ತ್ರಿಪುರಾದಲ್ಲಿ ಬಿಜೆಪಿ ಕಾರ್ಯಕರ್ತರಿಂದ ದಾಳಿ: 12 ಸಿಪಿಐಎಂ ಕಾರ್ಯಕರ್ತರಿಗೆ ಗಾಯ

 ಅಗರ್ತಲಾ, ನವೆಂಬರ್ 18 :      ಮಹಿಳಾ ನಾಯಕಿ ಸೇರಿದಂತೆ ಸಿಪಿಐ (ಎಂ) ಪಕ್ಷದ ಕಾರ್ಯಕರ್ತರು ತೆರಳುತ್ತಿದ್ದ ಬಸ್ ಮೇಲೆ ಬಿಜೆಪಿ  ಕಾರ್ಯಕರ್ತರು ನಡೆಸಿದ ದಾಳಿಯಲ್ಲಿ 12ಕ್ಕೂ ಅಧಿಕ ಸಿಪಿಐಎಂ ಕಾರ್ಯಕರ್ತರು ಗಾಯಗೊಂಡಿರುವ ಘಟನೆ ಪೂರ್ವ ಅಗರ್ತಲಾದ ಖಾಯೆಪುರದಲ್ಲಿ ನಡೆದಿದೆ.  ಸಿಪಿಐ (ಎಂ) ನ ಮಿಲಿ ದೇಬ್ಬರ್ಮಾ ಜಿಲ್ಲಾ ಸಮಿತಿ ಸದಸ್ಯನ ಮೇಲೆ ಇಟ್ಟಿಗೆ ಎಸೆದಿದ್ದರಿಂದ ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.  ನಿನ್ನೆ ಸಂಜೆ ಖೈಯೆಪುರ ಮಾರುಕಟ್ಟೆ ಪ್ರದೇಶದಲ್ಲಿ ಸಿಪಿಐ (ಎಂ) ಪಕ್ಷದ ಕಚೇರಿ ಮುಂಭಾಗ ಈ ಘಟನೆ ನಡೆದಿದೆ.  ಸಭೆಯ ನಂತರ ಪಕ್ಷದ ಕಾರ್ಯಕರ್ತರು ವಾಹನದಲ್ಲಿ ಬರುತ್ತಿದ್ದಾಗ ದುಷ್ಕರ್ಮಿಗಳು ಈ ವಾಹನದ ಮೇಲೆ ದಾಳಿ ನಡೆಸಿದ್ದು, ವಾಹನ ಭಾಗಶಃ ಹಾನಿಯಾಗಿದೆ. ಪಕ್ಷದ ಕಾರ್ಯಕರ್ತರನ್ನು ರಕ್ಷಿಸುವ ಸಲುವಾಗಿ ಚಾಲಕ ನೇರವಾಗಿ ಬಸ್ ಅನ್ನು ಪೂರ್ವ ಅಗರ್ತಲಾ ಪೊಲೀಸ್ ಠಾಣೆಗೆ ಚಲಾಯಿಸಿದ್ದಾನೆ. ಗಾಯಗೊಂಡ ಪಕ್ಷದ ಕಾರ್ಯಕರ್ತರನ್ನು ಜಿಬಿಪಿ ಆಸ್ಪತ್ರೆಗೆ ದಾಖಲಿಸಲಾಗಿದೆ.  ಇದು ಸ್ಥಳೀಯ ಬಿಜೆಪಿ ಕಾರ್ಯಕರ್ತರ ಯೋಜಿತ ದಾಳಿ ಎಂದು ಸಿಪಿಐ (ಎಂ) ರಾಜ್ಯ ಸಮಿತಿ ಸದಸ್ಯ ಪಬಿತ್ರಾ ಕಾರ್ ಆರೋಪಿಸಿದ್ದಾರೆ. ಇಂದು ಸಂಜೆ ಪಕ್ಷದ ಸಭೆ ನಡೆಸಲು ನಮಗೆ ಪೊಲೀಸರಿಂದ ಎಲ್ಲ ಅಗತ್ಯ ಅನುಮತಿ ದೊರೆತಿತ್ತು. ನಮ್ಮ ಸಭೆ ಮಧ್ಯಾಹ್ನ 3: 15 ಕ್ಕೆ ಪ್ರಾರಂಭವಾಗಿ ಮಧ್ಯಾಹ್ನ 3:45 ಕ್ಕೆ ಕೊನೆಗೊಂಡಿತು. ನಮ್ಮ ಪಕ್ಷದ ಕಾರ್ಯಕರ್ತರು ಬಸ್ಗೆ ಹತ್ತಲು ಪ್ರಾರಂಭಿಸಿದ ಕೂಡಲೇ ಬಿಜೆಪಿ ಕಾರ್ಯಕರ್ತರು ಇಟ್ಟಿಗೆಯಿಂದ ದಾಳಿ ನಡೆಸಿದರು. ಬಸ್ನ ಮೇಲೆ ಕಲ್ಲು ತೂರಾಟ ನಡೆಸಿದರು.  ಬಸ್ನ ಚಾಲಕನಿಗೂ ಗಾಯಗಳಾಗಿದ್ದು, ಅವರು ಬಸ್ಸನ್ನು ಪೊಲೀಸ್ ಠಾಣೆಗೆ ತಲುಪುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಪಬಿತ್ರಾ ತಿಳಿಸಿದ್ದಾರೆ. ಆದರೆ, ಕಾರ್ಯಕ್ರಮ ನಡೆಸಲು ಕಾರ್ಯಕರ್ತರು ಅನುಮತಿ ಪಡೆದಿರಲಿಲ್ಲ ಎಂದು ಪೊಲೀಸರು ಹೇಳಿದ್ದಾರೆ. ಆದರೆ ಬಸ್ ಮೇಲೆ ದಾಳಿ ಮಾಡಿದ ದುಷ್ಕರ್ಮಿಗಳನ್ನು ಪತ್ತೆ ಹಚ್ಚಲು ತನಿಖೆ ಆರಂಭಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.     ಆಡಳಿತಾರೂಢ ಬಿಜೆಪಿ ಕಾರ್ಯಕರ್ತರು ಈ ಘಟನೆಯಲ್ಲಿ ತಮ್ಮ ಪಾತ್ರ ಇಲ್ಲ ಎಂದು ಸ್ಪಷ್ಟಪಡಿಸಿದ್ದು, ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಅವರು ಪೊಲೀಸರನ್ನು ಒತ್ತಾಯಿಸಿದ್ದಾರೆ.