ನವದೆಹಲಿ, ಅ 04: ಇದೇ 21ರಂದು ನಡೆಯಲಿರುವ ಮಹಾರಾಷ್ಟ್ರ ರಾಜ್ಯ ವಿಧಾನಸಭಾ ಚುನಾವಣೆಯ ಸ್ಪರ್ಧಾಕಾಂಕ್ಷಿಗಳ ಪಟ್ಟಿಯಲ್ಲಿದ್ದ ಪಕ್ಷದ ಪ್ರಮುಖ ಮುಖಂಡರುಗಳಾದ ವಿನೋದ್ ತಾವ್ಡೆ, ಏಕನಾಥ್ ಖಡ್ಸೆ ಮತ್ತು ಪ್ರಕಾಶ್ ಮೆಹ್ತಾ ಅವರಿಗೆ ಬಿಜೆಪಿ ಟಿಕೆಟ್ ನಿರಾಕರಿಸಿದ್ದು, ಎಲ್ಲ ಊಹಾಪೋಹಗಳಿಗೂ ಪೂರ್ಣವಿರಾಮ ಹಾಕಿದೆ. ಪಕ್ಷದ ಕಾರ್ಯಾಧ್ಯಕ್ಷ ಹಾಗೂ ಕೇಂದ್ರ ಚುನಾವಣಾ ಸಮಿತಿ ಸದಸ್ಯಸರೂ ಆಗಿರುವ ಜೆ ಪಿ ನಡ್ಡಾ, ಶುಕ್ರವಾರ ನಾಲ್ಕನೇ ಹಂತದ ಪಟ್ಟಿ ಬಿಡುಗಡೆಗೊಳಿಸಿದ್ದಾರೆ. ಬೋರಿವಲಿಯಿಂದ ಸುನಿಲ್ ರಾಣೆ, ಮುಂಬೈ ಪೂರ್ವ ಘಟ್ಕೋಪಾರ ಕ್ಷೇತ್ರದಿಂದ ಪರಾಗ್ ಶಾ ಅವರನ್ನು ಸ್ಪರ್ಧೆಗಿಳಿಸಲು ಪಕ್ಷ ತೀರ್ಮಾನಿಸಿದೆ. ತಾವ್ಡೆಯವರು ಬೋರಿವಿಲಿಯಿಂದ ಹಾಗೂ ಮೆಹ್ತಾ ಘಟ್ಕೋಪಾರ್ ಪೂರ್ವ ಕ್ಷೇತ್ರಕ್ಕಾಗಿ ಟಿಕೆಟ್ ಪಡೆಯಲು ಪ್ರಯತ್ನಿಸಿದ್ದರು. ಬಿಜೆಪಿಯ ಮಾಜಿ ಮುಂಬೈ ಘಟಕದ ಅಧ್ಯಕ್ಷರಾದ ತಾವ್ಡೆ ಮಹಾರಾಷ್ಟ್ರ ವಿಧಾನ ಪರಿಷತ್ತಿನಲ್ಲಿ ಪ್ರತಿಪಕ್ಷದ ನಾಯಕರಾಗಿದ್ದರು. ಅವರು ಈ ವಾರದ ಆರಂಭದಲ್ಲಿ ರಾಜ್ಯ ಘಟಕ ಬಿಜೆಪಿ ಮುಖ್ಯಸ್ಥ ಚಂದ್ರಕಾಂತ್ ಪಾಟೀಲ್ ಅವರನ್ನು ಭೇಟಿಯಾಗಿ ಟಿಕೆಟ್ ಪಡೆಯುವ ಕುರಿತು ಚರ್ಚೆಸಿದ್ದರು ಎಂದು ವರದಿಯಾಗಿದೆ. ಮಾಜಿ ಸಚಿವ ಏಕನಾಥ್ ಖಡ್ಡೆಯವರಿಗೂ ಸಹ ಟಿಕೆಟ್ ಕೈತಪ್ಪಿದೆ. ಖಡ್ಡೆ ಹಾಗೂ ತಾವ್ಡೆ ಪ್ರಬಲ ನಾಯಕರಾಗಿದ್ದು, ಈ ಹಿಂದೆ ಮುಖ್ಯಮಂತ್ರಿ ಸ್ಥಾನ ಅಲಂಕರಿಸಬಹುದಾದ ನಾಯಕರೆಂದೇ ಬಿಂಬಿತರಾಗಿದ್ದರು. ಮೂವರು ನಾಯಕರ ವಿರುದ್ಧವೂ ಭ್ರಷ್ಟಾಚಾರ ಆರೋಪಗಳಿರುವ ಹಿನ್ನೆಲೆಯಲ್ಲಿ ಬಿಜೆಪಿ ಟಿಕೆಟ್ ನಿರಾಕರಿಸಿದೆ ಎಂದು ಮೂಲಗಳು ತಿಳಿಸಿವೆ.