ಜ್ಯೋತಿರಾದಿತ್ಯ ಸಿಂಧಿಯಾ ಸ್ವಾಗತ ಕೋರಿ ಬಿಜೆಪಿ ಫ್ಲೆಕ್ಸ್ ...!

ಭೋಪಾಲ್, ಅ.12:   ಎಐಸಿಸಿ ಪ್ರಧಾನ ಕಾರ್ಯದರ್ಶಿ ಜ್ಯೋತಿರಾದಿತ್ಯ ಸಿಂಧಿಯಾ ಅವರಿಗೆ ಸ್ವಾಗತ ಕೋರಿ ಬಿಜೆಪಿ ಅಳವಡಿಸಿರುವ ಒಂದು ಫ್ಲೆಕ್ಸ್ ಮಧ್ಯಪ್ರದೇಶ ರಾಜ್ಯ ರಾಜಕೀಯದಲ್ಲಿ ವದಂತಿಗಳ ಬಿರುಗಾಳಿಯನ್ನೇ ಸೃಷ್ಟಿಸಿದೆ. ಸಿಂಧಿಯಾ ಅವರು ಬಿಂಡ್ ಜಿಲ್ಲೆಯ ಭೇಟಿಯ ಸಂದರ್ಭದಲ್ಲಿ ಸ್ಥಳೀಯ ಬಿಜೆಪಿ ಮುಖಂಡರೊಬ್ಬರು ಈ ಪ್ಲೆಕ್ಸ್ ಹಾಕಿಸಿದ್ದರು. ಸಿಂಧಿಯಾ ಅವರ ಜೊತೆಗೆ,  ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರೂ ಆಗಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಚಿತ್ರಗಳು  ಅದರಲ್ಲಿ ರಾರಾಜಿಸಿದ್ದವು. ಸಂವಿಧಾನದ 370 ನೇ ವಿಧಿ ರದ್ದುಗೊಳಿಸುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಬೆಂಬಲಿಸಿ ಸ್ಥಳೀಯ ಬಿಜೆಪಿ ಮುಖಂಡ ಹೃದ್ಯೇಶ್  ಶರ್ಮಾ ಈ ಪ್ಲೆಕ್ಸ್  ಅಳವಡಿಸಿದ್ದರು.   ದೇಶದ ಹಿತದೃಷ್ಟಿಯಿಂದ ಸಂವಿಧಾನದ ವಿಧಿ 370 ಅನ್ನು ರದ್ದು ಪಡಿಸಿರುವ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ನಿರ್ಧಾರವನ್ನು ಬೆಂಬಲಿಸಿ ಜ್ಯೊತಿರಾದಿತ್ಯ ಸಿಂಧಿಯಾ ಈ ಮೊದಲು ಟ್ವೀಟ್ ಮಾಡಿದ್ದರು. ಅಲ್ಲದೆ ಕಾಂಗ್ರೆಸ್ ನೀತಿಗೆ ವಿರುದ್ಧ ಅವರು ಮಾತನಾಡಿದ್ದರು.  ಈ ಬೆಳವಣಿಗೆಗಳು ಕಾಂಗ್ರೆಸ್  ಪಕ್ಷದಲ್ಲಿ ತೀವ್ರ ಚರ್ಚೆಗೆ ಗ್ರಾಸ ಒದಗಿಸಿತ್ತು.   ಅಲ್ಲದೆ,  ಬಿಂಡ್ ಜಿಲ್ಲಾ  ಪ್ರವಾಸದ ಸಂದರ್ಭದಲ್ಲಿ ಸಿಂಧಿಯಾ ಅವರು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ದ ಟೀಕೆ ಮಾಡಿದ್ದರು.   ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್  2 ಲಕ್ಷ ರೂ ವರೆಗಿನ  ರೈತರು ಪಡೆದುಕೊಂಡಿರುವ  ಸಾಲ ಮನ್ನಾ ಮಾಡುವುದಾಗಿ ಚುನಾವಣಾ  ಭರವಸೆ ನೀಡಿದ್ದೆವು. ಆದರೆ, ರಾಜ್ಯ ಸರ್ಕಾರ  ಕೇವಲ  50 ಸಾವಿರ  ರೂ. ಮಾತ್ರ ಸಾಲ ಮನ್ನಾ ಮಾಡಿದೆ ಎಂದು  ಅಸಮದಾನ ವ್ಯಕ್ತಪಡಿಸಿದ್ದರು.  ಈ ಹಿನ್ನೆಲೆಯಲ್ಲಿ  ಅವರ ಮುಂದಿನ ರಾಜಕೀಯ ನಡೆ ಹೇಗಿರಬಹುದು ಎಂಬ ಬಗ್ಗೆ ರಾಜ್ಯ ರಾಜಕಾರಣದಲ್ಲಿ  ವ್ಯಾಪಕ ಚರ್ಚೆಗಳು ಆರಂಭಗೊಂಡಿವೆ.