೋಪ್ ವ್ಯವಸ್ಥೆ  ಕಲ್ಪಿಸಬೇಕು ಹಾಗೂ ಪ್ರತಿಯೊಬ್ಬ ಸಿಬ್ಬಂದಿಯೂ ಮಾರ್ಗಸೂಚಿಯಲ್ಲಿನ ನಿಯಮಾವಳಿಗಳನ್ನು  ಕಟ್ಟು ನಿಟ್ಟಾಗಿ ಪಾಲಿಸುವಂತೆ ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕರು ಸೂಚಿಸಿದ್ದಾರೆ.